
ಅಭುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಿನ್ನೆ (ಡಿಸೆಂಬರ್ 16)ರಂದು ಮುಕ್ತಾಯಗೊಂಡಿದೆ. ಕೆಲವು ಅನ್‌ಕ್ಯಾಪ್ಡ್ ಯುವ ಆಟಗಾರರು ಕೋಟಿ ಕೋಟಿ ಹಣ ಪಡೆದರೆ, ಇನ್ನು ಕೆಲವರಿಗೆ ನಿರಾಸೆಯಾಗಿದೆ. ಅದರಲ್ಲಿ, ಕರ್ನಾಟಕ ತಾರಾ ಆಟಗಾರ ಮಯಂಕ್ ಅಗರವಾಲ್ ಕೂಡ ಒಬ್ಬರು.
2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಅವರು, ಸದ್ಯ ಯಾವುದೇ ಫ್ರಾಂಚೈಸಿಗೆ ಬೇಡವಾಗಿದ್ದಾರೆ. ಐಪಿಎಲ್‌ನಲ್ಲಿ ಒಂದು ಶತಕ ಹಾಗೂ 13 ಅರ್ಧ ಶತಕ ಸಿಡಿಸಿರುವ ಅವರು ಗಮನಾರ್ಹ ಪ್ರದರ್ಶನ ತೋರಿದ್ದಾರೆ.
ಕಳೆದ ವರ್ಷ ಕೂಡ ಮಯಂಕ್‌ರನ್ನು ಯಾವುದೇ ಫ್ರಾಂಚೈಸಿ ಪರಿಗಣಿಸಿರಲಿಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಇನ್ನೋರ್ವ ಕನ್ನಡಿಗ ದೇವದತ್ತ ಪಡಿಕ್ಕಲ್ ಗಾಯಗೊಂಡು ತಂಡದಿಂದ ಹೊರಬಿದ್ದಾಗ ಆರ್‌ಸಿಬಿ ತಂಡ ಕೂಡಿಕೊಂಡರು. ಅವರು 4 ಪಂದ್ಯಗಳಿಂದ 95 ರನ್ ಗಳಸುವ ಮೂಲಕ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದರು.
ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರನ್ನು ಉಳಿಸಿಕೊಳ್ಳದೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಮಯಂಕ್ ಅವರು ₹75 ಲಕ್ಷ ಮೂಲ ಬೆಲೆಯೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅವರ ಹೆಸರು ಬಿಡ್‌ಗೆ ಬರಲಿಲ್ಲ ಎಂಬುದು ಗಮನಾರ್ಹ.
369 ಆಟಗಾರರಲ್ಲಿ ಪಟ್ಟಿಯಲ್ಲಿ ಹೆಸರಿದ್ದರೂ ಮಯಂಕ್ ಹೆಸರು ಬಿಡ್‌ನಲ್ಲಿ ಕೂಗಲಿಲ್ಲ
ಹೌದು, ಐಪಿಎಲ್ ಅಂತಿಮಗೊಳಿಸಿದ 369 ಆಟಗಾರರ ಹರಾಜು ಪಟ್ಟಿಯಲ್ಲಿ ಮಯಂಕ್ ಅಗರವಾಲ್ ಅವರ ಹೆಸರಿತ್ತು. ಆದರೆ, ಅವರ ಹೆಸರನ್ನು ಬಿಡ್‌ನಲ್ಲಿ ಕೂಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಕನ್ನಡಿಗ ಮಯಂಕ್ ಹೆಸರು ಬಿಡ್‌ನಲ್ಲಿ ಕಾಣಿಸಿಕೊಳ್ಳದಿರಲು ಪ್ರಮುಖ ಕಾರಣವೆಂದರೆ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರದಿರುವುದು ಎಂದು ತಿಳಿದು ಬಂದಿದೆ.
ಹರಾಜು ಪಟ್ಟಿಯಲ್ಲಿ 71ನೇ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಹೆಸರು ರಿಜಿಸ್ಟರ್ ಆಗಿತ್ತು. ಆದರೆ 8ನೇ ಸುತ್ತಿನ ಬಳಿಕ ಹರಾಜು ಪಟ್ಟಿಯನ್ನು ಮತ್ತೊಮ್ಮೆ ಶಾರ್ಟ್ ಲಿಸ್ಟ್ ಮಾಡಲಾಯಿತು. ಆಗ ಫ್ರಾಂಚೈಸಿಗಳು ಮಯಂಕ್ ಅವರನ್ನು ಖರೀದಿಸಲು ಆಸಕ್ತಿ ತೋರದಿರುವುದರಿಂದ ಅವರ ಹೆಸರನ್ನು ತೆಗೆದು ಹಾಕಲಾಗಿದೆ. ಆ ಕಾರಣಕ್ಕೆ ಅವರ ಹರೆಸರು ಬಿಡ್‌ಗೆ ಬಂದಿಲ್ಲ.
ಹರಾಜಿನ ನಡುವೆ ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಈ ವೇಳೆ 10 ಫ್ರಾಂಚೈಸಿಗಳು ಖರೀದಿಸಲು ಆಸಕ್ತಿ ಹೊಂದಿರುವ ಆಟಗಾರರ ಪಟ್ಟಿಯನ್ನು ಟಿಕ್ ಮಾಡುತ್ತಾರೆ. ಹೀಗೆ ಟಿಕ್ ಮಾಡಿದ ಪಟ್ಟಿಯಲ್ಲಿ ಮಯಂಕ್ ಅಗರವಾಲ್ ಹೆಸರು ಇರಲಿಲ್ಲ. ಇದರಿಂದಾಗಿ ಕನ್ನಡಿಗನ ಹೆಸರು ಹರಾಜಿನಲ್ಲಿ ಕೂಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.