ಪ್ಯಾಟ್ ಕಮಿನ್ಸ್
ನವದೆಹಲಿ: ಇದೇ 17 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭವಾಗಲಿರುವ ಕಾರಣ, ತಮ್ಮ ಆಟಗಾರರನ್ನು ಕಳುಹಿಸಿಕೊಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಐಪಿಎಲ್ ಫ್ರಾಂಚೈಸಿಗಳು ಹೊರದೇಶಗಳ ಕ್ರಿಕೆಟ್ ಮಂಡಳಿಗಳ ಮೇಲೆ ಒತ್ತಡವನ್ನು ತೀವ್ರಗೊಳಿಸಿವೆ.
ವಿದೇಶಿ ಆಟಗಾರರಲ್ಲಿ ಇರುವ ಕಳವಳ ದೂರಮಾಡಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಜೊತೆ ವೈಯಕ್ತಿಕವಾಗಿ ಮಾತನಾಡುವಂತೆ ಐಪಿಎಲ್ ಸಿಒಒ ಹೇಮಂಗ್ ಅಮೀನ್ ಅವರಿಗೆ ಬಿಸಿಸಿಐ ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ.
ಲೀಗ್ ಪುನರಾರಂಭಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಅಂತಿಮಗೊಂಡಿರುವ ಕಾರಣ, ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಮ್ಮ ತಂಡದಲ್ಲಿರುವ ಹೊರದೇಶಗಳ ಆಟಗಾರರನ್ನು ಕರೆಸಲು ಕಾರ್ಯಪ್ರವೃತ್ತವಾಗಿವೆ.
ಭಾರತ– ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ಮೇ 9ರಂದು ಐಪಿಎಲ್ ಪಂದ್ಯಾವಳಿಯನ್ನು ವಾರದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಆದರೆ ಕದನವಿರಾಮ ಘೋಷಣೆಯಿಂದಾಗಿ ಐಪಿಎಲ್ ಪುನರಾರಂಭಕ್ಕೆ ದಾರಿ ಸುಗಮಗೊಂಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾವು, ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ವಿಷಯವನ್ನು ಆಟಗಾರರ ವಿವೇಚನೆಗೆ ಬಿಟ್ಟಿದೆ. ಇಂಥ ವಿಷಯದಲ್ಲಿ ಆಟಗಾರರ ಸಂಘಟನೆಯು ಪಾತ್ರವೇ ಪ್ರಮುಖವಾಗಿರುತ್ತದೆ.
ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ ರಾತ್ರಿ ಪ್ರಕಟಿಸಲಾಗಿದೆ. ನಾವು ವಿದೇಶಿ ಆಟಗಾರರನ್ನು ಸಂಪರ್ಕಿಸಲು ಆರಂಭಿಸಿದ್ದೇವೆ. ಬುಧವಾರ ಬೆಳಿಗ್ಗೆ ಚಿತ್ರಣ ದೊರೆಯಲಿದೆ. ಏನಿದ್ದರೂ ನಮ್ಮ ಪಂದ್ಯ ಇರುವುದು ಮೇ 20ಕ್ಕೆ. ನಮಗೆ ಸಾಕಷ್ಟು ಕಾಲಾವಕಾಶ ಇದೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಹೇಳಿದರು.
ಡೆವಾನ್ ಕಾನ್ವೆ, ರಚಿನ್ ರವೀಂದ್ರ, ಸ್ಯಾಮ್ ಕರನ್, ಜೇಮಿ ಓವರ್ಟನ್, ನೂರ್ ಅಹಮದ್ ಮತ್ತು ಮಥೀಶ ಪಥಿರಾಣ ಸಿಎಸ್‌ಕೆ ತಂಡದಲ್ಲಿರುವ ವಿದೇಶಿ ಆಟಗಾರರಾಗಿದ್ದಾರೆ.
ಐಪಿಎಲ್ 2025 ಪರಿಷ್ಕೃತ ವೇಳಾಪಟ್ಟಿ
ಸ್ಟೊಯಿನಿಸ್ ಅಲಭ್ಯ?:
ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಅದೇ ದೇಶದ ವಿಕೆಟ್ ಕೀಪರ್ ಜೋಸ್ ಇಂಗ್ಲಿಸ್ ಅವರು ಮರಳುವ ಸಾಧ್ಯತೆ ಕಡಿಮೆ. ಅವರ ಮನವೊಲಿಕೆಗೆ ಹೆಡ್ ಕೋಚ್ ರಿಕಿ ಪಾಂಟಿಂಗ್ ಪ್ರಯತ್ನಿಸುತ್ತಿದ್ದಾರೆ.
ಆಸ್ಟ್ರೇಲಿಯಾದವರೇ ಆದ ಕ್ಸೇವಿಯರ್ ಬಾರ್ಟ್ಲೆಟ್, ಆರನ್ ಹಾರ್ಡಿ ಮತ್ತು ಅಫ್ಗಾನಿಸ್ತಾನದ ಅಜ್ಮತ್‌ವುಲ್ಲಾ ಒಮರ್‌ಝೈ, ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಯಾನ್ಸೆನ್ ಮರಳುವ ನಿರೀಕ್ಷೆಯಿದೆ. ತಂಡವು 2014ರ ನಂತರ ಇದೇ ಮೊದಲ ಬಾರಿ ಪ್ಲೇಆಫ್ ತಲುಪುವ ಹಾದಿಯಲ್ಲಿದೆ.
ಸಿಎಸ್‌ಕೆ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವೂ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಆದರೆ ತಂಡವು ಉಳಿದ ಮೂರು ಪಂದ್ಯಗಳಿಗೆ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಆಕ್ರಮಣಕಾರಿ ಆರಂಭ ಆಟಗಾರ ಟ್ರಾವಿಸ್ ಹೆಡ್ ಲಭ್ಯರಾಗಬಹುದೆಂಬ ನಿರೀಕ್ಷೆಯಲ್ಲಿದೆ.
ಪ್ಲೇಆಫ್ ರೇಸ್‌ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ತನ್ನ ತಂಡದಲ್ಲಿರುವ ವಿದೇಶಿ ಆಟಗಾರರ ಸಂಪರ್ಕದಲ್ಲಿದೆ. ವೇಗಿ ಮಿಚೆಲ್ ಸ್ಟಾರ್ಕ್ ಅವರು ತಂಡದ ಪ್ರಮುಖ ಬೌಲರ್ ಆಗಿದ್ದಾರೆ.
ಅಲ್ಪಾವಧಿ: ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಮೇ 25ರಂದು ಫೈನಲ್ ನಡೆಯಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಜೂನ್ 3ರಂದು ಫೈನಲ್ ನಿಗದಿಯಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೂನ್ 11ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಹೀಗಾಗಿ ಲೀಗ್‌ನಲ್ಲಿ ಆಡುವ ಈ ತಂಡಗಳ ಆಟಗಾರರಿಗೆ ಐಪಿಎಲ್ ಮುಗಿಸಿ ತಂಡವನ್ನು ಸೇರಿಕೊಳ್ಳಲು ಅವಧಿ ಕಡಿಮೆಯಿದೆ.
ಜೋಸ್ ಬಟ್ಲರ್‌ಗೆ ದ್ವಂದ್ವ
ಈ ಋತುವಿನಲ್ಲಿ ಗುಜರಾತ್ ಟೈಟನ್ಸ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೂರನೇ ಕ್ರಮಾಂಕದ ಬ್ಯಾಟರ್ ಜೋಸ್ ಬಟ್ಲರ್ ಈಗ ದ್ವಂದ್ವದಲ್ಲಿದ್ದಾರೆ. ಅವರು ಒಂದೊ ರಾಷ್ಟ್ರೀಯ ತಂಡಕ್ಕೆ ಆಡಬೇಕಾಗಿದೆ, ಇಲ್ಲವೇ ಐಪಿಎಲ್‌ನಲ್ಲಿ ಮುಂದುವರಿಯಬೇಕಾಗುತ್ತದೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಇದರಲ್ಲಿ ಬಟ್ಲರ್ ಸ್ಥಾನ ಪಡೆದಿದ್ದಾರೆ. ಸರಣಿಯ ಮೊದಲ ಪಂದ್ಯ ಮೇ 29ರಂದು ನಡೆಯಲಿದೆ.
ಐಪಿಎಲ್‌ನಲ್ಲಿ ಆಡುತ್ತಿರುವ ಎಲ್ಲ ಆಟಗಾರರಿಗೆ ಇಂಗ್ಲೆಂಡ್ ನಿರಾಕ್ಷೇಪಣಾ ಪತ್ರ ನೀಡಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಮೇ 25ರಂದು ಮುಗಿಯಬೇಕಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಜೂನ್ 3ರಂದು ಫೈನಲ್ ನಿಗದಿಯಾಗಿರುವುದರಿಂದ ಅವರು ಈಗ ಯೋಚನೆಗೆ ಸಿಲುಕಿದ್ದಾರೆ. ಐಪಿಎಲ್‌ನ ಲೀಗ್ ಹಂತ ಮೇ 27ರಂದು ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.