ADVERTISEMENT

IPL-2020 | RR vs CSK: ರಾಜಸ್ಥಾನ ರಾಯಲ್ಸ್‌ಗೆ ಸುಲಭ ತುತ್ತಾದ ಸೂಪರ್ ಕಿಂಗ್ಸ್‌

ಪಿಟಿಐ
Published 19 ಅಕ್ಟೋಬರ್ 2020, 18:07 IST
Last Updated 19 ಅಕ್ಟೋಬರ್ 2020, 18:07 IST
ಸ್ಟೀವ್‌ ಸ್ಮಿತ್‌ ಮತ್ತು ಜಾಸ್‌ ಬಟ್ಲರ್‌ ಜೋಡಿ (ಟ್ವಿಟರ್‌ ಚಿತ್ರ)
ಸ್ಟೀವ್‌ ಸ್ಮಿತ್‌ ಮತ್ತು ಜಾಸ್‌ ಬಟ್ಲರ್‌ ಜೋಡಿ (ಟ್ವಿಟರ್‌ ಚಿತ್ರ)   

ಅಬುಧಾಬಿ: ನೀರಸ ಬ್ಯಾಟಿಂಗ್ ಮಾಡಿ ಸಾಧಾರಣ ಮೊತ್ತ ಕಲೆ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ರಾಜಸ್ಥಾನ ರಾಯಲ್ಸ್‌ಗೆ ಸುಲಭ ತುತ್ತಾಯಿತು.

ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ (70; 48 ಎಸೆತ, 7 ಬೌಂಡರಿ, 2 ಸಿಕ್ಸರ್‌) ಅವರ ಅಜೇಯ ಅರ್ಧಶತಕ ಮತ್ತು ಅವರು ನಾಯಕ ಸ್ಟೀವನ್ ಸ್ಮಿತ್ ಜೊತೆಗೂಡಿ ಮುರಿಯದ ನಾಲ್ಕನೇ ವಿಕೆಟ್‌ಗೆ ಸೇರಿಸಿದ 98 ರನ್‌ಗಳು ರಾಜಸ್ಥಾನಕ್ಕೆ ಏಳು ವಿಕೆಟ್‌ಗಳ ಜಯ ತಂದುಕೊಟ್ಟಿತು.

126 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ 28 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಚೆನ್ನೈ ಆಟಗಾರರಲ್ಲಿ ಭರವಸೆ ಮೂಡಿತ್ತು. ಈ ಸಂದರ್ಭದಲ್ಲಿ ನಾಯಕನ ಜೊತೆಗೂಡಿದ ಬಟ್ಲರ್ ಅಬ್ಬರಿಸಿದರು. ಸ್ಮಿತ್ ತಾಳ್ಮೆಯಿಂದ ಉತ್ತಮ ಸಹಕಾರ ನೀಡಿದರು.

ADVERTISEMENT

ಐಪಿಎಲ್‌ನಲ್ಲಿ 200ನೇ ಪಂದ್ಯ ಆಡಿದ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಜೋಡಿ ಸ್ಯಾಮ್ ಕರನ್ ಮತ್ತು ಫಾಫ್ ಡು ಪ್ಲೆಸಿಗೆ ಮೂರು ಓವರ್‌ಗಳಲ್ಲಿ 13 ರನ್ ಸೇರಿಸಲಷ್ಟೇ ಸಾಧ್ಯವಾಯಿತು. ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಫಾಫ್ ಡು ಪ್ಲೆಸಿ ವೇಗಿ ಜೊಫ್ರಾ ಆರ್ಚರ್ ಎಸೆತದಲ್ಲಿ ಔಟಾದರು. ಮತ್ತೆ 13 ರನ್ ಸೇರಿಸುವಷ್ಟರಲ್ಲಿ ಶೇನ್ ವಾಟ್ಸನ್ ಕೂಡ ಮರಳಿದರು.

ಒಂದು ತುದಿಯಲ್ಲಿ ಸ್ಯಾಮ್ ಕರನ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ 22 ರನ್ ಗಳಿಸಿದರು. ಆದರೆ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಎಸೆತದ ಗತಿ ನಿರ್ಣಯಿಸುವಲ್ಲಿ ಎಡವಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಅಂಬಟಿ ರಾಯುಡು ಅವರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ.

56 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡ ತಂಡಕ್ಕೆ ಸ್ವಲ್ಪಮಟ್ಟಿಗೆ ಆಸರೆಯಾದ ಧೋನಿ ಮತ್ತು ರವೀಂದ್ರ ಜಡೇಜ 51 ರನ್ ಸೇರಿಸಿದರು.

18ನೇ ಓವರ್‌ನಲ್ಲಿ ಧೋನಿ ರನ್ ಔಟ್ ಆದರು. ಮೊದಲ ರನ್ ನಿಧಾನವಾಗಿ ಗಳಿಸಿದ ಅವರು ಎರಡನೇ ರನ್ ಗಳಿಸುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಬೇಲ್ಸ್ ಎಗರಿಸಿದರು. ಜಡೇಜ ಕ್ರೀಸ್‌ನಲ್ಲಿ ನೆಲೆಯೂರಿ 30 ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ 35 ರನ್ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರ್‌ ವಿವರ
ಚೆನ್ನೈ ಸೂಪರ್‌ ಕಿಂಗ್ಸ್‌:
20 ಓವರ್‌ಗಳಲ್ಲಿ 5 ವಿಕೆಟ್‌ಗೆ 125 ರನ್‌
ರಾಜಸ್ಥಾನ ರಾಯಲ್ಸ್‌: 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 126 ರನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.