ADVERTISEMENT

IPL-2020 | KKR vs KXIP: ಕೆಎಲ್‌ ಪಡೆಗೆ ಸತತ 5ನೇ ಸೋಲು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:17 IST
Last Updated 10 ಅಕ್ಟೋಬರ್ 2020, 14:17 IST
ಕಿಂಗ್ಸ್ ಇಲವೆನ್‌ ಪಂಜಾಬ್‌ ನಾಯಕ ಕೆಎಲ್ ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ರನ್‌ಗಾಗಿ ಓಡಿದ ಕ್ಷಣ (ಟ್ವಿಟರ್ ಚಿತ್ರ)
ಕಿಂಗ್ಸ್ ಇಲವೆನ್‌ ಪಂಜಾಬ್‌ ನಾಯಕ ಕೆಎಲ್ ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ರನ್‌ಗಾಗಿ ಓಡಿದ ಕ್ಷಣ (ಟ್ವಿಟರ್ ಚಿತ್ರ)   

ಅಬುಧಾಬಿ: ಕೋಲ್ಕತ್ತ ನೈಟ್‌ರೈಡರ್ಸ್ ನೀಡಿದ ಸ್ಪರ್ಧಾತ್ಮಕ ಗುರಿ ಎದುರು ಆರಂಭದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ಕೊನೆಯಲ್ಲಿ ಎಡವಿದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಕೇವಲ 2 ರನ್‌ ಅಂತರದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಈ ತಂಡ ಟೂರ್ನಿಯಲ್ಲಿಸತತ ಐದನೇ ಸೋಲು ಅನುಭವಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ ನಾಯಕ ದಿನೇಶ್‌ ಕಾರ್ತಿಕ್‌ ಮತ್ತು ಆರಂಭಿಕ ಶುಭಮನ್‌ ಗಿಲ್‌ ಬಾರಿಸಿದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿತ್ತು.ಕಿಂಗ್ಸ್‌ ಶಿಸ್ತಿನ ದಾಳಿ ಎದುರುತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶುಭಮನ್‌ 47 ಎಸೆತಗಳಲ್ಲಿ 53 ರನ್‌ ಗಳಿಸಿದರೆ, ಬಿರುಸಾಗಿ ಬ್ಯಾಟ್‌ ಬೀಸಿದ ದಿನೇಶ್‌ 29 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 58 ರನ್‌ ಬಾರಿಸಿದ್ದರು.

ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಮಯಂಕ್‌ ಅಗರವಾಲ್‌ ಮತ್ತು ಕೆಎಲ್‌ ರಾಹುಲ್‌ ಜೋಡಿ 14.2 ಓವರ್‌ಗಳಲ್ಲಿ 115 ರನ್‌ ಗಳಿಸಿತು. ಇದರೊಂದಿಗೆ ಈಆರಂಭಿಕ ಜೋಡಿ, ಟೂರ್ನಿಯಲ್ಲಿ ಎರಡನೇ ಬಾರಿಗೆ ಶತಕದ‌ ಜೊತೆಯಾಟವಾಡಿತು. ಮಯಂಕ್‌ 39 ಎಸೆತಗಳಲ್ಲಿ 56 ರನ್‌ ಗಳಿಸಿ ಔಟಾದರು.ಬಳಿಕ ನಾಯಕನಿಗೆ ಜೊತೆಯಾದ ನಿಕೋಲಸ್‌ ಪೂರನ್‌ 16 ರನ್‌ ಗಳಿಸಿ 18ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ADVERTISEMENT

ತಿರುವು ನೀಡಿದ ಪ್ರಸಿದ್ಧ
ಕಿಂಗ್ಸ್‌ ತಂಡ 18 ಓವರ್‌ ಮುಕ್ತಾಯವಾದಾಗಕೇವಲ 2 ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಿತ್ತು. ಆದರೆ 19ನೇ ಓವರ್ ಬೌಲಿಂಗ್‌ ಮಾಡಿದ ಪ್ರಸಿದ್ಧ ಕೃಷ್ಣ ಪಂದ್ಯಕ್ಕೆ ತಿರುವು ನೀಡಿದರು.58 ಎಸೆತಗಳನ್ನು ಎದುರಿಸಿ 6 ಬೌಂಡರಿಸಹಿತ 74 ರನ್‌ ಬಾರಿಸಿದ್ದ ರಾಹುಲ್‌ ಮತ್ತುಪ್ರಬ್ಸಿಮ್ರನ್‌ ಸಿಂಗ್‌ (5) ಅವರು ಈಓವರ್‌ನಲ್ಲಿವಿಕೆಟ್‌ ಕಳೆದುಕೊಂಡರು. ಇದು ಕಿಂಗ್ಸ್‌ ಪಾಲಿಗೆ ಮುಳುವಾಯಿತು.

ಕಿಂಗ್ಸ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 14 ರನ್‌ ಬೇಕಾಗಿತ್ತು. ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಮನ್‌ದೀಪ್‌ ಸಿಂಗ್‌ ಕ್ರೀಸ್‌ನಲ್ಲಿದ್ದರು. ಸುನೀಲ್‌ ನರೇನ್‌ ಎಸೆದ 20ನೇ ಓವರ್‌ನಲ್ಲಿ ಈ ಜೋಡಿ ಕೇವಲ 11 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೆಕೆಆರ್‌ ಕೇವಲ 2 ರನ್‌ ಅಂತರದ ಗೆಲುವು ಸಾಧಿಸಿತು.

ಕೆಕೆಆರ್‌ ಪರ ಪ್ರಸಿದ್ಧ ಕೃಷ್ಣ ಮೂರು ವಿಕೆಟ್ ಪಡೆದರೆ, ಸುನೀಲ್‌ ರೇನ್‌ 2 ವಿಕೆಟ್‌ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.