ADVERTISEMENT

IPL-2020: ಕಮಿನ್ಸ್ ದಾಳಿಗೆ ರಾಯಲ್ಸ್ ತತ್ತರ; ರೈಡರ್ಸ್‌ಗೆ ಪ್ಲೇ ಆಫ್‌ ಕನಸು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 18:48 IST
Last Updated 1 ನವೆಂಬರ್ 2020, 18:48 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ಕೆಕೆಆರ್‌ ಆಟಗಾರರು (ಐಪಿಎಲ್‌– ಟ್ವಿಟರ್‌ ಚಿತ್ರ)
ವಿಕೆಟ್‌ ಪಡೆದ ಸಂಭ್ರಮದಲ್ಲಿ ಕೆಕೆಆರ್‌ ಆಟಗಾರರು (ಐಪಿಎಲ್‌– ಟ್ವಿಟರ್‌ ಚಿತ್ರ)   

ದುಬೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ರಾಜಸ್ಥಾನ ರಾಯಲ್ಸ್‌ ಪಡೆಯನ್ನು ಬರೋಬ್ಬರಿ 60 ರನ್ ಅಂತರದಿಂದ ಮಣಿಸಿತು.ಇದೊರೊಂದಿಗೆ ನಾಲ್ಕರ ಘಟ್ಟದ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೆಕೆಆರ್ ತಂಡ ನಾಯಕ ಎಯಾನ್‌ ಮಾರ್ಗನ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತ್ತು. ಆರಂಭದಲ್ಲಿ ಶುಭಮನ್‌ ಗಿಲ್‌ (36), ರಾಹುಲ್‌ ತ್ರಿಪಾಟಿ (39) ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊನೆಯಲ್ಲಿ ಅಬ್ಬರಿಸಿದ ಮಾರ್ಗನ್‌, ಕೇವಲ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿದರು. ಅ್ಯಂಡ್ರೆ ರಸೇಲ್‌ (11 ಎಸೆತಗಳಲ್ಲಿ 25 ರನ್‌) ಅಲ್ಪ ಕಾಣಿಕೆ ನೀಡಿದರು.

ಹೀಗಾಗಿ ಕೋಲ್ಕತ್ತ 190ರ ಗಡಿ ದಾಟಲು ಸಾಧ್ಯವಾಯಿತು. ಈ ಬೃಹತ್‌ ಗುರಿ ಎದುರು ಬ್ಯಾಟಿಂಗ್ ಮಾಡಿದ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 131 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಕಮಿನ್ಸ್ ದಾಳಿಗೆ ರಾಯಲ್ಸ್‌ ತತ್ತರ
ಇನಿಂಗ್ಸ್‌ ಆರಂಭಿಸಿದ ರಾಯಲ್ಸ್‌ ಐದು ಓವರ್‌ಗಳ ಆಟ ಮುಗಿಯುವಷ್ಟರಲ್ಲೇ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಅದಕ್ಕೆ ಕಾರಣವಾಗಿದ್ದು ಕಮಿನ್ಸ್‌. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರಾಬಿನ್‌ ಉತ್ತಪ್ಪ (6) ವಿಕೆಟ್ ಪಡೆದ ಅವರು, ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೆನ್‌ ಸ್ಟೋಕ್ಸ್ (18) ಮತ್ತು ನಾಯಕ ಸ್ಟೀವ್‌ ಸ್ಮಿತ್‌ (4) ವಿಕೆಟ್ ಪಡೆದರು. ಶಿವಂ ಮಾವಿ ಹಾಕಿದ ನಾಲ್ಕನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌ (1) ಔಟಾದರೆ, ಐದನೇ ಓವರ್‌ನಲ್ಲಿ ಮತ್ತೆ ದಾಳಿ ಮಾಡಿದ ಕಮಿನ್ಸ್‌, ರಿಯಾನ್ ಪರಾಗ್‌ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಹೀಗಾಗಿ ಬೆಟ್ಟದಂತಹ ಗುರಿ ಎದುರು ದಿಟ್ಟ ಆಟವಾಡುವುದು ರಾಯಲ್ಸ್‌ಗೆ ಸಾಧ್ಯವಾಗಲಿಲ್ಲ. ಜಾಸ್‌ ಬಟ್ಲರ್ (35), ರಾಹುಲ್‌ ತೆವಾಟಿಯಾ (31) ಸ್ವಲ್ಪ ಪ್ರತಿರೋಧ ತೋರಿದರೂ ಗೆಲುವು ತಂದುಕೊಡಲು ಸಾಕಾಗಲಿಲ್ಲ.

ಕೊನೆಯಲ್ಲಿ ವಿಕೆಟ್‌ ಕೊಡದೆ ಎಚ್ಚರಿಕೆಯ ಆಟವಾಡಿದ ಶ್ರೇಯಸ್‌ ಗೋಪಾಲ್‌ (23) ತಮ್ಮ ತಂಡ ಆಲೌಟ್ ಆಗದಂತೆ ನೋಡಿಕೊಂಡರು.

ಕೆಕೆಆರ್ ಪರ ಕಮಿನ್ಸ್‌ 34 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದರೆ, ಶಿವಂ ಮಾವಿ ಹಾಗೂ ವರುಣ್‌ ಚಕ್ರವರ್ತಿ ಎರಡೆರಡು ವಿಕೆಟ್ ಪಡೆದರು. ಇನ್ನೊಂದು ವಿಕೆಟ್‌ ಕಮಲೇಶ್ ನಾಗರಕೋಟಿ ಪಾಲಾಯಿತು.

ಟೂರ್ನಿಯಲ್ಲಿ ಒಟ್ಟು 7 ಗೆಲುವು ಸಾಧಿಸಿರುವ ಕೆಕೆಆರ್ ಪಾಯಿಂಟ್ಸ್‌ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದೆ. ಮಂಗಳವಾರ (ನ.3ರಂದು) ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಸೋಲು ಕಂಡರೆ, ಕೆಕೆಆರ್ ಪ್ಲೇ ಆಫ್‌ಗೆ ತಲುಪಲು ಅವಕಾಶವಿದೆ. ಇತ್ತ ರಾಯಲ್ಸ್ ಕೊನೆಯ ಸ್ಥಾನಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.