ADVERTISEMENT

IPL-2020 | MI vs DC: ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 18:05 IST
Last Updated 11 ಅಕ್ಟೋಬರ್ 2020, 18:05 IST
ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್‌ ಯಾದವ್‌ ಹಾಗೂ ಕ್ವಿಂಟನ್‌ ಡಿ ಕಾಕ್‌
ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್‌ ಯಾದವ್‌ ಹಾಗೂ ಕ್ವಿಂಟನ್‌ ಡಿ ಕಾಕ್‌   

ಅಬುಧಾಬಿ:ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 163 ರನ್ ಗುರಿಯನ್ನು ಹಾಲಿ ಚಾಂಪಿಯನ್‌ ಮುಂಬೈ ತಂಡ ಇನ್ನೂ 5 ವಿಕೆಟ್‌ಗಳು ಬಾಕಿ ಇರುವಂತೆಯೇ ತಲುಪಿತು. ಈ ಜಯದೊಂದಿಗೆ ಮುಂಬೈ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ, ನಾಯಕ ಶ್ರೇಯಸ್‌ ಅಯ್ಯರ್ (42) ಹಾಗೂ ಅನುಭವಿ ಶಿಖರ್ ಧವನ್‌ (69) ಅವರ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ ಮುಂಬೈ ಪಡೆ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (5) ವಿಕೆಟ್‌ ಕಳೆದುಕೊಂಡಿತು. ಆದರೆ ಕ್ವಿಂಟನ್‌ ಡಿ ಕಾಕ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಡಿ ಕಾಕ್‌ 36 ಎಸೆತಗಳಲ್ಲಿ 3 ಸಿಕ್ಸರ್,‌ 4 ಬೌಂಡರಿ ಸಹಿತ 53 ರನ್‌ ಗಳಿಸಿದರೆ, ಯಾದವ್‌ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಿತ 53 ರನ್‌ ಬಾರಿಸಿದರು. ಬಿರುಸಾಗಿ ಬ್ಯಾಟ್‌ ಬೀಸಿದ ಇಶಾನ್‌ ಕಿಶನ್‌ (28) ತಮ್ಮ ತಂಡವನ್ನು ಜಯದ ಸನಿಹಕ್ಕೆ ತಂದು ನಿಲ್ಲಿಸಿದರು.ಕೊನೆಯಲ್ಲಿ ಕೀರನ್‌ ಪೊಲಾರ್ಡ್ (11)‌ ಮತ್ತು ಕೃಣಾಲ್‌ ಪಾಂಡ್ಯ (12) ಜಯದ ಲೆಕ್ಕಾಚಾರ ಪೂರ್ಣಗೊಳಿಸಿದರು.

ಡೆಲ್ಲಿ ಪರ ಕಗಿಸೊ ರಬಾಡ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್, ಆರ್‌.ಅಶ್ವಿನ್‌ ಮತ್ತು ಮಾರ್ಕಸ್‌ ಸ್ಟೋಯಿನಸ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.