ADVERTISEMENT

IPL-2020 | MI vs KKR: ಕ್ವಿಂಟನ್ ಅಬ್ಬರ; ಮುಂಬೈಗೆ ಸುಲಭ ತುತ್ತಾದ ಕೆಕೆಆರ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 18:22 IST
Last Updated 16 ಅಕ್ಟೋಬರ್ 2020, 18:22 IST
   

ಅಬುಧಾಬಿ: ಕೋಲ್ಕತ್ತ ನೈಟ್‌ರೈಡರ್ಸ್‌ನೀಡಿದ ಸಾಧಾರಣ ಗುರಿ ಎದುರು ಅಬ್ಬರದ ಬ್ಯಾಟಿಂಗ್‌ ನಡೆಸಿದ ಕ್ವಿಂಟನ್‌ ಡಿ ಕಾಕ್‌, ಮುಂಬೈ ಇಂಡಿಯನ್ಸ್‌ ತಂಡಕ್ಕೆಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ಕೆಕೆಆರ್‌ ಬೌಲರ್‌ಗಳೆದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಮುಂಬೈನ ಆರಂಭಿಕ ಜೋಡಿ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಕೇವಲ 10.3 ಓವರ್‌ಗಳಲ್ಲಿ 94 ರನ್‌ ಸೇರಿಸಿತು. ನಾಯಕ ರೋಹಿತ್ ಶರ್ಮಾ 35 ರನ್‌ ಗಳಿಸಿ ಔಟಾದರೆ, ಕ್ವಿಂಟನ್ ಡಿ ಕಾಕ್‌‌ ಕೊನೆವರೆಗೂ ಆಡಿದರು.

ಬಿರುಸಾಗಿ ಬ್ಯಾಟ್‌ ಬೀಸಿದ ಕ್ವಿಂಟನ್ಕೇವಲ 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 78 ರನ್ ಬಾರಿಸಿದರು.

ADVERTISEMENT

ಇದು ಮುಂಬೈಗೆ ಟೂರ್ನಿಯಲ್ಲಿ 6ನೇ ಗೆಲುವು. 8 ಪಂದ್ಯಗಳನ್ನು ಆಡಿರುವ ಈ ತಂಡ 2 ಸೋಲು ಕಂಡಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೆಕೆಆರ್‌ ನಾಲ್ಕನೇ ಸ್ಥಾನದಲ್ಲಿದೆ.

ಕೆಕೆಆರ್‌ಗೆ ಆಸರೆಯಾದಕಮಿನ್ಸ್‌–ಮಾರ್ಗನ್
ಇದಕ್ಕೂ ಮೊದಲುಟಾಸ್‌ ಗೆದ್ದುಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್‌ ಪಡೆಯ ಬೌಲರ್‌ಗಳ ಶಿಸ್ತಿನ ಬೌಲಿಂಗ್‌ ದಾಳಿ ಎದುರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರುತ್ತರರಾದರು. ತಂಡದ ಮೊತ್ತ ಕೇವಲ 61 ರನ್‌ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ಐವರು ಪೆವಿಲಿಯನ್‌ ಸೇರಿಕೊಂಡರು. ರಾಹುಲ್‌ ತ್ರಿಪಾಠಿ (7), ಶುಭಮನ್‌ ಗಿಲ್‌ (21), ನಿತೀಶ್‌ ರಾಣಾ (5), ದಿನೇಶ್ ಕಾರ್ತಿಕ್‌ (4) ಮತ್ತು ಆ್ಯಂಡ್ರೆ ರಸೆಲ್‌ (11) ಹೆಚ್ಚು ರನ್‌ ಗಳಿಸಲಿಲ್ಲ.

ಈ ವೇಳೆ ಜೊತೆಯಾದ ನಾಯಕ ಎಯಾನ್ ಮಾರ್ಗನ್ ಮತ್ತುಬೌಲಿಂಗ್‌ ಆಲ್‌ರೌಂಡರ್‌ ಪ್ಯಾಟ್‌ ಕಮಿನ್ಸ್ ಕೆಕೆಆರ್‌ ಗೌರವಯುತ ಮೊತ್ತ ಕಲೆಹಾಕಲು ನೆರವಾದರು.

ಕೇವಲ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ ಔಟಾಗದೆ53 ರನ್‌ ಗಳಿಸಿದ ಕಮಿನ್ಸ್, ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿಕೊಂಡರು. ಇನ್ನೊಂದು ತುದಿಯಲ್ಲಿ ವಿಕೆಟ್‌ ಬೀಳದಂತೆ ಎಚ್ಚರಿಕೆಯ ಆಟವಾಡಿದ ಮಾರ್ಗನ್‌‌ 39 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಈ ಜೋಡಿ 6ನೇ ವಿಕೆಟ್‌ ಜೊತೆಯಾಟದಲ್ಲಿ ಕೇವಲ 56 ಎಸೆತಗಳಲ್ಲಿ 87 ರನ್‌ ಕೂಡಿಸಿತು. ಹೀಗಾಗಿ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 148 ರನ್‌ ಗಳಿಸಲು ಸಾಧ್ಯವಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.