ADVERTISEMENT

IPL-2020 | ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ರಾಯಲ್ಸ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 18:32 IST
Last Updated 27 ಸೆಪ್ಟೆಂಬರ್ 2020, 18:32 IST
ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ ವೈಖರಿ
ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ ವೈಖರಿ   

ಶಾರ್ಜಾ: ಕೊನೆಯವರೆಗೂ ತೂಗುಯ್ಯಾಲೆಯಲ್ಲಿ ಸಾಗಿದ ಪಂದ್ಯವನ್ನು ರಾಜಸ್ಥಾನ್‌ ರಾಯಲ್ಸ್ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು.ಇದರೊಂದಿಗೆ ಗರಿಷ್ಠ ಮೊತ್ತದ ಗುರಿ ಬೆನ್ನಟ್ಟಿ ಗೆದ್ದ ದಾಖಲೆಗೂ ಭಾಜನವಾಯಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಂಜಾಬ್‌ ಪರ ಕನ್ನಡಿಗರಾದ ಮಯಂಕ್‌ ಅಗರವಾಲ್‌ ಮತ್ತು ಕೆಎಲ್‌ ರಾಹುಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದರು.

ಮಯಂಕ್ ವೇಗದ ಶತಕ
ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ ಮಯಂಕ್‌ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ವೇಗವಾಗಿ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿದರು. 2010ರಲ್ಲಿಯೂಸೂಫ್‌ ಪಠಾಣ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 37 ಎಸೆತಗಳಲ್ಲಿ ಶತಕ ಗಳಿಸಿದ್ದರು.

ADVERTISEMENT

ಒಟ್ಟಾರೆ 56 ಎಸೆತಗಳನ್ನು ಎದುರಿಸಿದ ಮಯಂಕ್‌ 10 ಬೌಂಡರಿ ಮತ್ತು 7 ಸಿಕ್ಸರ್‌ ಸಹಿತ 106 ರನ್‌ ಗಳಿಸಿ ಔಟಾದರೆ, ನಾಯಕ ರಾಹುಲ್‌ 54 ಎಸೆತಗಳಿಂದ 7 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 69 ರನ್‌ ಬಾರಿಸಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 183 ರನ್‌ ಸೇರಿಸಿತ್ತು.ಕೊನೆಯಲ್ಲಿ ಗುಡುಗಿದ ನಿಕೋಲಸ್‌ ಪೂರನ್‌ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್ ತಂಡದ ಮೊತ್ತವನ್ನು 223ಕ್ಕೆ ಏರಿಸಿದ್ದರು.

ಈ ಗುರಿ ಬೆನ್ನಟ್ಟಿದ ರಾಯಲ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಜಾಸ್‌ ಬಟ್ಲರ್ (4) ಬೇಗನೆ ವಿಕೆಟ್‌ ಒಪ್ಪಿಸಿದರು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ನಾಯಕ ಸ್ಟೀವ್‌ ಸ್ಮಿತ್ (50)‌ ಮತ್ತು ಸಂಜು ಸ್ಯಾಮ್ಸನ್‌ ಎರಡನೇ ವಿಕೆಟ್‌ಗೆ 81 ರನ್‌ ಸೇರಿಸಿದರು. ಸ್ಯಾಮ್ಸನ್‌ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 85 ರನ್‌ ಗಳಿಸಿದರು.

ತಿರುವು ನೀಡಿದ 17ನೇ ಓವರ್‌
ಸ್ಮಿತ್‌ ವಿಕೆಟ್‌ ಪತನದ ಬಳಿಕ ರಾಯಲ್ಸ್‌ ರನ್‌ ಗಳಿಕೆ ಕುಸಿದಿತ್ತು. 15 ಓವರ್‌ಗಳು ಮುಗಿದಾಗ ರಾಯಲ್ಸ್‌ 2 ವಿಕೆಟ್‌ ನಷ್ಟಕ್ಕೆ 140ರನ್‌ ಗಳಿಸಿತ್ತು. ಆದರೆ ಕೊನೆಯ ಆರು ಓವರ್‌ಗಳಲ್ಲಿ 86 ರನ್‌ ಹರಿದು ಬಂದದ್ದರಿಂದ ಗೆಲುವು ಸಾಧ್ಯವಾಯಿತು.

21 ಎಸೆತಗಳಲ್ಲಿ 14 ರನ್‌ ಗಳಿಸಿ ಪರದಾಡುತ್ತಿದ್ದಆಲ್ರೌಂಡರ್ ರಾಹುಲ್‌ ತೆವಾಟಿಯಾ ಕೊನೆಯಲ್ಲಿ ಅಬ್ಬರಿಸಿದರು.ಶೇಲ್ಡನ್‌ ಕಾರ್ಟ್ರೇಲ್‌ ಎಸೆದ 17ನೇ ಓವರ್‌ನಲ್ಲಿ ಅವರು5 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪಂದ್ಯದ ದಿಕ್ಕು ಬದಲಿಸಿದರು.ಒಟ್ಟಾರೆಯಾಗಿ ಅವರು 31 ಎಸೆತಗಳಲ್ಲಿ 7 ಸಿಕ್ಸರ್‌ ಸಹಿತ 53 ರನ್‌ ಗಳಿಸಿದರು.

ಅಂತಿಮವಾಗಿ ರಾಯಲ್ಸ್‌ 19.3ನೇ ಓವರ್‌ನಲ್ಲಿ 226 ರನ್‌ ಗಳಿಸಿ ಜಯದ ನಗೆ ಬೀರಿತು.

ಪಂದ್ಯದಲ್ಲಿಪಂಜಾಬ್‌ ತಂಡದ ರವಿ ಬಿಷ್ಣೋಯಿ‌ (8.50) ಹೊರತುಪಡಿಸಿ ಎರಡೂ ತಂಡಗಳಉಳಿದೆಲ್ಲಬೌಲರ್‌ಗಳೂ 9ಕ್ಕಿಂತಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು. ಇದರಿಂದಾಗಿಒಟ್ಟು 449 ಹರಿದು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.