ADVERTISEMENT

IPL-2020 | RCB vs KXIP: ರಾಹುಲ್‌–ಗೇಲ್ ಅಬ್ಬರ; ಕಿಂಗ್ಸ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 19:07 IST
Last Updated 15 ಅಕ್ಟೋಬರ್ 2020, 19:07 IST
ಬ್ಯಾಟಿಂಗ್‌ ವೇಳೆ ಕೆಎಲ್‌ ರಾಹುಲ್‌ ಮತ್ತು ಕ್ರಿಸ್ ಗೇಲ್
ಬ್ಯಾಟಿಂಗ್‌ ವೇಳೆ ಕೆಎಲ್‌ ರಾಹುಲ್‌ ಮತ್ತು ಕ್ರಿಸ್ ಗೇಲ್   

ಶಾರ್ಜಾ: ಗುರುವಾರ ರಾತ್ರಿ ಕೊನೆಯ ಐದು ಓವರ್‌ಗಳಲ್ಲಿ ನಡೆದ ಕೆಲವು ನಾಟಕೀಯ ಬೆಳವಣಿಗೆಗಳಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಎದುರು ರೋಚಕ ಜಯ ದಾಖಲಿಸಿತು.

ಕೊನೆಯ ಎಸೆತದವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಕಿಂಗ್ಸ್‌ ತಂಡವು 8 ವಿಕೆಟ್‌ಗಳಿಂದ ಜಯಿಸಿತು. 20ನೇ ಓವರ್‌ನಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮಾಡಿದ ಚಾಣಾಕ್ಷ ಬೌಲಿಂಗ್ ವ್ಯರ್ಥವಾಯಿತು. ಕಿಂಗ್ಸ್‌ ಗೆಲುವಿಗೆ ಆರು ಎಸೆತಗಳಲ್ಲಿ ಕೇವಲ ಎರಡು ರನ್‌ ಬೇಕಿದ್ದಾಗ ಚಾಹಲ್, ಮೊದಲೆರಡು ಡಾಟ್ ಬಾಲ್ ಹಾಕಿದರು. ಮೂರನೇ ಎಸೆತದಲ್ಲಿ ಗೇಲ್ ಒಂದು ರನ್ ಗಳಿಸಿದರು.

ನಾಲ್ಕನೇ ಎಸೆತದಲ್ಲಿ ರಾಹುಲ್ ರನ್‌ ಗಳಿಸಲು ಚಾಹಲ್ ಅವಕಾಶ ಕೊಡಲಿಲ್ಲ. ಐದನೇ ಎಸೆತದಲ್ಲಿ ರಾಹುಲ್ ವಿಜಯದ ರನ್ ಗಳಿಸುವ ಪ್ರಯತ್ನ ಮಾಡಿದರು. ಆದರೆ, ಗೇಲ್ ರನ್‌ಔಟ್ಆದರು. ಕೊನೆಯ ಎಸೆತದಲ್ಲಿ ನಿಕೋಲಸ್ ಪೂರನ್ ಸಿಕ್ಸರ್ ಹೊಡೆದು ಪಂದ್ಯಕ್ಕೆ ತೆರೆ ಎಳೆದರು. ಇದರಿಂದಾಗಿ ಟೂರ್ನಿಯಲ್ಲಿ ಎರಡನೇ ಬಾರಿ ಕೊಹ್ಲಿ ಬಳಗವು ಕಿಂಗ್ಸ್‌ ಎದುರು ಸೋತಿತು.

ADVERTISEMENT

ಸಂಜೆ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎರಡು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡ ಕೊಹ್ಲಿ (48; 39ಎಸೆತ, 3ಬೌಂಡರಿ) ಮತ್ತು ಕೊನೆಯಲ್ಲಿ ಮಿಂಚಿದ ಕ್ರಿಸ್ ಮೊರಿಸ್ (ಔಟಾಗದೆ 25; 8ಎ, 1ಬೌಂ, 3ಸಿ) ಅವರ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿಯು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 171 ರನ್‌ ಗಳಿಸಿತು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಕ್ರಿಸ್‌ ಮತ್ತು ಇಸುರು ಉಡಾನ ಸೇರಿ 24 ರನ್‌ಗಳನ್ನು ಹೊಡೆದಿದ್ದರಿಂದ ಹೋರಾಟದ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಯಿತು. ಅದಕ್ಕುತ್ತರವಾಗಿ ಕಿಂಗ್ಸ್‌ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 177 ರನ್‌ ಗಳಿಸಿತು.

ಕಿಂಗ್ಸ್‌ ತಂಡದ‘ಭಲೆ ಜೋಡಿ’ ರಾಹುಲ್ (ಔಟಾಗದೆ 61; 49ಎ, 1ಬೌಂ,5ಸಿ ) ಮತ್ತು ಮಯಂಕ್ ಅಗರವಾಲ್ (45; 25ಎ, 4ಬೌಂ, 3ಸಿ) ಮೊದಲ ವಿಕೆಟ್‌ಗೆ 78 ರನ್ ಸೇರಿಸಿದರು. ಎಂಟನೇ ಓವರ್‌ನಲ್ಲಿ ಮಯಂಕ್ ಔಟಾದ ನಂತರಕ್ರೀಸ್‌ಗೆ ಬಂದಿ ಕ್ರಿಸ್ ಗೇಲ್ ತಮ್ಮ ತಾಕತ್ತು ತೋರಿಸಿದರು.

ಇನಿಂಗ್ಸ್‌ನಲ್ಲಿ 15 ಓವರ್‌ಗಳ ಆಟದವರೆಗೆ ಎರಡೂ ತಂಡಗಳಿಗೆ ಗೆಲುವಿನ ಅವಕಾಶ ಇತ್ತು. ಆದರೆ, ಮೊಹಮ್ಮದ್ ಸಿರಾಜ್ ಹಾಕಿದ ಹದಿನಾರನೇ ಓವರ್‌ನಲ್ಲಿ 20 ಮತ್ತು ವಾಷಿಂಗ್ಟನ್ ಸುಂದರ್ ಹಾಕಿದ 17ನೇ ಓವರ್‌ನಲ್ಲಿ 15 ರನ್‌ ಸೂರೆ ಮಾಡಿದ ರಾಹುಲ್‌–ಗೇಲ್ ಜೋಡಿ ತಂಡವನ್ನು ಜಯದ ಸನಿಹ ತಂದು ನಿಲ್ಲಿಸಿತ್ತು.

ಆದರೆ ಛಲ ಬಿಡದ ವಿರಾಟ್, ಬೌಲಿಂಗ್‌ನಲ್ಲಿ ಪ್ರಯೋಗ ಮಾಡಿದರು. 18ನೇ ಓವರ್‌ ಹಾಕಿದ ಕ್ರಿಸ್ ಮೊರಿಸ್ ಕೇವಲ ನಾಲ್ಕು ರನ್ ಕೊಟ್ಟರು. 19ನೇ ಓವರ್‌ನಲ್ಲಿ ಇಸುರು ಉಡಾನ ಐದು ರನ್‌ ಬಿಟ್ಟು ಕೊಟ್ಟರು. ಹೀಗಾಗಿ ಕಿಂಗ್ಸ್‌ಗೆ ಕೊನೆಯ ಓವರ್‌ನಲ್ಲಿ ಗೆಲುವಿಗೆ ಕೇವಲ 2 ರನ್ ಮಾತ್ರ ಬೇಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.