ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳೆದ ಇಪ್ಪತ್ತೊಂದು ದಿನಗಳಲ್ಲಿ ಆಗಿರುವ ಬೆಳವಣಿಗೆಗಳಲ್ಲಿ ಒಂದು ಅಚ್ಚರಿ ಇದೆ.
ಆಗ ಗೆಲುವಿನ ಅಲೆಯಲ್ಲಿ ತೇಲಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ಈಗ ತಳ ಕಂಡಿದೆ. ಅದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನಕ್ಕೆ ಜಿಗಿದಿದೆ.ಇವೆರಡೂ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ. ವಿರಾಟ್ ಬಳಗವು ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.
ಏಕೆಂದರೆ; ಸೆಪ್ಟೆಂಬರ್ 24ರಂದು ಭರ್ಜರಿ ಶತಕ ಬಾರಿಸಿದ್ದ ರಾಹುಲ್ ಆಟದಿಂದಾಗಿ ಕಿಂಗ್ಸ್, ಬೆಂಗಳೂರು ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತ್ತು. ನಂತರದ ಐದು ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ.
ಆದರೆ, ಆರ್‌ಸಿಬಿಯ ಕಿಂಗ್ಸ್ ಎದು ರಿನ ಪಂದ್ಯದ ನಂತರ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಿಸಿದೆ. ಒಂದರಲ್ಲಿ ಮಾತ್ರ ಸೋತಿದೆ. ಒಟ್ಟು 10 ಪಾಯಿಂಟ್ಸ್‌ಗಳನ್ನು ತನ್ನ ಖಾತೆಯಲ್ಲಿಟ್ಟುಕೊಂಡಿದೆ. ಮೊದಲ ಸುತ್ತಿನ ಅಂತ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇದರಿಂದಾಗಿ ಎರಡನೇ ಸುತ್ತಿನಲ್ಲಿ ಇನ್ನಷ್ಟು ಗೆಲುವುಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಆತ್ಮವಿಶ್ವಾಸ ಕೊಹ್ಲಿಗೆ ಇದೆ.
ಆರ್‌ಸಿಬಿಯಲ್ಲಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್, ಆ್ಯರನ್ ಫಿಂಚ್, ವಿರಾಟ್ ಮತ್ತು ‘ಸೂಪರ್ ಮ್ಯಾನ್’ ಎಬಿ ಡಿ ವಿಲಿಯರ್ಸ್ ಅಮೋಘ ಲಯದಲ್ಲಿದ್ದಾರೆ. ಹೋದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಎಬಿಡಿಯ ಸಿಡಿಲಬ್ಬರದ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳ ಮನಗಳಲ್ಲಿ ಅಚ್ಚೊತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಆಟದ ಕುರಿತ ಮೆಚ್ಚುಗೆಯ ಮಹಾಪೂರ ಈಗಲೂ ಹರಿಯುತ್ತಿದೆ.
ಇದನ್ನೂ ಓದಿ:ವಿರಾಟ್ – ರಾಹುಲ್ ಬಿಗ್ ಫೈಟ್: ರಾಯಲ್ಸ್ ಗೆದ್ದ ಡೆಲ್ಲಿ
ಕ್ರಿಸ್ ಮೋರಿಸ್ ಅವರಿಂದಾಗಿ ಬೆಂಗಳೂರು ಬೌಲಿಂಗ್ ಕೂಡ ಬಲಿಷ್ಠಗೊಂಡಿದೆ. ಸ್ಪಿನ್ ಜೋಡಿ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಎದುರಾಳಿ ತಂಡಗಳಿಗೆ ‘ಕಬ್ಬಿಣದ ಕಡಲೆ’ ಆಗುತ್ತಿದ್ದಾರೆ. ಮಧ್ಯಮವೇಗಿ ನವದೀಪ್ ಸೈನಿ ಕೂಡ ಪರಿಣಾಮಕಾರಿಯಾಗಿದ್ದಾರೆ. ಅವರಿಗೆ ಜೊತೆ ನೀಡಲು ಇಸುರು ಉಡಾನ ಮತ್ತು ಮೊಹಮ್ಮದ್ ಸಿರಾಜ್ ಕೂಡ ಇದ್ದಾರೆ.
ಪಂಜಾಬ್ ತಂಡದಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಚಿಂತೆ ಇಲ್ಲ. ಆದರೆ, ಬೌಲಿಂಗ್‌ನಲ್ಲಿ ಎಡವುತ್ತಿದೆ. ಅಲ್ಲದೇ ಫೀಲ್ಡಿಂಗ್ ನಲ್ಲಿ ಆಗುತ್ತಿರುವ ಲೋಪ ಗಳು ತಂಡಕ್ಕೆ ದುಬಾರಿಯಾಗುತ್ತಿವೆ. ಈ ತಂಡದ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ‘ಫಿನಿಷರ್’ ಕೊರತೆ ಇರುವುದು ಎದ್ದು ಕಾಣುತ್ತಿದೆ. ಆರಂಭಿಕ ಜೋಡಿ ರಾಹುಲ್ ಮತ್ತು ಮಯಂಕ್ ಅಗರವಾಲ್ ರನ್‌ಗಳ ಹೊಳೆಯನ್ನೇ ಹರಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ.
ಆದ್ದರಿಂದಲೇ ಈ ಪಂದ್ಯದಲ್ಲಿ ‘ಯುನಿವರ್ಸಲ್ ಬಾಸ್’ ಕ್ರಿಸ್ ಗೇಲ್ ಅವರಿಗೆ ಅವಕಾಶ ನೀಡಲಾಗುತ್ತಿದೆ. ಅವರು ಈವರೆಗೂ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಆಡಿಲ್ಲ. ಬೌಲಿಂಗ್ ನಲ್ಲಿ ಮಧ್ಯಮವೇಗಿ ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಮೇಲೆಯ ಅವಲಂಬಿತವಾಗುವ ಸಾಧ್ಯತೆ ಹೆಚ್ಚಿದೆ. ನಾಯಕ ರಾಹುಲ್ ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ರೂಪಿಸುವ ತಂತ್ರಗಾರಿಕೆಯೇ ಮುಖ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.