ADVERTISEMENT

IPL-2020 | KKR vs SRH: ಲಾಕಿ ಮ್ಯಾಜಿಕ್; ಸೋಲಿನ ಸುಳಿಯಿಂದ ಪಾರಾದ ಕೋಲ್ಕತ್ತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:41 IST
Last Updated 18 ಅಕ್ಟೋಬರ್ 2020, 16:41 IST
ಸೂಪರ್ ಓವರ್‌ನಲ್ಲಿ ಡೇವಿಡ್ ವಾರ್ನರ್ ಅವರನ್ನು ಬೌಲ್ಡ್ ಮಾಡಿದ ಲಾಕಿ ಫರ್ಗ್ಯುಸನ್ ಸಂಭ್ರಮ –ಐಪಿಎಲ್ ಮಿಡಿಯಾ ಚಿತ್ರ
ಸೂಪರ್ ಓವರ್‌ನಲ್ಲಿ ಡೇವಿಡ್ ವಾರ್ನರ್ ಅವರನ್ನು ಬೌಲ್ಡ್ ಮಾಡಿದ ಲಾಕಿ ಫರ್ಗ್ಯುಸನ್ ಸಂಭ್ರಮ –ಐಪಿಎಲ್ ಮಿಡಿಯಾ ಚಿತ್ರ   

ಅಬುಧಾಬಿ: ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಭಾನುವಾರ ಸಂಜೆ ಬೌಲರ್‌ಗಳು ಜಯದ ಕಾಣಿಕೆ ನೀಡಿದರು. ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಂಡ ಸೂಪರ್‌ ಓವರ್ ಮೂಲಕ ಜಯ ಸಾಧಿಸಿತು. ಗೆಲುವಿನ ಸನಿಹದಲ್ಲಿ ಎಡವಿದ ಸನ್‌ರೈಸರ್ಸ್ ಹೈದರಾಬಾದ್ ನಿರಾಸೆಗೆ ಒಳಗಾಯಿತು.

ಹಿಂದಿನ ಎರಡೂ ಪಂದ್ಯಗಳಲ್ಲಿ ಸೋತಿದ್ದ ಉಭಯ ತಂಡಗಳು ‘ಹ್ಯಾಟ್ರಿಕ್’ ಸೋಲಿನಿಂದ ತಪ್ಪಿಸಿಕೊಳ್ಳುವ ಕನಸಿನೊಂದಿಗೆ ಕಣಕ್ಕೆ ಇಳಿದಿದ್ದವು. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕೋಲ್ಕತ್ತ ಐದು ವಿಕೆಟ್ ಕಳೆದುಕೊಂಡು 163 ರನ್ ಕಲೆ ಹಾಕಿತು. ಉತ್ತರವಾಗಿ ಸನ್‌ರೈಸರ್ಸ್ ಹೈದರಾಬಾದ್ ಆರು ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.

ಮೂರು ವಿಕೆಟ್‌ ಕಬಳಿಸಿ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದ ಲಾಕಿ ಫರ್ಗ್ಯುಸನ್ (4–0–15–3) ಸೂಪರ್ ಓವರ್‌ನಲ್ಲಿ ಚಾಕಚಕ್ಯತೆ ಪ್ರದರ್ಶಿಸಿದರು. ಮೂರೇ ಎಸೆತಗಳಲ್ಲಿ ಎದುರಾಳಿ ತಂಡದ ‘ಇನಿಂಗ್ಸ್‌ಗೆ’ ಅವರು ಅಂತ್ಯ ಹಾಡಿದರು. ಮೊದಲ ಎಸೆತದಲ್ಲಿಡೇವಿಡ್ ವಾರ್ನರ್ ಅವರನ್ನು ಬೌಲ್ಡ್ ಮಾಡಿದರೆ ಎರಡನೇ ಎಸೆತದಲ್ಲಿ ಎರಡು ರನ್ ನೀಡಿದರು. ಮೂರನೇ ಎಸೆತದಲ್ಲಿ ಅಬ್ದುಲ್ ಸಮದ್ ಅವರ ವಿಕೆಟ್ ಉರುಳಿಸಿದರು. ಮೂರು ರನ್‌ಗಳ ಗೆಲುವಿನ ಗುರಿಯನ್ನು ತಲುಪಲು ಕೋಲ್ಕತ್ತ ನಾಲ್ಕು ಎಸೆತಗಳನ್ನು ತೆಗೆದುಕೊಂಡಿತು.

ADVERTISEMENT

ಜಾನಿ ಬೆಸ್ಟೊ ಮತ್ತು ಕೇನ್ ವಿಲಿಯಮ್ಸನ್ ಮೊದಲ ವಿಕೆಟ್‌ಗೆ 58 ರನ್ ಗಳಿಸಿ ಹಾಕಿಕೊಟ್ಟ ಬುನಾದಿ ಮೇಲೆ ಮಧ್ಯಮ ಕ್ರಮಾಂಕದ ಆಟಗಾರ, ನಾಯಕ ಡೇವಿಡ್ ವಾರ್ನರ್ (47; 33 ಎಸೆತ, 5 ಬೌಂಡರಿ) ಮತ್ತು ಏಳನೇ ಕ್ರಮಾಂಕದ ಅಬ್ದುಲ್ ಸಮದ್ ಇನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಅಂತಿಮ ಹಂತದಲ್ಲಿ ಕೋಲ್ಕತ್ತ ಬೌಲರ್‌ಗಳು ಹಿಡಿತ ಬಿಗಿ ಮಾಡಿದರು.

ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್ ಗೆಲುವಿಗೆ 18 ರನ್‌ ಬೇಕಾಗಿತ್ತು. ಆ್ಯಂಡ್ರೆ ರಸೆಲ್ ಹಾಕಿದ ಓವರ್‌ನ ಮೊದಲ ಎಸೆತ ನೋಬಾಲ್ ಆಯಿತು. ಸತತ ಮೂರು ಬೌಂಡರಿ ಸಿಡಿಸಿ ವಾರ್ನರ್ ಭರವಸೆ ಮೂಡಿಸಿದರು. ಆದರೂ ಗೆಲುವಿನ ದಡ ಸೇರಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಮಾರ್ಗನ್–ಕಾರ್ತಿಕ್ ಜೊತೆಯಾಟದ ರಂಗು
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ತಂಡದ ಪರ ಅಗ್ರ ಕ್ರಮಾಂಕದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿಮತ್ತು ನಿತೀಶ್ ರಾಣಾ ಉತ್ತಮ ಆರಂಭ ಒದಗಿಸಿದರು. ಕೊನೆಯಲ್ಲಿ ನಾಯಕ ಏಯಾನ್ ಮಾರ್ಗನ್ ಮತ್ತು ಮಾಜಿ ನಾಯಕ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಐದನೇ ವಿಕೆಟ್‌ಗೆ ಅವರಿಬ್ಬರು 30 ಎಸೆತಗಳಲ್ಲಿ 58 ರನ್ ಸೇರಿಸಿ ಗೌರವಾರ್ಹ ಮೊತ್ತ ಸೇರಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರು
ಕೋಲ್ಕತ್ತ ನೈಟ್ ರೈಸರ್ಸ್:
20 ಓವರ್‌ಗಳಲ್ಲಿ5ಕ್ಕೆ 163 (ಶುಭಮನ್ ಗಿಲ್ 36,ರಾಹುಲ್ ತ್ರಿಪಾಠಿ 23,ನಿತೀಶ್ ರಾಣಾ 29, ಏಯಾನ್ ಮಾರ್ಗನ್ 34,ದಿನೇಶ್ ಕಾರ್ತಿಕ್ ಔಟಾಗದೆ 29;ಬೇಸಿಲ್ ತಂಬಿ 46ಕ್ಕೆ1,ಟಿ.ನಟರಾಜನ್ 40ಕ್ಕೆ2,ವಿಜಯಶಂಕರ್ 20ಕ್ಕೆ1,ರಶೀದ್ ಖಾನ್ 28ಕ್ಕೆ1)

ಸನ್‌ರೈಸರ್ಸ್ ಹೈದರಾಬಾದ್:20 ಓವರ್‌ಗಳಲ್ಲಿ 6ಕ್ಕೆ163(ಜಾನಿ ಬೆಸ್ಟೊ 36, ಕೇನ್ ವಿಲಿಯಮ್ಸನ್ 29, ಡೇವಿಡ್ ವಾರ್ನರ್ ಔಟಾಗದೆ 47, ಅಬ್ದುಲ್ ಸಮದ್ 23;ಪ್ಯಾಟ್ ಕಮಿನ್ಸ್ 28ಕ್ಕೆ1, ಶಿವಂ ಮಾವಿ 34ಕ್ಕೆ1, ವರುಣ್ ಚಕ್ರವರ್ತಿ 32ಕ್ಕೆ1, ಲಾಕಿ ಫರ್ಗುಸನ್ 15ಕ್ಕೆ3). ಫಲಿತಾಂಶ: ಸೂಪರ್ ಓವರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಜಯ.

ಪಂದ್ಯಶ್ರೇಷ್ಠ: ಲಾಕಿ ಫರ್ಗ್ಯುಸನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.