
ಆರ್. ಅಶ್ವಿನ್
(ಪಿಟಿಐ ಚಿತ್ರ)
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿಯನ್ನು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೊರೆಯಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ.
ಈ ಸಂಬಂಧ ಫ್ರಾಂಚೈಸಿಯಿಂದ ಅಶ್ವಿನ್ ಸ್ಪಷ್ಟನೆಯನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.
2025ರ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್ ಒಂಬತ್ತು ಪಂದ್ಯಗಳಲ್ಲಿ 9.12ರ ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಗಳಿಸಿದ್ದರು.
'ಕಳೆದ ವರ್ಷ ನಾನು ಒಂಬತ್ತು ಪಂದ್ಯಗಳನ್ನಷ್ಟೇ ಆಡಿದ್ದೇನೆ. ನನ್ನ ಐಪಿಎಲ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಕನಿಷ್ಠ ಪಂದ್ಯಗಳನ್ನು ಆಡಿದ್ದೇನೆ. ಯಾವುದೇ ಫ್ರಾಂಚೈಸಿ ಆಗಿದ್ದರೂ ಸಾಮಾನ್ಯವಾಗಿ ನಾನು ಎಲ್ಲ ಪಂದ್ಯಗಳನ್ನು ಆಡುತ್ತಿದ್ದೆ. ಹಾಗಾಗಿ ಮೊದಲ ಬಾರಿ ಅಂತಹ ಅನುಭವವಾಗಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಸಂದರ್ಭದಲ್ಲೇ ನನ್ನ ತಂಡದಿಂದ ಸ್ಪಷ್ಟನೆಯನ್ನು ಕೇಳಿದ್ದೇನೆ' ಎಂದು ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, 'ಸ್ಯಾಮ್ಸನ್ ಜೊತೆ ವಹಿವಾಟು ನಡೆಯಬೇಕಾದರೆ ಸಿಎಸ್‌ಕೆ ₹18 ಕೋಟಿ ಮೀಸಲಿಡಬೇಕಾಗುತ್ತದೆ. ಅದಕ್ಕಾಗಿ ಯಾವ ಆಟಗಾರರನ್ನು ಬಿಡುಗಡೆ ಮಾಡಬಹುದು ಎಂಬುದನ್ನು ನೋಡಬೇಕಾಗುತ್ತದೆ' ಎಂದು ಹೇಳಿದ್ದಾರೆ.
'ಒಂದು ವೇಳೆ ಮುಂದೆ ನಾನು ಸಿಎಸ್‌ಕೆ ತಂಡದಲ್ಲಿ ಇಲ್ಲದಿದ್ದರೆ ಅದರಿಂದ ತಂಡಕ್ಕೆ ಪ್ರಯೋಜನವಾಗಬಹುದು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇವೆಲ್ಲವೂ ನನ್ನ ವಿಚಾರ ಮಾತ್ರವಲ್ಲ' ಎಂದಿದ್ದಾರೆ.
'ಓರ್ವ ಆಟಗಾರ ಒಪ್ಪಂದವನ್ನು ನವೀಕರಿಸಲು ಆಸಕ್ತಿ ಇದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ. ಅದೇ ರೀತಿ ಪ್ರಸಕ್ತ ಋತುವಿನ ಬಳಿಕ ನಾನು ಸಹ ಸ್ಪಷ್ಟನೆಯನ್ನು ಕೋರಿದ್ದೇನೆ' ಎಂದು ತಿಳಿಸಿದ್ದಾರೆ.
'ಸದ್ಯ ನನ್ನ ನಿಯಂತ್ರಣದಲ್ಲಿ ಏನೂ ಇಲ್ಲ. ಈ ಎಲ್ಲ ವದಂತಿಗಳು ಆಟಗಾರನಿಂದ ಪ್ರಚಾರ ಆಗವುದಿಲ್ಲ. ಸಂಜು ವಿಷಯವನ್ನೇ ತೆಗೆದುಕೊಳ್ಳಿ, ಇದು ಅಲ್ಲಿಂದ, ಇಲ್ಲಿಂದ ಪಸರಿಸಿದ ವದಂತಿಗಳು ಆಗಿರಬಹುದು ಅಥವಾ ಫ್ರಾಂಚೈಸಿಯಿಂದಲೇ ಬಂದಿರಬಹುದು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.