ಮುಲ್ಲನಪುರ: ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಗಳು ಶುಕ್ರವಾರ ಐಪಿಎಲ್ ಎಲಿಮಿನೇಟರ್‌ನಲ್ಲಿ ಹಣಾಹಣಿ ನಡೆಸಲಿವೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಗಿಲ್ ಬಳಗವು ಟೂರ್ನಿಯ ಆರಂಭದಿಂದಲೂ ಉತ್ತಮವಾಗಿ ಆಡಿದೆ. ಟೈಟನ್ಸ್ ತಂಡವು ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಸಲ ಪ್ಲೇ ಆಫ್ ಪ್ರವೇಶಿಸಿದೆ. 2022ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿಯೇ ಟ್ರೋಫಿ ಜಯಿಸಿತ್ತು. ಇದೀಗ ಅದೇ ಹಾರ್ದಿಕ್ ವಿರುದ್ಧ ಕಣಕ್ಕಿಳಿಯಲಿದೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿರುವ ಗಿಲ್ ಅವರಿಗೆ ಎಲಿಮಿನೇಟರ್‌ನಲ್ಲಿ ಜಯಿಸುವುದು ಪ್ರತಿಷ್ಠೆಯ ವಿಷಯವಾಗಿದೆ. ಅದೇ ರೀತಿ ಹಾರ್ದಿಕ್ ಅವರೂ ತಮ್ಮ ಮುಂಬೈ ತಂಡಕ್ಕೆ ಕಾಣಿಕೆ ನೀಡುವ ದೃಷ್ಟಿಯಿಂದ ಈ ಮುಖ್ಯವಾಗಿದೆ. ಈ ಪಂದ್ಯದಲ್ಲಿ ಜಯಿಸುವ ತಂಡವು ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸುವುದು. ಸೋತ ತಂಡವು ಟೂರ್ನಿಯಿಂದ ನಿರ್ಗಮಿಸಲಿದೆ.
ಈ ವರ್ಷ ಮುಂಬೈ ತಂಡವು ಆರಂಭದ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿತ್ತು. ಆದರೆ ನಂತರ ಆರು ಪಂದ್ಯಗಳಲ್ಲಿ ಸತತ ಜಯಿಸುವ ಮೂಲಕ ಪುಟಿದೆದ್ದಿತು. ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಆಲ್‌ರೌಂಡರ್ ಹಾರ್ದಿಕ್, ಮಿಚೆಲ್ ಸ್ಯಾಂಟನರ್, ವೇಗಿ ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಮತ್ತು ದೀಪಕ್ ಚಾಹರ್ ಅವರು ಉತ್ತಮ ಲಯದಲ್ಲಿದ್ದಾರೆ.
ಟೈಟನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶಾರೂಕ್ ಖಾನ್, ರಾಹುಲ್ ತೆವಾಟಿಯಾ, ಶೆರ್ಫೆನ್ ರುದರ್‌ಫೋರ್ಡ್ ಅವರು ಲಯಕ್ಕೆ ಮರಳುವುದು ಅನಿವಾರ್ಯ. ಒಂದೊಮ್ಮೆ ಅಗ್ರಕ್ರಮಾಂಕದ ಶುಭಮನ್, ಸಾಯಿ ಮತ್ತು ಜೋಸ್ ಬಟ್ಲರ್ ಅವರು ವೈಫಲ್ಯ ಅನುಭವಿಸಿದರೆ ಮಧ್ಯಮ ಕ್ರಮಾಂಕದವರ ಮೇಲೆ ಹೊಣೆ ಹೆಚ್ಚಲಿದೆ.
ಟೈಟನ್ಸ್ ತಂಡದ ಬೌಲಿಂಗ್ ವಿಭಾಗವೂ ಉತ್ತಮವಾಗಿದೆ. ವೇಗಿ ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಉತ್ತಮ ಲಯದಲ್ಲಿದ್ದಾರೆ. ಅವರ ಮುಂದೆ ಮುಂಬೈನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ. ಮುಂಬೈ ಬಳಗಕ್ಕೆ ಇದು 11ನೇ ಪ್ಲೇಆಫ್ ಆಗಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.