ADVERTISEMENT

IPL 2026: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಬಳಿ ಬಾಕಿ ಉಳಿದಿರುವ ಹಣ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2025, 9:04 IST
Last Updated 17 ನವೆಂಬರ್ 2025, 9:04 IST
<div class="paragraphs"><p>ಐಪಿಎಲ್ ಲಾಂಛನ</p></div>

ಐಪಿಎಲ್ ಲಾಂಛನ

   

ಚಿತ್ರ: IPL ವೆಬ್‌ಸೈಟ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಿನಿ ಹರಾಜು ಪ್ರಕ್ರಿಯೆಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಅದರಂತೆ, ಕೆಲವು ಫ್ರಾಂಚೈಸಿಗಳು ದೊಡ್ಡ ಮೊತ್ತದ ಆಟಗಾರರನ್ನು ಬಿಡುಗಡೆ ಮಾಡಿ ಪರ್ಸ್‌ನಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿಸಿಕೊಂಡಿವೆ.

ADVERTISEMENT

ಕೋಲ್ಕತ್ತ ನೈಟ್ ರೈಡರ್ಸ್ (KKR):

ಯುವ ಆಲ್‌ರೌಂಡರ್ ವೆಂಕಟೇಶ್ ಐಯ್ಯರ್, ಆ್ಯಂಡ್ರೆ ರಸೆಲ್ ಸೇರಿ ದುಬಾರಿ ಆಟಗಾರರನ್ನು ಬಿಡುಗಡೆ ಮಾಡಿರುವ ಕೆಕೆಆರ್ ಫ್ರಾಂಚೈಸಿ ಮಿನಿ ಹರಾಜಿಗೂ ಮುನ್ನ ತಮ್ಮ ಪರ್ಸ್‌ನಲ್ಲಿ ₹64.30 ಉಳಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್:

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಗದು ಟ್ರೇಡ್ ಮೂಲಕ ಜಡೇಜ, ಸ್ಯಾಮ್ ಕರನ್ ಬದಲು ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದಾಗ್ಯೂ ತಮ್ಮ ಬಳಿ ₹43.40 ಕೋಟಿ ಉಳಿಸಿಕೊಂಡಿದೆ.

ಸನ್‌ರೈಸರ್ಸ್ ಹೈದರಾಬಾದ್:

ಬಲಿಷ್ಠ ತಂಡ ಹೊಂದಿದ್ದರೂ ಕೂಡ ಆಟಗಾರರ ನೀರಸ ಪ್ರದರ್ಶನದಿಂದಾಗಿ ಕಳೆದ ಆವೃತಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಆದರೆ, ಈ ಬಾರಿ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ತಮ್ಮ ‍ಪರ್ಸ್‌ನಲ್ಲಿ ₹25.50 ಕೋಟಿ ಉಳಿಸಿಕೊಂಡಿದೆ.

ಲಖನೌ ಸೂಪರ್ ಜೈಂಟ್ಸ್ (LSG):

ರಿಷಭ್ ಪಂತ್‌ರಂತ ತಾರಾ ಆಟಗಾರರನ್ನು ಹೊಂದಿದ್ದ ಲಖನೌ ತಂಡ ಕಳೆದ ವರ್ಷ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಆದರೆ, ಈ ಬಾರಿ ಆಟಗಾರರ ಬಿಡುಗಡೆಯ ಪ್ರಕ್ರಿಯೆಯ ಬಳಿಕ ತಮ್ಮ ಪರ್ಸ್‌ನಲ್ಲಿ ₹22.95 ಕೋಟಿ ಇಟ್ಟುಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC):

ಕೆ.ಎಲ್. ರಾಹುಲ್‌ರಂತಹ ತಾರಾ ಆಟಗಾರರನ್ನು ಹೊಂದಿರುವ ಡೆಲ್ಲಿ ತಂಡ ಐಪಿಎಲ್‌ 2025 ಆರಂಭಿಕ ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭ ಪಡೆಯಿತು. ಆದರೆ, ನಂತರದಲ್ಲಿ ನಿರಂತರ ಸೋಲುಗಳನ್ನು ಅನುಭವಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನಕ್ಕೆ ಕುಸಿಯಿತು. ಸದ್ಯ, ಈ ಬಾರಿಯ ಮಿನಿ ಹರಾಜಿಗೂ ಮುನ್ನ ₹21.80 ಕೋಟಿ ಹಣ ಉಳಿಸಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಲಿಯಾಮ್ ಲಿವಿಂಗ್‌ಸ್ಟೋನ್, ಮಯಂಕ್ ಅಗರವಾಲ್‌ರಂತಹ ಕೆಲವು ಆಟಗಾರರನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಪರ್ಸ್‌ನಲ್ಲಿ ₹16.40 ಕೋಟಿ ಉಳಿಸಿಕೊಂಡಿದೆ.

ರಾಜಸ್ಥಾನ ರಾಯಲ್ಸ್:

ಕಳೆದ ವರ್ಷ ನೀರಸ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ರಾಜಸ್ಥಾನ ಈ ಬಾರಿ ಕುಮಾರ ಸಂಗಕ್ಕಾರ ಅವರನ್ನು ನೂತನ ಕೋಚ್ ಆಗಿ ನೇಮಿಸಿದೆ. ಇನ್ನೂ ಮಿನಿ ಹರಾಜಿಗೂ ಮುನ್ನ ಪರ್ಸ್‌ನಲ್ಲಿ ₹16.05 ಕೋಟಿ ಹಣ ಉಳಿಸಿಕೊಂಡಿದೆ.

ಗುಜರಾತ್ ಟೈಟನ್ಸ್:

ಪ್ರತೀ ಸೀಸನ್‌ನಲ್ಲಿ ಉತ್ತಮವಾಗಿ ಪ್ರದರ್ಶನ ತೋರುತ್ತಿರುವ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿಯ ಮಿನಿ ಹರಾಜಿಗೂ ಮುನ್ನ ಪರ್ಸ್‌ನಲ್ಲಿ ₹12.9 ಕೋಟಿ ಉಳಿಸಿಕೊಂಡಿದೆ.

ಪಂಜಾಬ್ ಕಿಂಗ್ಸ್:

2025ರಲ್ಲಿ ರನ್ನರ್ಸ್ ಅಪ್ ಆಗಿದ್ದ ಪಂಜಾಬ್ ಕಿಂಗ್ಸ್, ಕಳೆದ ಬಾರಿಯ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಮುಂದಾಗಿಲ್ಲ. ಸದ್ಯ, ಮಿನಿ ಹರಾಜಿಗೆ ಹೋಗುವುದಕ್ಕೆ ಮೊದಲು ಪರ್ಸ್‌ನಲ್ಲಿ ₹11.5 ಕೋಟಿ ಉಳಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್:

ತಂಡದಲ್ಲಿ ಯಾವುದೇ ಬದಲಾವಣೆಗೆ ಮುಂದಾಗದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್. ಬಹುತೇಕ ಕಳೆದ ಬಾರಿಯ ತಂಡವನ್ನೇ ಉಳಿಸಿಕೊಂಡಿದೆ. ಸದ್ಯ ಮಿನಿ ಹರಾಜಿಗು ಮುನ್ನ ಕೇವಲ ₹2.75 ಕೋಟಿ ಹಣ ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.