ADVERTISEMENT

ಉಪನಾಮದಿಂದಾಗಿ ಸರ್ಫರಾಜ್‌ರನ್ನು ತಂಡದಿಂದ ಕೈಬಿಡಲಾಗಿದೆಯೇ: ಕಾಂಗ್ರೆಸ್ ವಕ್ತಾರೆ

ಪಿಟಿಐ
Published 22 ಅಕ್ಟೋಬರ್ 2025, 12:22 IST
Last Updated 22 ಅಕ್ಟೋಬರ್ 2025, 12:22 IST
   

ನವದೆಹಲಿ: ಮುಂಬೈ ಮೂಲದ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರನ್ನು ಉಪನಾಮದ ಕಾರಣದಿಂದಾಗಿ‌‌ ಭಾರತ ಎ ತಂಡದಿಂದ ಕೈಬಿಡಲಾಗಿದೇ ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ಬುಧವಾರ ಪ್ರಶ್ನಿಸಿದ್ದಾರೆ.

ಈ ವಿಷಯದ ಕುರಿತು ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಅವರ ನಿಲುವು ಕೂಡ ನಮಗೆ ತಿಳಿದಿದೆ ಎಂದು ಶಮಾ ಮೊಹಮ್ಮದ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರೆಯ ಹೇಳಿಕೆಗೆ ಬಿಜೆಪಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ADVERTISEMENT

'ನಿಮ್ಮ ಕೊಳಕು ರಾಜಕೀಯ ಕೋಮುವಾದವನ್ನು ಕ್ರಿಕೆಟ್‌ನಿಂದ ದೂರವಿಡಿ. ಅದೇ ತಂಡದಲ್ಲಿ ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್ ಕೂಡ ಆಡುತ್ತಿದ್ದಾರೆ. ಭಾರತವನ್ನು ಕೋಮು ಮತ್ತು ಜಾತಿ ಆಧಾರದ ಮೇಲೆ ವಿಭಜಿಸುವುದನ್ನು ನಿಲ್ಲಿಸಿ' ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಅವರು ಕಿಡಿಕಾರಿದ್ದಾರೆ.

ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡು 'ಟೆಸ್ಟ್' ಪಂದ್ಯಗಳಿಗೆ ಮಂಗಳವಾರ ಭಾರತ ಎ ತಂಡವನ್ನು ಆಯ್ಕೆ ಮಾಡಲಾಗಿತ್ತು. ರಿಷಭ್ ಪಂತ್ ನಾಯಕತ್ವದ ತಂಡದಲ್ಲಿ ಸರ್ಫರಾಜ್ ಖಾನ್ ಅವರಿಗೆ ಸ್ಥಾನ ಲಭಿಸಿಲ್ಲ.

ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಲಯದಲ್ಲಿದ್ದ ಸರ್ಫರಾಜ್ ಖಾನ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ನಲ್ಲಿ ಶಮಾ ಮೊಹಮ್ಮದ್ ಅವರು 'ರೋಹಿತ್ ಶರ್ಮಾ ಅವರು ಒಬ್ಬ ಕ್ರೀಡಾಪಟುವಿಗಿಂತ ದಪ್ಪವಾಗಿದ್ದಾರೆ' ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.