
ರಾಯಪುರ: ಎರಡು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾಗ, ಮತ್ತೆ ಟೀಂ ಇಂಡಿಯಾ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯುತ್ತೇನೆಯೋ, ಇಲ್ಲವೋ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ ಎಂದು ಎಡಗೈ ಬ್ಯಾಟರ್ ಇಶಾನ್ ಕಿಶನ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ–20 ಸರಣಿಯ 2ನೇ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ ಇಶಾನ್ ಕಿಶನ್, ಕೇವಲ 32 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ 209 ರನ್‌ಗಳ ಬೃಹತ್ ಗುರಿ ತಲುಪುವಲ್ಲಿ ಟೀಂ ಇಂಡಿಯಾಗೆ ನೆರವಾಗಿದ್ದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಇಶಾನ್ ಕಿಶನ್, ‘ತಂಡದಿಂದ ಹೊರಗುಳಿದಿದ್ದಾಗಲೂ, ನಾನು ಮತ್ತೆ ಟೀಂ ಇಂಡಿಯಾ ಪರ ಆಡುವ ವಿಶ್ವಾಸದಲ್ಲಿದ್ದೆ. ದೇಶಿ ಟೂರ್ನಿಯಲ್ಲಿ ಉತ್ತಮ ಆಟವಾಡುವ ಮೂಲಕ, ಭಾರತ ಪರ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದೆ‘ ಎಂದು ಹೇಳಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಗಳಿಸುವುದರ ಜತೆ, ನಾಯಕನಾಗಿ ಜಾರ್ಖಂಡ್ ತಂಡವನ್ನು ಪ್ರಶಸ್ತಿ ಗೆಲ್ಲಿಸುವಂತೆ ಮಾಡಿದ್ದು, ಹೆಚ್ಚಿನ ಆತ್ಮವಿಶ್ವಾಸ ನೀಡಿತ್ತು ಎಂದಿದ್ದಾರೆ.
ಫೆ.7ರಿಂದ ಆರಂಭವಾಗಲಿರುವ ಟಿ–20 ವಿಶ್ವಕಪ್ ತಂಡದಲ್ಲೂ ಇಶಾನ್ ಕಿಶನ್ ಸ್ಥಾನಪಡೆದಿದ್ದಾರೆ. ಗಾಯಗೊಂಡಿರುವ ತಿಲಕ್ ವರ್ಮಾ ತಂಡಕ್ಕೆ ಮರಳಿ ಬಂದರೆ, ಲಯ ಕಳೆದುಕೊಂಡಿರುವ ಸಂಜು ಸ್ಯಾಮ್ಸನ್ ಜಾಗದಲ್ಲಿ ಕಿಶನ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.