ಹೈದರಾಬಾದ್: ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಅವರಿಗೆ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ಅಲ್ಲದೇ ಒಂದು ಡಿಮೆರಿಟ್ ಅಂಕವನ್ನೂ ಅವರ ಖಾತೆಗೆ ಸೇರಿಸಲಾಗಿದೆ.
ಭಾನುವಾರ ರಾತ್ರಿ ಸನ್‌ರೈಸರ್ಸ್ ಹೈದರಾಬಾದ್ ಎದುರು ನಡೆದ ಪಂದ್ಯದಲ್ಲಿ ಅವರು ಅಶಿಸ್ತು ಪ್ರದರ್ಶಿಸಿದ ಕಾರಣಕ್ಕೆ ಐಪಿಎಲ್‌ನ 2.2 ನೇ ನಿಯಮದಡಿಯಲ್ಲಿ ಪಂದ್ಯ ಸಂಭಾವನೆಯ ಶೇ 25ರಷ್ಟು ಮೊತ್ತದ ದಂಡ ವಿಧಿಸಲಾಗಿದೆ.
‘ಪಂದ್ಯದ ಸಂದರ್ಭದಲ್ಲಿ ಕ್ರಿಕೆಟ್ ಸಲಕರಣೆಗಳು, ವಸ್ತ್ರ, ಮೈದಾನದ ಸಲಕರಣೆಗಳು ಅಥವಾ ಸೌಕರ್ಯ ಸಾಧನಗಳಿಗೆ ಹಾನಿ ಮಾಡಿದಾಗ ಈ ನಿಯಮದ ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ. ತಮ್ಮ ತಪ್ಪನ್ನು ಇಶಾಂತ್ ಕೂಡ ಒಪ್ಪಿಕೊಂಡಿದ್ದಾರೆ. ಪಂದ್ಯ ರೆಫರಿ ತೀರ್ಪು ಅಂತಿಮ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಶಾಂತ್ ಅವರು ಈ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 53 ರನ್‌ಗಳನ್ನು ಕೊಟ್ಟಿದ್ದರು. ವಿಕೆಟ್ ಕೂಡ ಗಳಿಸಿರಲಿಲ್ಲ.
ಈ ಪಂದ್ಯದಲ್ಲಿ ಗುಜರಾತ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು 7 ವಿಕೆಟ್‌ಗಳಿಂದ ಜಯಿಸಿತ್ತು. ವೇಗಿ ಮೊಹಮ್ಮದ್ ಸಿರಾಜ್ ಅವರು 4 ವಿಕೆಟ್ ಗಳಿಸಿ ಗುಜರಾತ್ ತಂಡದ ಜಯದ ರೂವಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.