ADVERTISEMENT

ಇಶಾಂತ್ ಗಾಯ; ಎನ್‌ಸಿಎ ಫಿಸಿಯೊ ಮೇಲೆ ಅಸಮಾಧಾನ?

ಪಿಟಿಐ
Published 29 ಫೆಬ್ರುವರಿ 2020, 19:17 IST
Last Updated 29 ಫೆಬ್ರುವರಿ 2020, 19:17 IST
ಇಶಾಂತ್ ಶರ್ಮಾ
ಇಶಾಂತ್ ಶರ್ಮಾ   

ಕ್ರೈಸ್ಟ್‌ಚರ್ಚ್: ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಅವರು ಪಾದದ ಗಾಯದಿಂದ ನ್ಯೂಜಿಲೆಂಡ್ ಎದುರಿನ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಈ ವಿಷಯವು ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯ ಫಿಸಿಯೊ ಆಶಿಶ್ ಕೌಶಿಕ್ ಅವರ ಮೇಲೆ ಆಕ್ರೋಶ ಮೂಡಲು ಕಾರಣವಾಗಿದೆ.

ಈ ಗಾಯದಿಂದಾಗಿ ಇಶಾಂತ್ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಸುತ್ತಿನ ಪಂದ್ಯಗಳನ್ನೂ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ವೆಲ್ಲಿಂಗ್ಟನ್‌ನಲ್ಲಿ ಮೊದಲ ಟೆಸ್ಟ್ ನಡೆಯುವ 72 ತಾಸುಗಳ ಮುನ್ನವಷ್ಟೇ ಇಶಾಂತ್ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ಬಂದಿಳಿದಿದ್ದರು. ಅದಕ್ಕೂ ಮೊದಲು ಅವರು ಎನ್‌ಸಿಎನಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಪಂದ್ಯದಲ್ಲಿ ಅವರು 23 ಓವರ್‌ಗಳನ್ನು ಬೌಲಿಂಗ್ ಮಾಡಿ ಐದು ವಿಕೆಟ್ ಗಳಿಸಿದ್ದರು. ಶುಕ್ರವಾರ ಅಭ್ಯಾಸದ ಸಂದರ್ಭದಲ್ಲಿ ಪಾದದ ನೋವು ಕಾಡಿದ್ದರಿಂದ ಸ್ಕ್ಯಾನಿಂಗ್‌ಗೆ ತೆರಳಿದ್ದರು. ನಂತರ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ADVERTISEMENT

‘ಈ ಹಿಂದೆ ಇಶಾಂತ್ ಅವರು ರಣಜಿ ಟೂರ್ನಿಯಲ್ಲಿ ಆಡುವಾಗ ದೆಹಲಿ ತಂಡದ ಫಿಸಿಯೊ ಆರು ವಾರಗಳ ವಿಶ್ರಾಂತಿ ಮತ್ತು ಚಿಕಿತ್ಸೆಗೆ ಸಲಹೆ ನೀಡಿದ್ದರು. ಆದರೆ, ಎನ್‌ಸಿಎನಲ್ಲಿ ಕೌಶಿಕ್ ಮತ್ತು ಅವರ ತಂಡವು ಕೇವಲ ಮೂರು ವಾರಗಳ ಆರೈಕೆಗೆ ಸಲಹೆ ನೀಡಿತ್ತು. ಆನಂತರ ಟೆಸ್ಟ್ ಸರಣಿಗೆ ತೆರಳಲು ಅನುಮತಿ ನೀಡಿತ್ತು. ಈ ರೀತಿ ನಿರ್ಧಾರ ಮಾಡಿದ್ದು ಹೇಗೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

ಮೊದಲ ಟೆಸ್ಟ್‌ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಇಶಾಂತ್, ‘ಇಲ್ಲಿಗೆ ಬರುವ ಮುನ್ನ ಎನ್‌ಸಿಎ ನೆಟ್ಸ್‌ನಲ್ಲಿ 21 ಓವರ್‌ಗಳ ಅಭ್ಯಾಸ ನಡೆಸಿದ್ದೆ’ ಎಂದಿದ್ದರು. ಅಲ್ಲದೇ ಕಿವೀಸ್‌ಗೆ ತೆರಳುವ ಮುನ್ನ ಇಶಾಂತ್ ಅವರು ಎನ್‌ಸಿಎದ ಕೌಶಿಕ್ ಅವರೊಂದಿಗೆ ಇದ್ದ ಸೆಲ್ಫಿ ಚಿತ್ರವನ್ನು ಟ್ವೀಟ್ ಮಾಡಿದ್ದರು. ಅಭಿನಂದನೆ ಕೂಡ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.