ವಿದರ್ಭ ತಂಡದ ಕರುಣ್ ನಾಯರ್ ಹಾಗೂ ಮುಂಬೈ ನಾಯಕ ಅಜಿಂಕ್ಯ ರಹಾನೆ
ಪಿಟಿಐ ಚಿತ್ರಗಳು
ನಾಗ್ಪುರ: ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಗಾಯಾಳಾಗಿದ್ದು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ದೂರವಾಗಿದೆ. ಆದರೂ ಮುಂಬೈ ತಂಡ ಸೋಮವಾರ ಇಲ್ಲಿ ಆರಂಭವಾಗುವ ಐದು ದಿನಗಳ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಫೇವರಿಟ್ ತಂಡವಾಗಿದೆ.
ಗಾಯದ ತೀವ್ರತೆ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಜೈಸ್ವಾಲ್ ಅವರು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ತೆರಳುವ ಸಂಭವವಿದೆ ಎಂದು ಪಿಟಿಐ ತಿಳಿಸಿದೆ. ಆದರೆ ಅವರಿಗಾಗಿರುವ ಗಾಯದ ಸಮಸ್ಯೆ ಏನೆಂದು ನಿರ್ದಿಷ್ಟವಾಗಿ ತಿಳಿಸಲಾಗಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅವರು ಭಾರತದ ‘ನಾನ್ ಟ್ರಾವೆಲಿಂಗ್ ರಿಸರ್ವ್ಸ್’ ಪಟ್ಟಿಯಲ್ಲಿದ್ದಾರೆ.
ಆದರೆ ಜೈಸ್ವಾಲ್ ಅವರ ಸಂಭವನೀಯ ಗೈರು ಮುಂಬೈ ತಂಡವನ್ನು ಬಾಧಿಸುವ ಸಾಧ್ಯತೆಯಿಲ್ಲ. ಅಜಿಂಕ್ಯ ರೆಹಾನೆ ನೇತೃತ್ವದ ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಅವರಂಥ ಅನುಭವಿಗಳಿದ್ದಾರೆ. ಪಂದ್ಯದ ದಿಕ್ಕನ್ನು ಬದಲಾಯಿಸುವ ಸಮರ್ಥ ಆಟಗಾರರು ಇವರು.
ತಾರೆಗಳ ಹೊರತಾಗಿಯೂ ಮುಂಬೈ ತಂಡದ ಕೆಚ್ಚಿನ ಪ್ರದರ್ಶನ ಆ ತಂಡದ ಯಶಸ್ಸಿನ ಗುಟ್ಟಾಗಿದೆ. ಮುಂಬೈ 42 ಬಾರಿ ಚಾಂಪಿಯನ್ ಆಗಿದೆ. ಪರಿಣತ ಬ್ಯಾಟರ್‌ಗಳು ಕೈಕೊಟ್ಟಾಗ ಕೆಳಕ್ರಮಾಂಕದ ಆಟಗಾರರಾದ ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ತಂಡವನ್ನು ರಕ್ಷಿಸಿದ್ದಾರೆ.
ಹರಿಯಾಣ ಎದುರಿನ ಎಂಟರ ಘಟ್ಟದ ಪಂದ್ಯದಲ್ಲಿ ಮುಂಬೈ 7 ವಿಕೆಟ್‌ಗೆ 113 ರನ್ ಗಳಿಸಿ ಕುಸಿಯುವ ಭೀತಿಯಲ್ಲಿದ್ದಾಗ ಶಮ್ಸ್ ಮುಲಾನಿ ಮತ್ತು ಕೋಟ್ಯಾನ್ ಎಂಟನೇ ವಿಕೆಟ್‌ಗೆ 183 ರನ್ ಸೇರಿಸಿದ್ದು ತಾಜಾ ಉದಾಹರಣೆ.
ಇನ್ನೊಂದು ಕಡೆ ಅಕ್ಷಯ ವಾಡ್ಕರ್ ನೇತೃತ್ವದ ವಿದರ್ಭ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದೆ. ತಂಡದಲ್ಲಿ ಖ್ಯಾತನಾಮ ಬೌಲರ್‌ಗಳಿಲ್ಲದಿದ್ದರೂ, ಹರ್ಷ ದುಬೆ, ಯಶ್ ಠಾಕೂರ್, ಆದಿತ್ಯ ಠಾಕರೆ, ನಚಿಕೇತ್ ಭೂತೆ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಎಡಗೈ ಸ್ಪಿನ್ನರ್ ದುಬೆ ಈ ಬಾರಿಯ ರಣಜಿ ಋತುವಿನಲ್ಲಿ 59 ವಿಕೆಟ್ ಕಿತ್ತು ಬೌಲರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂಬೈ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ದೌರ್ಬಲ್ಯದ ಲಾಭ ಪಡೆಯುವ ಹವಣಿಕೆಯಲ್ಲಿ ವಿದರ್ಭ ಇದೆ. ಈ ಬಾರಿ ಅತ್ಯಧಿಕ ರನ್ ಗಳಿಸಿರುವ ಅಗ್ರ 20 ಬ್ಯಾಟರ್‌ಗಳ ಪಟ್ಟಿಯಲ್ಲಿ ಮುಂಬೈನ ಯಾವುದೇ ಬ್ಯಾಟರ್ ಇಲ್ಲ. 565 ರನ್ ಪೇರಿಸಿರುವ ಸಿದ್ದೇಶ್ ಲಾಡ್ 22ನೇ ಸ್ಥಾನದಲ್ಲಿದ್ದಾರೆ.
ವಿದರ್ಭದ ಪ್ರಮುಖ ಬ್ಯಾಟರ್ ಯಶ್ ಠಾಥೋಡ್ ಈ ಬಾರಿ 728 ರನ್ ಗಳಿಸಿದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಕರುಣ್ ನಾಯರ್ (591) ಮತ್ತು ಅಕ್ಷಯ್ ವಾಡ್ಕರ್ (588) ಅವರೂ ಹಲವು ಉಪಯುಕ್ತ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಈ ತಂಡ ಆರಂಭ ಆಟಗಾರರಾದ ಅಥರ್ವ ತೈಡೆ ಮತ್ತು ಧ್ರುವ್ ಶೋರೆ ಅವರಿಂದ ಉಪಯುಕ್ತ ಆಟ ನಿರೀಕ್ಷಿಸುತ್ತಿದೆ.
ಪಂದ್ಯ ಆರಂಭ: ಬೆಳಿಗ್ಗೆ 9.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.