ADVERTISEMENT

ಜಮ್ಮು ಮತ್ತು ಕಾಶ್ಮೀರಕ್ಕೆ ರಣಜಿ ಟ್ರೋಫಿ: ಜಮ್ಮುವಿನಲ್ಲಿ ಸಂಭ್ರಮ...

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 14:40 IST
Last Updated 28 ಫೆಬ್ರುವರಿ 2026, 14:40 IST
<div class="paragraphs"><p> &nbsp;ಜಮ್ಮು ಮತ್ತು ಕಾಶ್ಮೀರ ತಂಡದ ಶುಭಂ ಪುಂದೀರ ಅವರ ಬ್ಯಾಟಿಂಗ್ ವೈಖರಿ -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ</p></div>

 ಜಮ್ಮು ಮತ್ತು ಕಾಶ್ಮೀರ ತಂಡದ ಶುಭಂ ಪುಂದೀರ ಅವರ ಬ್ಯಾಟಿಂಗ್ ವೈಖರಿ -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

   

ಜಮ್ಮು (ಪಿಟಿಐ): ಕರ್ನಾಟಕವನ್ನು ಸೋಲಿಸಿ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಬಾರಿ ರಣಜಿ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆಗೈದ ಬೆನ್ನಲ್ಲೇ ರಾಜ್ಯದ ಹಲವೆಡೆ ಸಂಭ್ರಮ, ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಮಾಜಿ ಕ್ರಿಕೆಟಿಗರು ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ.

ಜಮ್ಮುವಿನಲ್ಲಿ ನೂರಾರು ಕ್ರಿಕೆಟ್‌ಪ್ರಿಯರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಸಂಸ್ಥೆ ಆವರಣದಲ್ಲಿ ಜಮಾಯಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಆಟಗಾರರ ಕುಟುಂಬದವರು ಸಿಹಿ ಹಂಚಿದರು. ಸಂಬಂಧಿಕರು ಆಟಗಾರರ ಮನೆಗಳಿಗೆ ತೆರಳಿ ಅವರ ಸಡಗರದಲ್ಲಿ ಪಾಲ್ಗೊಂಡರು.

ADVERTISEMENT

‘ತಂಡ ಟ್ರೋಫಿ ಗೆಲ್ಲಬಹುದೆಂಬ ನಂಬಿಕೆ ಹೊಂದಿದ್ದೆವು’ ಎಂದು ವೇಗದ ಬೌಲರ್ ಯುದ್ಧವೀರ್ ಸಿಂಗ್ ಅವರ ಸೋದರಿ, ವೃತ್ತಿಯಿಂದ ವಕೀಲೆ ಆಗಿರುವ ಪ್ರೀತಿ ಚರಕ್ ಹೇಳಿದರು.

‘ಕೇಂದ್ರಾಡಳಿತ ಪ್ರದೇಶದ ಕ್ರಿಕೆಟ್ ಇತಿಹಾಸದಲ್ಲಿ ಇದು ಸ್ಮರಣೀಯ ಗಳಿಗೆ’ ಎಂದು ಮಾಜಿ ಆಟಗಾರ ಜತಿನ್ ವಾಧ್ವಾನ್ ಹೇಳಿದರು. ಅವರು ಜಮ್ಮು ಮತ್ತು ಕಾಶ್ಮೀರ ತಂಡ ವಿಕೆಟ್‌ ಕೀಪರ್ ಕನ್ಹಯ್ಯ ವಾಧ್ವಾನ್ ಅವರ ಅಣ್ಣ. ‘ನಮ್ಮ ಕಾಲದಲ್ಲೂ ಈ ಕಸನು ಕಂಡಿದ್ದೆವು. ಆದರೆ ಇಂದು ಕನಸು ಸಾಕಾರಗೊಂಡಿದೆ’ ಎಂದರು.

ಸುನೀಲ್ ಕುಮಾರ್ ಅವರ ಊರಾದ ಅಖನೂರಿನ ಕಥರ್ ಗ್ರಾಮದಲ್ಲೂ ಸಂಭ್ರಮ ಮನೆಮಾಡಿತ್ತು. ನೂರಾರು ಜನರು ಡೋಲು, ತಮಟೆಗಳನ್ನು ಬಾರಿಸಿ ಕುಟುಂಬದವರ ಸಂಭ್ರಮದಲ್ಲಿ ಭಾಗಿಯಾದರು.

‘ನನ್ನ ಮಗ ಹೆಮ್ಮೆ ಮೂಡಿಸಿದ್ದಾನೆ. ಬಾಲ್ಯದಲ್ಲಿ ಅವನು ಬ್ಯಾಟ್‌ ಬಿಟ್ಟು ಬೇರೆ ಆಟಿಕೆ ಮುಟ್ಟುತ್ತಿರಲಿಲ್ಲ’ ಎಂದು ವೇಗದ ಬೌಲರ್ ಸುನೀಲ್ ಕುಮಾರ್ ಅವರ ತಂದೆ ರಾಮಲಾಲ್ ವರ್ಮಾ ತಿಳಿಸಿದ್ದಾರೆ.

ಜಮ್ಮು–ಕಾಶ್ಮೀರ ತಂಡವನ್ನು ಮೂರೂ ಮಾದರಿಗಳಲ್ಲಿ ಪ್ರತಿನಿಧಿಸಿದ್ದ ಮತ್ತು ಬೌಲಿಂಗ್ ಕೋಚ್ ಕೂಡ ಆಗಿದ್ದ ಶಫ್ಕತ್ ಬಾಬಾ ಪ್ರತಿಕ್ರಿಯಿಸಿ ‘ಎಳೆಯ ಕ್ರಿಕೆಟಿಗರು ಕನಸು ಕಾಣಲು ಈ ಸಾಧನೆ ಪ್ರೇರಣೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.