ADVERTISEMENT

Jemimah Rodrigues: ಹುಡುಗಾಟದ ಹುಡುಗಿ ಜಿಮಿಮಾ ಆಟವೂ ಅಮೋಘ

ಗಿರೀಶ ದೊಡ್ಡಮನಿ
Published 31 ಅಕ್ಟೋಬರ್ 2025, 4:26 IST
Last Updated 31 ಅಕ್ಟೋಬರ್ 2025, 4:26 IST
ಜೆಮಿಮಾ ರಾಡ್ರಿಗಸ್ 
ಜೆಮಿಮಾ ರಾಡ್ರಿಗಸ್    

ಜೆಮಿಮಾ ರಾಡ್ರಿಗಸ್...ಈ ಹೆಸರನ್ನು ಗೂಗಲ್‌ ಸರ್ಚ್‌ನಲ್ಲಿ ಹಾಕಿ ನೋಡಿ.  ಬ್ಯಾಟ್ ಅನ್ನೇ ಗಿಟಾರ್‌ನಂತೆ ಹಿಡಿದುಕೊಂಡ  ಅಥವಾ ಗಿಟಾರ್ ಜೊತೆಗೆ, ಇಲ್ಲವೇ ತನ್ನ ನೆಚ್ಚಿನ ಶ್ವಾನ ಜೇಡ್‌ ಜೊತೆಗೆ ಆಟವಾಡುವ ಜಿಮಿಮಾ ಚಿತ್ರಗಳು  ಗಮನ ಸೆಳೆಯುತ್ತವೆ. ಸಹ ಆಟಗಾರ್ತಿಯರೊಂದಿಗೆ ನರ್ತಿಸುವ, ಹಾಡು ಹೇಳುವ  ಜೆಮಿಮಾ ವಿಡಿಯೊಗಳೂ ಹತ್ತಾರು ಸಿಗುತ್ತವೆ. 

ಆದರೆ ಇನ್ನು ಮುಂದೆ  ಇಂಟರ್‌ನೆಟ್ ಲೋಕವು ಜೆಮಿಮಾ ಕುರಿತ ವ್ಯಾಖ್ಯಾನ ಬದಲಿಸುವುದು ಖಚಿತ. ಗುರುವಾರ ರಾತ್ರಿ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಬಲಾಢ್ಯ ಆಸ್ಟ್ರೇಲಿಯಾ ಎದುರು ಸಿಡಿಸಿದ ಶತಕ ಮತ್ತು ಭಾರತ ತಂಡವನ್ನು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಕೊಂಡೊಯ್ದ ರೀತಿಯು ‘ಗೂಗಲ್ ಸರ್ಚ್‌’ನಲ್ಲಿ ಅಗ್ರಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ. 

2017ರಲ್ಲಿ ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಇಂತಹದೊಂದು ಶತಕ ಬಾರಿಸಿ ಭಾರತವನ್ನು ಗೆಲ್ಲಿಸಿದ್ದರು. ಆದರೆ ಫೈನಲ್‌ನಲ್ಲಿ ಗೆಲುವು ಒಲಿಯಲಿಲ್ಲ. ಇದೀಗ ಕೌರ್ ನಾಯಕಿಯಾಗಿರುವ ತಂಡವನ್ನು ಜೆಮಿಮಾ ಫೈನಲ್ ತಲುಪಿಸಿದ್ದಾರೆ. ಭಾನುವಾರ ನಡೆಯುವ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.  ಉಭಯ ತಂಡಗಳೂ  ತಮ್ಮ ಚೊಚ್ಚಲ ಐಸಿಸಿ ಟ್ರೋಫಿ ಗೆಲುವಿಗಾಗಿ ಸೆಣೆಸಲಿವೆ. 

ADVERTISEMENT

ಮುಂಬೈನ ಜೆಮಿಮಾ 2018ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ‘ಬೋಲ್ಡ್ ಅ್ಯಂಡ್ ಆ್ಯಕ್ಟಿವ್‌’ ಹುಡುಗಿಯೆನಿಸಿಕೊಂಡಿದ್ದ ಜಿಮಿಮಾ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಸ್ಥಾನ ಪಡೆದವರು.  ಮಿಥಾಲಿ ರಾಜ್, ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಹಲವು ಉತ್ತಮ ಬ್ಯಾಟರ್‌ಗಳು ತಂಡದಲ್ಲಿದ್ದ ಸಮಯ ಅದು. ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಜೆಮಿಮಾ ಬ್ಯಾಟಿಂಗ್ ಬಂದಿದ್ದೇ ಹೆಚ್ಚು.  

ಆದ್ದರಿಂದಲೇ ಅವರು ಗಳಿಸಿದ ದೊಡ್ಡ ಮೊತ್ತಗಳು ಕಡಿಮೆ. ಗುರುವಾರ ಅವರು ದಾಖಲಿಸಿದ್ದು ತಮ್ಮ ಏಕದಿನ ಕ್ರಿಕೆಟ್‌ನ ಮೂರನೇ ಶತಕ. ಅಲ್ಲದೇ ವೈಯಕ್ತಿಕ ಶ್ರೇಷ್ಠ (ಅಜೇಯ 127) ಸ್ಕೋರ್ ಕೂಡ ಹೌದು.  ಅವರ ಎಲ್ಲ ಮೂರು ಶತಕಗಳೂ 2025ರಲ್ಲಿಯೇ ದಾಖಲಾಗಿರುವುದು ವಿಶೇಷ.  ಒಟ್ಟು 58 ಏಕದಿನ ಪಂದ್ಯಗಳಿಂದ 1725 ರನ್ ಕಲೆಹಾಕಿದ್ದಾರೆ. ಅದರಲ್ಲಿ 8 ಅರ್ಧಶತಕಗಳು ಇವೆ. 

ಅವೆಲ್ಲವುಗಳಿಗಿಂತಲೂ  ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನಲ್ಲಿ ದಾಖಲಾದ ಜಿಮಿಮಾ ಶತಕದ ತೂಕವೇ ಹೆಚ್ಚು. ಏಕೆಂದರೆ. ಈ ಪಂದ್ಯದಲ್ಲಿ ಭಾರತದ ವನಿತೆಯರು ಬೆನ್ನಟ್ಟಿದ್ದು 339 ರನ್‌ಗಳ ಗುರಿ ಎಂಬುದು ಇಲ್ಲಿ ಗಮನಾರ್ಹ. ಕಿಮ್ ಗಾರ್ತ್ ಅವರ ಪರಿಣಾಮಕಾರಿ ದಾಳಿಗೆ ಭಾರತದ ಆರಂಭಿಕ ಜೋಡಿ ಶಫಾಲಿ ವರ್ಮಾ (10 ರನ್) ಮತ್ತು ಸ್ಮೃತಿ ಮಂದಾನ (24 ರನ್) ಬೇಗನೆ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜೆಮಿಮಾ ಮತ್ತು  ಅವರ ಜೊತೆಗೂಡಿದ ನಾಯಕಿ ಹರ್ಮನ್ ತಂಡದ ಹೋರಾಟಕ್ಕೆ ಬಲ ತುಂಬಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ167 ರನ್ ಸೇರಿಸಿದರು.

89 ರನ್ ಗಳಿಸಿದ ಹರ್ಮನ್ ಔಟಾದಾಗ, ಇನಿಂಗ್ಸ್‌ ಇನ್ನೇನು ಕುಸಿಯುತ್ತದೆ ಎಂಬ ಆತಂಕ ಮೂಡಿತ್ತು. ಆದರೆ ಜೆಮಿಮಾ ಜಗ್ಗಲಿಲ್ಲ. ಏಕಾಂಗಿಯಾಗಿ ಹೋರಾಡಿದರು. ಹರ್ಮನ್ ಕೊಟ್ಟ ಹೊಣೆಯನ್ನು ದಿಟ್ಟವಾಗಿ ನಿಭಾಯಿಸಿದರು.  

ಜೆಮಿಮಾ ರಾಡ್ರಿಗಸ್ 

ರಿವರ್ಸ್ ಸ್ವೀಪ್, ಸ್ಕೂಪ್, ಡ್ರೈವ್, ಲೇಟ್ ಕಟ್ ಗಳ ಮೂಲಕ ಆಸ್ಟ್ರೇಲಿಯಾ ಫೀಲ್ಡರ್‌ಗಳ ಭದ್ರಕೋಟೆಯನ್ನು ಪುಡಿಗಟ್ಟಿದರು. ಆಸ್ಟ್ರೇಲಿಯಾ ಬೌಲರ್‌ಗಳು ನಿರುತ್ತರರಾದರು. ಬೆಟ್ಟದಂತಿದ್ದ ಗುರಿ ಮೆಲ್ಲಗೆ ಕರಗಿತು. ಇನ್ನೊಂದು ಬದಿಯಲ್ಲಿದ್ದ ಬ್ಯಾಟರ್‌ಗಳ ವಿಕೆಟ್ ಉರುಳಿಸಿ ಗೆಲುವು ಸಾಧಿಸುವ ಆಸ್ಟ್ರೇಲಿಯಾ ತಂತ್ರ ಪೂರ್ಣಫಲ ನೀಡಲಿಲ್ಲ. ಅದಕ್ಕೂ ಜೆಮಿಮಾ ಅವರೇ ಅಡ್ಡಿಯಾದರು. ಅಚ್ಚುಕಟ್ಟಾಗಿ ಹೊಣೆ ನಿಭಾಯಿಸಿದ ಅವರು ಗೆಲುವಿನ ದಡ ದಾಟುವವರೆಗೂ ಸಂಯಮ ಕಳೆದುಕೊಳ್ಳಲಿಲ್ಲ. ತಂಡದ ಗೆಲುವು ಖಚಿತವಾಗುತ್ತಿದ್ದಂತೆ ಭಾವುಕರಾಗಿ ನೆಲಕ್ಕೆ ಮಂಡಿಯೂರಿದರು. ಸದಾ ನಗುನಗುತ್ತ ತಮ್ಮ ತಂಡದವರನ್ನೂ ನಗಿಸುತ್ತ ಇರುತ್ತಿದ್ದ ಜೆಮಿಮಾ ಕಂಗಳಲ್ಲಿ ಆನಂದಭಾಷ್ಪ ಧಾರೆಯಾಗಿತ್ತು. ಇತ್ತ ಡಗ್‌ಔಟ್‌ನಲ್ಲಿಯೂ ಭಾವುಕತೆಯ ನದಿ ಹರಿಯಿತು. ಕೋಚ್ ಅಮೋಲ್ ಮಜುಂದಾರ್, ನಾಯಕಿ ಕೌರ್, ಸ್ಮೃತಿ, ದೀಪ್ತಿ, ರೇಣುಕಾಸಿಂಗ್, ಶ್ರೀಚರಣಿ ಸೇರಿದಂತೆ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಅಷ್ಟೇ ಏಕೆ; ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದ ಭಾರತದ ಮಾಜಿ ಆಟಗಾರ್ತಿಯರೂ ಗದ್ಗದಿತರಾದರು. ಕೋಟ್ಯಂತರ ಕ್ರಿಕೆಟ್ ಪ್ರಿಯರ ಕಂಗಳಲ್ಲಿಯೂ ಆನಂದಭಾಷ್ಪ ಜಿನುಗಿತು. ಜೊತೆಗೆ ವಿಶ್ವಕಪ್ ವಿಜಯದ ಕನಸು ಚಿಗುರೊಡೆಯಿತು.

ಜೆಮಿಮಾ ರಾಡ್ರಿಗಸ್

ಭಾರತ ವನಿತೆಯರ ಕ್ರಿಕೆಟ್ ತಂಡದ ದಶಕಗಳ ಕನಸು ವಿಶ್ವಕಪ್ ವಿಜಯಕ್ಕೆ  ಇನ್ನೊಂದು ಹೆಜ್ಜೆ ಬಾಕಿ ಇದೆ. ದಕ್ಷಿಣ ಆಫ್ರಿಕಾದ ಸವಾಲು ಮೀರಿ ನಿಂತರೆ ಭಾರತದಲ್ಲಿಯೂ ಮಹಿಳಾ ಕ್ರಿಕೆಟ್‌ನ ಹೊಸ ಅಧ್ಯಾಯ ಆರಂಭವಾಗುವುದು ಖಚಿತ. ಪ್ರಸ್ತುತ ತಂಡದ  ಆಟಗಾರ್ತಿಯರಿಗೆ ಸೋಲುಗಳನ್ನು ನುಂಗಿ, ಅವಮಾನಗಳನ್ನು ಸಹಿಸಿ, ಗೆಲುವಿನ ಮೆಟ್ಟಿಲು   ಏರುವುದು ಹೇಗೆ ಎಂಬುದು ಗೊತ್ತು. ಅದಕ್ಕೆ ತಕ್ಕ ಗಟ್ಟಿ ಮನೋಬಲ ಮತ್ತು ಛಲ ಕೂಡ ಅವರಲ್ಲಿದೆ ಎಂಬುದು ಸೆಮಿಫೈನಲ್‌ನಲ್ಲಿ ಸಾಬೀತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.