ADVERTISEMENT

ಭಾರತ–ಶ್ರೀಲಂಕಾ ಪಂದ್ಯದ ವೇಳೆ ಆಗಸದಲ್ಲಿ ಕಾಶ್ಮೀರದ ಘೋಷಣೆ!

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 17:54 IST
Last Updated 6 ಜುಲೈ 2019, 17:54 IST
   

ಲೀಡ್ಸ್‌: ಶನಿವಾರ ಭಾರತ ಮತ್ತು ಶ್ರೀಲಂಕಾ ಪಂದ್ಯ ಆಯೋಜನೆಯಾಗಿದ್ದ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ಹಾರಾಟ ನಡೆಸಿದ ವಿಮಾನ ಕಾಶ್ಮೀರ ಪರವಾದ ಬ್ಯಾನರ್‌ ಪ್ರದರ್ಶಿಸುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೆ ರಾಜಕೀಯ ವಿಷಯ ಮುನ್ನೆಲೆಗೆ ಬಂದಿದೆ.

ಪಂದ್ಯ ಆರಂಭದ ಕೆಲ ಸಮಯದಲ್ಲೇ ವಿಮಾನವೊಂದು ಮೈದಾನದ ಮೇಲೆ ಹಾರಾಟ ನಡೆಸಿತು. ’ಜಸ್ಟಿಸ್‌ ಫಾರ್‌ ಕಾಶ್ಮೀರ್’(ಕಾಶ್ಮೀರಕ್ಕೆ ನ್ಯಾಯ) ಎಂಬ ಬರಹವನ್ನು ಮುದ್ರಿಸಿಕೊಂಡಿದ್ದಬ್ಯಾನರ್‌ನ್ನು ಬಾಲಂಗೋಚಿಯಾಗಿ ಕಟ್ಟಿಕೊಂಡು ಹಾರಾಡಿತು.

ಹತ್ತು ದಿನಗಳಲ್ಲಿ ಅಂತರದಲ್ಲಿ ವಿಶ್ವಕಪ್‌ ಟೂರ್ನಿಯ ವೇಳೆ ನಡೆದಿರುವ ಎರಡನೇ ಘಟನೆ ಇದಾಗಿದೆ. ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ’ಜಸ್ಟಿಸ್‌ ಫಾರ್‌ ಬಲೂಚಿಸ್ತಾನ್‌’ ಎಂಬ ಘೋಷಣೆ ಒಳಗೊಂಡ ಬ್ಯಾನರ್‌ ಕಟ್ಟಿಕೊಂಡು ವಿಮಾನ ಹಾರಾಡಿತ್ತು. ಅಫ್ಗಾನ್ ಮತ್ತು ಪಾಕಿಸ್ತಾನ ತಂಡಗಳ ಅಭಿಮಾನಿಗಳ ನಡುವೆ ಇದು ಘರ್ಷಣೆಗೂ ಕಾರಣವಾಗಿತ್ತು. ಬ್ರ್ಯಾಡ್‌ಫೋರ್ಡ್ ವಿಮಾನ ನಿಲ್ದಾಣದಲ್ಲಿ ಆ ಅನಾಮಧೇಯ ವಿಮಾನ ನಿಲುಗಡೆಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಐಸಿಸಿ ರಾಜಕೀಯ ಸಂಬಂಧಿತ ಘೋಷಣೆಗಳನ್ನು ಸಂಸ್ಥೆ ಸಹಿಸುವುದಿಲ್ಲ, ಈ ಬಗ್ಗೆ ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಸೂ‌ಕ್ತ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದಿತ್ತು. ಆದರೆ, ಮತ್ತೆ ಅಂತದ್ದೇ ಘಟನೆ ಭಾರತ–ಶ್ರೀಲಂಕಾ ಪಂದ್ಯದ ವೇಳೆ ನಡೆದಿದೆ.

ಇಂಗ್ಲೆಂಡ್‌ನ ಉತ್ತರ ಭಾಗವಾದ ಯಾರ್ಕ್‌ಶೈರ್‌ನಲ್ಲಿ ಪಾಕಿಸ್ತಾನಿಯರ ಸಂಖ್ಯೆ ಹೆಚ್ಚು, ಅದರಲ್ಲೂ ಬ್ರ್ಯಾಡ್‌ಫೋರ್ಡ್‌ ಪ್ರದೇಶದಲ್ಲಿ ಅತಿ ಹೆಚ್ಚು ಪಾಕಿಸ್ತಾನಿಯರು ವಾಸಿಸುತ್ತಿದ್ದಾರೆ.

ಐಸಿಸಿ ಭದ್ರತಾ ತಂಡ ಘಟನೆಯ ವಿವರಗಳನ್ನು ಕಲೆಹಾಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.