ADVERTISEMENT

ಕ್ರಿಕೆಟ್‌: 5 ವಿಕೆಟ್ ಉರುಳಿಸಿದ ‘ಚೈನಾಮನ್‌’ ಕೈವಲ್ಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 10:37 IST
Last Updated 30 ಆಗಸ್ಟ್ 2021, 10:37 IST
ಕ್ರಿಕೆಟ್‌–ಪ್ರಾತಿನಿಧಿಕ ಚಿತ್ರ
ಕ್ರಿಕೆಟ್‌–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಚೈನಾಮನ್ ಶೈಲಿಯ ಬೌಲರ್ ಕೈವಲ್ಯ ಐದು ವಿಕೆಟ್ ಉರುಳಿಸಿ ಮಿಂಚಿದರು. ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ಪರಿಣಾಮ ಜವಾಹರ್ ಕ್ಲಬ್, ಕೆಎಸ್‌ಸಿಎ19 ವರ್ಷದೊಳಗಿನವರ ಗುಂಪು–1ರ 1,2,3ನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.

ಅಂತರ ಕ್ಲಬ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಜವಾಹರ್ ಕ್ಲಬ್ ವಲ್ಚರ್ಸ್ ಕ್ರಿಕೆಟ್ ಕ್ಲಬ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಆರ್‌ಎಸ್‌ಐ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಲ್ಚರ್ಸ್‌ ಉತ್ತಮ ಆರಂಭ ಕಂಡಿತ್ತು. 19 ಓವರ್‌ಗಳಲ್ಲಿ ಆ ತಂಡ ಮೂರು ವಿಕೆಟ್‌ಗಳಿಗೆ 109 ರನ್ ಗಳಿಸಿತ್ತು.

ಆದರೆ ಕೈವಲ್ಯ ದಾಳಿಗೆ (4-0-10-5) ತಂಡ 157 ರನ್ ಗಳಿಸಿ ಆಲೌಟ್‌ ಆಯಿತು. ಮಳೆ ಬಂದ ಕಾರಣ ಗೆಲುವಿನ ಗುರಿಯನ್ನು 31 ಓವರ್‌ಗಳಲ್ಲಿ 145ಕ್ಕೆ ನಿಗದಿ ಮಾಡಲಾಯಿತು. ಜವಾಹರ್ ಕ್ಲಬ್ ಸುಲಭವಾಗಿ ಜಯ ಸಾಧಿಸಿತು. ಚೈತನ್ಯ 52 ರನ್ ಗಳಿಸಿ ಔಟಾಗದೇ ಉಳಿದರು.

ADVERTISEMENT

ಮತ್ತೊಂದು ಸೆಮಿಫೈನಲ್‌ನಲ್ಲಿ ಫ್ರೆಂಡ್ಸ್‌ ಯೂನಿಯನ್ ಕ್ಲಬ್ ವಿರುದ್ಧ ವಿಜಯ ಕ್ರಿಕೆಟ್ ಕ್ಲಬ್‌ 86 ರನ್‌ಗಳ ಜಯ ಸಾಧಿಸಿತು. ವಿಜಯ ಕ್ರಿಕೆಟ್ ಕ್ಲಬ್ 42 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 263 ರನ್ ಗಳಿಸಿತ್ತು. ಫ್ರೆಂಡ್ಸ್‌ ಯೂನಿಯನ್ 40 ಓವರ್‌ಗಳಲ್ಲಿ 177 ರನ್‌ಗಳಿಗೆ ಆಲೌಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.