ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಟಾಸ್‌ಗೂ ಮುನ್ನ ತಂಡ ಸೇರಿದ್ದ ಕಮ್ರಾನ್‌

ಸತೀಶ ಬಿ.
Published 28 ಫೆಬ್ರುವರಿ 2026, 23:30 IST
Last Updated 28 ಫೆಬ್ರುವರಿ 2026, 23:30 IST
<div class="paragraphs"><p>ಕಮ್ರಾನ್‌‌ ಇಕ್ಬಾಲ್</p></div>

ಕಮ್ರಾನ್‌‌ ಇಕ್ಬಾಲ್

   

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರ ತಂಡದ ಆರಂಭಿಕ ಬ್ಯಾಟರ್ ಕಮ್ರನ್‌ ಇಕ್ಬಾಲ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದರು. ಅದರೊಂದಿಗೆ ಪಂದ್ಯ ಸಂಪೂರ್ಣವಾಗಿ ಆತಿಥೇಯ ತಂಡದಿಂದ ಕೈಜಾರುವಂತೆ ಮಾಡಿದರು.

ಫೈನಲ್‌ ಪಂದ್ಯ ಆರಂಭದ ಹಿಂದಿನ ದಿನದವರೆಗೂ ಇಕ್ಬಾಲ್ ಅವರ ಹೆಸರು ಆಡುವ 11ರ ಬಳಗದಲ್ಲಿ ಇರಲಿಲ್ಲ. ಅಭ್ಯಾಸದ ವೇಳೆ ಆರಂಭಿಕ ಬ್ಯಾಟರ್ ಶುಭಂ ಖಜೂರಿಯಾ ಬೆನ್ನು ನೋವಿನಿಂದ ಬಳಲಿದ್ದರಿಂದ ಫೈನಲ್ ಪಂದ್ಯಕ್ಕೆ ಅಲಭ್ಯರಾದರು. ಹೀಗಾಗಿ ಕಮ್ರನ್‌ಗೆ ತುರ್ತು ಬುಲಾವ್ ನೀಡಲಾಯಿತು. ರಾತ್ರಿ 11.30ಕ್ಕೆ ದೆಹಲಿಯಿಂದ ಹೊರಟ ಕಮ್ರನ್ ರಾತ್ರಿ 1.55ಕ್ಕೆ ಮುಂಬೈ ತಲುಪಿದರು. ಅಲ್ಲಿ ನಾಲ್ಕು ತಾಸು ಕಾಯ್ದು, ಬೆಳಿಗ್ಗೆ 6.15ಕ್ಕೆ ಮುಂಬೈನಿಂದ ಹೊರಟು, ಪಂದ್ಯದ ದಿನ ಟಾಸ್‌ಗೂ ಅರ್ಧ ಗಂಟೆ ಮುನ್ನ ಕ್ರೀಡಾಂಗಣ ತಲುಪಿದರು.

ADVERTISEMENT

ಅನಿರೀಕ್ಷಿತ ಅವಕಾಶದಿಂದ ತಂಡವನ್ನು ಸೇರಿಕೊಂಡ ಅವರಿಗೆ ಸಿಕ್ಕಿದ್ದು ಇನಿಂಗ್ಸ್ ಆರಂಭಿಸುವ ಜವಾಬ್ದಾರಿ. ಮೊದಲ ಇನಿಂಗ್ಸ್‌ನಲ್ಲಿ ಕೇವಲ‌ 6 ರನ್ ಗಳಿಸಿ ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಆಟವಾಡಿ ಆತಿಥೇಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ತಮ್ಮ ವೈಯಕ್ತಿಕ ಗರಿಷ್ಠ ಮೊತ್ತವನ್ನು (ಅಜೇಯ 160) ಸಹ ಹೆಚ್ಚಿಸಿಕೊಂಡರು.

ಶುಕ್ರವಾರ ನಾಲ್ಕನೇ ದಿನದಾಟ ಆರಂಭಿಸಿದ್ದ ಜಮ್ಮು–ಕಾಶ್ಮೀರ ತಂಡವನ್ನು ಬೇಗ ಆಲ್‌ಔಟ್ ಮಾಡಿ‌ ಗೆಲುವಿಗೆ ಪ್ರಯತ್ನಿಸುವ ಸಣ್ಣ ಅವಕಾಶವೊಂದು ಕರ್ನಾಟಕ ತಂಡಕ್ಕೆ ಇತ್ತು. ಅದಕ್ಕೆ ತಕ್ಕಂತೆ ವೇಗಿಗಳಾದ ಪ್ರಸಿದ್ಧ ಕೃಷ್ಣ, ವೈಶಾಖ ವಿಜಯ ಕುಮಾರ ಅವರು 11ರನ್ ಆಗುವಷ್ಟರಲ್ಲಿ ಎರಡು ವಿಕೆಟ್ ಕಿತ್ತು ಆತಿಥೇಯ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು.

ಈ ಹಂತದಲ್ಲಿ ನಾಯಕ ಪಾರಸ್ ಡೋಗ್ರಾ, ಅಬ್ದುಲ್ ಸಮದ್ ಜತೆ ಅರ್ಧಶತಕ ಜತೆಯಾಟವಾಡಿದ ಕಮ್ರನ್‌, ಸಾಹಿಲ್‌ ಜತೆಗೂಡಿ 197 (415 ಎಸೆತ) ರನ್‌ ಸೇರಿಸಿದರು. ಇದರಿಂದಾಗಿ ತವರಿನ ಅಂಗಳದಲ್ಲಿ ಒಂಬತ್ತನೇ ಬಾರಿ‌ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕರ್ನಾಟಕ ತಂಡದ ಆಸೆ ಕೈಗೂಡಲಿಲ್ಲ.

ಕಮ್ರನ್, ಶ್ರೇಯಸ್ ಗೋಪಾಲ್‌ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿ ಶತಕದ ಗಡಿ ದಾಟ್ಟುತ್ತಿದ್ದಂತೆ ಗಣ್ಯರ ಗ್ಯಾಲರಿಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ದೆಹಲಿ ವಿರುದ್ಧದ ಪಂದ್ಯದಲ್ಲಿ 133 ರನ್ ಗಳಿಸಿದ್ದ ಕಮ್ರನ್‌, ಹೈದರಾಬಾದ್, ಮುಂಬೈ ಎದುರಿನ‌‌ ಪಂದ್ಯದಲ್ಲಿ ಅರ್ಧಶತಕ‌ ಹೊಡೆದಿದ್ದರು. 24 ವರ್ಷದ ಬಲಗೈ ಬ್ಯಾಟರ್, 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

16 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಆಡಿದ್ದ ಪಾರಸ್

ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಅವರು 2013ರಲ್ಲಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ಲಿಸ್ಟ್ ಎ ಪಂದ್ಯದಲ್ಲಿ ಆಡಿದ್ದರು. ಶನಿವಾರ ಅವರು ಅದನ್ನು ನೆನಪು ಮಾಡಿಕೊಂಡರು.

‘2013ರಲ್ಲಿ ಇದೇ ಮೈದಾನದಲ್ಲಿ ಲಿಸ್ಟ್‌ ಎ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದೆ. ಈಗ ಇದೇ ಮೈದಾನದಲ್ಲಿ ಟ್ರೋಫಿ ಗೆದ್ದಿದ್ದೇನೆ. ಈ ಹಿಂದೆ ಮುಂಬೈ, ಬರೋಡಾ ತಂಡಗಳನ್ನು ಅದರ ನೆಲದಲ್ಲೇ ಮಣಿಸಿದ್ದರಿಂದ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿತ್ತು. ಬಲಿಷ್ಠ ಕರ್ನಾಟಕ ತಂಡವನ್ನು ಮಣಿಸಿ ಟ್ರೋಫಿ ಗೆದ್ದಿರುವುದರಿಂದ ತಂಡದ ವಿಶ್ವಾಸ ಇನ್ನಷ್ಟು ವೃದ್ಧಿಯಾಗಿದೆ. ಈ ಗೆಲುವಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ ಎಂದರು.

‘ಕಳೆದ ವರ್ಷ ಕ್ವಾರ್ಟರ್ ಫೈನಲ್‌ ತಲುಪಿದ್ದೆವು. ಆಗಲೇ ನಮಗೆ ಟ್ರೋಫಿ ಗೆಲ್ಲುವ ಸಾಮರ್ಥ್ಯ ಇದೆ ಎಂಬ ವಿಶ್ವಾಸ ಮೂಡಿತ್ತು. ಈಗ ಟ್ರೋಫಿ ಗೆದ್ದಿರುವುದು ಅದ್ಭುತ ಕ್ಷಣ’ ಎಂದು ಡೋಗ್ರಾ ಹೇಳಿದರು.

‘ಫೈನಲ್‌ ಪಂದ್ಯದಲ್ಲಿ ಪ್ರತಿ ರನ್‌, ವಿಕೆಟ್‌ ಸಹ ಮಹತ್ವದ್ದು. ಹೀಗಾಗಿ ಸಂಪೂರ್ಣ ಪ್ರಯತ್ನ ಹಾಕುವಂತೆ ತಂಡದ ಆಟಗಾರರಿಗೆ ಹೇಳಿದ್ದೆ. ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಅದು ಟ್ರೋಫಿ ಗೆಲ್ಲಲು ಪ್ರಮುಖ ಕಾರಣವಾಯಿತು’ ಎಂದರು.

ಈ ಐತಿಹಾಸಿಕ ಗೆಲುವು ಆಟಗಾರರ ಧೈರ್ಯ, ಶಿಸ್ತು ಮತ್ತು ಕ್ರೀಡಾ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೆಮ್ಮೆಯ ಕ್ಷಣವಾಗಿದೆ
ನರೇಂದ್ರ ಮೋದಿ, ಪ್ರಧಾನಮಂತ್ರಿ
ಕಾಶ್ಮೀರ ವಿಲ್ಲೊಗಳು (ಬ್ಯಾಟ್‌) ಅನೇಕ ಚಾಂಪಿಯನ್ನರ ಕಿಟ್‌ಗಳ ಭಾಗವಾಗಿವೆ. ಜಮ್ಮು ಮತ್ತು ಕಾಶ್ಮೀರ ತಂಡ ಚಾಂಪಿಯನ್‌ ಆದ ಪ್ರಯಾಣ ದೇಶೀಯ ಕ್ರಿಕೆಟ್‌ನ ಸೌಂದರ್ಯವನ್ನು ವ್ಯಾಖ್ಯಾನಿಸುತ್ತ
ದೆ ಸಚಿನ್ ತೆಂಡೂಲ್ಕರ್‌, ದಿಗ್ಗಜ ಕ್ರಿಕೆಟಿಗ

‘ನಮ್ಮ ಯೋಜನೆ ಕಾರ್ಯಗತವಾಗಲಿಲ್ಲ’

‘ಮೊದಲ ದಿನದಾಟದಲ್ಲಿ ಎದುರಾಳಿ ತಂಡದ ನಾಲ್ಕೈದು ವಿಕೆಟ್‌ ಗಳಿಸಿ ಅವರನ್ನು 350– 400 ರನ್‌ ಒಳಗೆ ಕಟ್ಟಿ ಹಾಕಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಈ ನಡುವೆಯೂ ನಮ್ಮ ಆಟಗಾರರು ಉತ್ತಮವಾಗಿ ಆಡಿದ್ದಾರೆ’ ಎಂದು ಕರ್ನಾಟಕ ತಂಡದ ಕೋಚ್‌ ಯರೇಗೌಡ.ಕೆ ಹೇಳಿದರು.

‘ಮೊದಲ ಇನಿಂಗ್ಸ್‌ನಲ್ಲಿ ನಾವು ಮೂರು ಪ್ರಮುಖ ವಿಕೆಟ್‌ಗಳನ್ನು ಬೇಗ ಕಳೆದುಕೊಂಡೆವು. ಇಲ್ಲದಿದ್ದರೆ ದೊಡ್ಡ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬಹುದಿತ್ತು. 4ನೇ ದಿನದಾಟದಲ್ಲಿ ಉತ್ತಮವಾಗಿ ಆಡುವ ನಮ್ಮ ಯೋಜನೆ ಸರಿಯಾಗಿ ಕಾರ್ಯಗತಗೊಳ್ಳಲಿಲ್ಲ. ವಿದ್ಯಾಧರ ಪಾಟೀಲ ಔಟಾದ ನಂತರ ಮಯಂಕ್‌ಗೆ ಉತ್ತಮ ಬೆಂಬಲ ಸಿಗಲಿಲ್ಲ’ ಎಂದರು.

‘ಪಂಜಾಬ್‌ ವಿರುದ್ಧ 230 ರನ್‌ಗಳ ಗುರಿಯನ್ನು 28 ಓವರ್‌ಗಳಲ್ಲಿ ಮುಟ್ಟಿದ್ದೆವು. ಮುಂಬೈ ತಂಡವನ್ನು ಅದರ ತವರು ನೆಲದಲ್ಲಿ ಮಣಿಸಿದ್ದೆವು. ನಮ್ಮ ತಂಡದ ಸ್ಮರಣ್‌ ಆರ್‌. ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆಟಗಾರ. ಕರುಣ್‌ ನಾಯರ್‌ ಮಯಂಕ್‌ ಅಗರವಾಲ್‌ ಸಹ ಉತ್ತಮ ಪ್ರದರ್ಶನ ನೀಡಿದ್ಧಾರೆ. ಶ್ರೇಯಸ್ ಗೋಪಾಲ್ ಬ್ಯಾಟ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.