ADVERTISEMENT

IPL–2020 | ಫೈನಲ್ ತಲುಪಲು ಸಾಧ್ಯವಾಗದಿರುವುದು ನಾಚಿಕೆಯ ಸಂಗತಿ: ವಿಲಿಯಮ್ಸನ್

ಏಜೆನ್ಸೀಸ್
Published 9 ನವೆಂಬರ್ 2020, 8:05 IST
Last Updated 9 ನವೆಂಬರ್ 2020, 8:05 IST
ಕೇನ್‌ ವಿಲಿಯಮ್ಸನ್‌
ಕೇನ್‌ ವಿಲಿಯಮ್ಸನ್‌   

ಅಬುಧಾಬಿ: ಐಪಿಎಲ್‌–2020 ಟೂರ್ನಿಯ ಕ್ವಾಲಿಫೈಯರ್–2 ಪಂದ್ಯದ ಸೋಲಿನ ಬಳಿಕ ಮಾತನಾಡಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆಟಗಾರ ಕೇನ್‌ ವಿಲಿಯಮ್ಸನ್‌, ‘ನಾವು ಫೈನಲ್‌ಗೆ ತೆರಳಲು ಸಾಧ್ಯವಾಗದಿರುವುದು ನಾಚಿಕೆಯ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಶಿಖರ್‌ ಧವನ್‌ (78), ಶಿಮ್ರೋನ್‌ ಹೆಟ್ಮೆಯರ್‌ (42) ಮತ್ತು ಮಾರ್ಕಸ್‌ ಸ್ಟೋಯಿನಸ್‌ (38) ಅವರ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು 189 ರನ್ ಗಳಿಸಿತ್ತು. ಈ ಮೊತ್ತದೆದುರು ರೈಸರ್ಸ್‌ 8 ವಿಕೆಟ್‌ಗಳನ್ನು ಕಳೆದುಕೊಂಡು 172 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇನ್‌ ವಿಲಿಯಮ್ಸನ್ (67) ಮತ್ತು ಅಬ್ದುಲ್ ಸಮದ್‌ (33) ಹೊರತುಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.

ಪಂದ್ಯದ ಬಳಿಕ ಮಾತನಾಡಿರುವ ವಿಲಿಯಮ್ಸನ್‌, ‘ಡೆಲ್ಲಿ ಉತ್ತಮವಾದ ತಂಡ. ಅವರು ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದರು. ಚೆನ್ನಾಗಿ ಆಡಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದರು. ನಮಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ಪಡೆದುಕೊಂಡೆವು. ಆಗಲೂ ನಮಗೆ ಅವಕಾಶಗಳಿದ್ದವು. ಫೈನಲ್‌ಗೆ ತಲುಪಲು ಸಾಧ್ಯವಾಗದಿರುವುದು ನಾಚಿಕೆಯ ಸಂಗತಿ. ಆದರೆ, ಆಟಗಾರರಿಗೆ ತಮ್ಮ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

‘ನಾವು ಕೆಲವು ಪಂದ್ಯಗಳನ್ನು ಹತ್ತಿರಕ್ಕೆ ಹೋಗಿ ಸೋತೆವು. ಬಹುಶಃ ನಾವು ನಮ್ಮ ಅತ್ಯುತ್ತಮ ಆಟವನ್ನು ಆಡಲಿಲ್ಲ. ಪ್ರತಿ ತಂಡವೂ ಪ್ರಬಲವಾಗಿದೆ. ಎಲ್ಲರೂ ಎಲ್ಲರನ್ನು ಸೋಲಿಸಿದ್ದಾರೆ. ಹಾಗಾಗಿ ನಾವು ನಮ್ಮ ಆಟವನ್ನು ಅತ್ಯುನ್ನತವಾಗಿ ಆಡಬೇಕಿತ್ತು. ಒಂದು ತಂಡವಾಗಿ ನಾವು ನಮ್ಮ ಆಟದಲ್ಲಿ ಆ ಲಯವನ್ನು ಮುಂದುವರಿಸಲು ಬಯಸಿದ್ದೆವು' ಎಂದಿದ್ದಾರೆ.

ರೈಸರ್ಸ್‌ ಪಡೆ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 17 ರನ್ ಅಂತರದಿಂದ ಸೋಲುಕಂಡಿತ್ತು. ಗೆದ್ದ ಡೆಲ್ಲಿ, ನವೆಂಬರ್‌ 10ರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.