ADVERTISEMENT

Vijay Hazare Trophy Final: ಕರ್ನಾಟಕಕ್ಕೆ ಕರುಣ್ ಕಟ್ಟಿಹಾಕುವ ಸವಾಲು

ಪಿಟಿಐ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
<div class="paragraphs"><p>ಮಯಂಕ್ ಅಗರವಾಲ್</p></div>

ಮಯಂಕ್ ಅಗರವಾಲ್

   

ವಡೋದರ: ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಶನಿವಾರ ವಿದರ್ಭ ತಂಡವನ್ನು ಎದುರಿಸಲಿದ್ದು, ಐದನೇ ಬಾರಿ ಪ್ರಶಸ್ತಿ ಗೆದ್ದು ದಾಖಲೆ ಸರಿಗಟ್ಟುವತ್ತ ಚಿತ್ತ ನೆಟ್ಟಿದೆ. ಆದರೆ ಈ ಸಲ ಟೂರ್ನಿಯಲ್ಲಿ ರನ್‌ಗಳ ಮಹಾಪೂರ ಹರಿಸುತ್ತಿರುವ ವಿದರ್ಭ ನಾಯಕ ಕರುಣ್ ನಾಯರ್ ಅವರನ್ನು ಕಟ್ಟಿಹಾಕುವುದು ಅವರ ‘ಮಾಜಿ ತಂಡ’ದ ಮುಂದಿರುವ ಸವಾಲಾಗಿದೆ. 

ಹಿಂದೆ ಕರ್ನಾಟಕದ ಪ್ರಮುಖ ಬ್ಯಾಟರ್ ಆಗಿದ್ದ ಕರುಣ್‌, 2022ರಿಂದ ವಿದರ್ಭ ತಂಡಕ್ಕೆ ಆಡುತ್ತಿದ್ದಾರೆ. ನಾಯಕನಾಗಿ ಬಡ್ತಿ ಪಡೆದ ಬಳಿಕವಂತೂ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. 33 ವರ್ಷ ವಯಸ್ಸಿನ ಆಟಗಾರ ಈ ಬಾರಿಯ ಟೂರ್ನಿಯಲ್ಲಿ 752 ರನ್‌ಗಳ ಅಭೂತಪೂರ್ವ ಸರಾಸರಿ ಹೊಂದಿದ್ದು, ಒಮ್ಮೆ ಮಾತ್ರ ಔಟ್‌ ಆಗಿದ್ದಾರೆ. 112*, 44*, 111*, 112, 122* ಮತ್ತು 88* ರನ್ ಗಳಿಸಿದ್ದಾರೆ.

ADVERTISEMENT

ಇನ್ನು 79 ರನ್ ಗಳಿಸಿದರೆ ಅವರು ಎನ್‌.ಜಗದೀಶನ್ (2022–23ರಲ್ಲಿ 830 ರನ್) ಅವರ ದಾಖಲೆ ಮುರಿಯಬಹುದು. ಜೊತೆಗೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಯ್ಕೆ ಅವಕಾಶ ಇನ್ನಷ್ಟು ಉಜ್ವಲಗೊಳಿಸಬಹುದು.

ಅವರಿಗೆ ಆರಂಭ ಆಟಗಾರರಾದ ಧ್ರುವ್ ಶೋರೆ, ಯಶ್ ರಾಥೋಡ್ ಅವರಿಂದ ಬೆಂಬಲ ಸಿಗುತ್ತಿದೆ. ಧ್ರುವ್ ಮತ್ತು ರಾಥೋಡ್‌ ತಲಾ 384 ರನ್ ಗಳಿಸಿದ್ದಾರೆ.

ಹೀಗಾಗಿ ಕರ್ನಾಟಕ ಬೌಲರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ವೇಗದ ಬೌಲರ್ ವಾಸುಕಿ ಕೌಶಿಕ್ (15 ವಿಕೆಟ್‌) ಮತ್ತು ಎಡಗೈ ವೇಗಿ ಅಭಿಲಾಷ್‌ ಶೆಟ್ಟಿ (14 ವಿಕೆಟ್‌) ಪರಿಣಾಮಕಾರಿ ಎನಿಸಿದ್ದಾರೆ. ಶ್ರೇಯಸ್‌ ಗೋಪಾಲ್ (18 ವಿಕೆಟ್) ಅವರು ಪ್ರಮುಖ ಸ್ಪಿನ್ನರ್ ಆಗಿ ಮಿಂಚಿದ್ದಾರೆ. ಅನುಭವಿ ಪ್ರಸಿದ್ಧಕೃಷ್ಣ ಅವರಿಂದ ಬೌಲಿಂಗ್‌ಗೆ ಇನ್ನಷ್ಟು ಬಲಬಂದಿದೆ

ನಾಯಕ ಮಯಂಕ್ ಅಗರವಾಲ್ ಅವರು ನಾಲ್ಕು ಶತಕ ಸೇರಿ 619 ರನ್ ಹೊಡೆದಿದ್ದಾರೆ. ಅವರ ಸರಾಸರಿ 103.16. ಆದರೆ ಇತರ ಆಟಗಾರರೂ ಯಶಸ್ಸು ಪಡೆದಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. 21 ವರ್ಷ ವಯಸ್ಸಿನ ಆರ್‌.ಸ್ಮರಣ್ (340), ಕೆ.ವಿ.ಅನೀಶ್ (417) ಮತ್ತು ವಿಕೆಟ್ ಕೀಪರ್ ಕೃಷ್ಣನ್ ಶ್ರೀಜಿತ್‌ (225) ಅವರು ನಿರ್ಣಾಯಕ ಸಂದರ್ಭಗಳಲ್ಲಿ ನೆರವಿಗೆ ಬಂದಿದ್ದಾರೆ.

ಅನುಭವಿ ದೇವದತ್ತ ಪಡಿಕ್ಕಲ್ (188) ಆಸ್ಟ್ರೇಲಿಯಾ ಪ್ರವಾಸದ ಬಳಿಕ ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ಶಕ್ತಿ ವೃದ್ಧಿಸಿದೆ. ಆಡಿದ ಎರಡು ಪಂದ್ಯಗಳಲ್ಲಿ ಅವರು ಕ್ರಮವಾಗಿ 102 (ಬರೋಡ ವಿರುದ್ಧ) ಮತ್ತು 86 ರನ್ (ಸೆಮಿಫೈನಲ್‌ನಲ್ಲಿ ಹರಿಯಾ ವಿರುದ್ಧ) ಗಳಿಸಿದ್ದಾರೆ.

ಕರುಣ್‌ಗೆ ಗರಿಗೆದರಿದ ಕನಸು

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಮೋಘ ಯಶಸ್ಸು ಕಾಣುತ್ತಿರುವ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಅವರು ಎಂಟು ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳುವ ಆಶಾವಾದದಲ್ಲಿ ಇದ್ದಾರೆ.

ಈ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮತ್ತು ಮುಂದಿನ ತಿಂಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಗಾರರು ಭಾರತ ತಂಡವನ್ನು ಪ್ರಕಟಿಸಬೇಕಾಗಿದೆ.

‘ಯಾವತ್ತಿದ್ದರೂ ನನ್ನ ಕನಸು ಭಾರತ ತಂಡಕ್ಕೆ ಆಡುವುದು. ಈಗಲೂ ಆ ಕನಸು ಜೀವಂತವಾಗಿಟ್ಟುಕೊಂಡಿದ್ದೇನೆ. ಆ ಕನಸು ಈಡೇರಿಸಲು ಆಡುತ್ತಿದ್ದೇನೆ. ಹೀಗಾಗಿ ದೇಶಕ್ಕೆ ಆಡುವುದು ನನ್ನ ಮುಂದಿರುವ ಏಕೈಕ ಗುರಿ’ ಎಂದು ಕರುಣ್ ಹೇಳಿದ್ದಾರೆ.

‘ಇದು ತಂಡಕ್ಕೆ ನನ್ನ ಮೂರನೇ ಪುನರಾಗಮನದ ಯತ್ನ. ನನಗೆ ಸಿಗುವ ಪ್ರತಿಯೊಂದು ಪಂದ್ಯದಲ್ಲಿ ರನ್ ಗಳಿಸುತ್ತೇನೆ. ಉಳಿದಿದ್ದು ನನ್ನ ಕೈಯ್ಯಲ್ಲಿ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.