ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌: ಗೆಲುವಿನ ಒತ್ತಡದಲ್ಲಿ ಕರ್ನಾಟಕ

ಶಿವಮೊಗ್ಗದಲ್ಲಿ ಇಂದಿನಿಂದ ರೈಲ್ವೇಸ್‌ ವಿರುದ್ಧದ ಪಂದ್ಯ; ಮನೀಷ್ ಪಾಂಡೆ ಬಲ

ಮಹಮ್ಮದ್ ನೂಮಾನ್
Published 21 ಡಿಸೆಂಬರ್ 2018, 19:15 IST
Last Updated 21 ಡಿಸೆಂಬರ್ 2018, 19:15 IST
ಕರ್ನಾಟಕ ತಂಡದ ಆಟಗಾರರು ಶುಕ್ರವಾರ ‘ಫುಟ್‌ಬಾಲ್‌’ ಆಡಿದರು –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌
ಕರ್ನಾಟಕ ತಂಡದ ಆಟಗಾರರು ಶುಕ್ರವಾರ ‘ಫುಟ್‌ಬಾಲ್‌’ ಆಡಿದರು –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌   

ಶಿವಮೊಗ್ಗ: ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಜಯದ ಹಾದಿಗೆ ಮರಳುವ ನಿರೀಕ್ಷೆಯೊಂದಿಗೆ ಶನಿವಾರ ಕಣಕ್ಕಿಳಿಯಲಿದೆ.

ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌.ವಿನಯ್‌ ಕುಮಾರ್‌ ಬಳಗ ರೈಲ್ವೇಸ್‌ ತಂಡದ ಸವಾಲನ್ನು ಎದುರಿಸಲಿದೆ. ರಣಜಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶದ ಸಾಧ್ಯತೆ ಹೆಚ್ಚಿಸಿಕೊಳ್ಳಲು ಕರ್ನಾಟಕಕ್ಕೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಗುಜರಾತ್‌ ವಿರುದ್ಧ ಸೂರತ್‌ನಲ್ಲಿ ಕಳೆದ ವಾರ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ಡ್ರಾ ಸಾಧಿಸಿತ್ತು. ಇನಿಂಗ್ಸ್‌ ಮುನ್ನಡೆ ಪಡೆದಿದ್ದರಿಂದ ಮೂರು ಪಾಯಿಂಟ್‌ ಸಂಗ್ರಹಿಸಿತ್ತು.

ADVERTISEMENT

ಕರ್ನಾಟಕ ಈ ಋತುವಿನಲ್ಲಿ ಐದು ಪಂದ್ಯಗಳನ್ನು ಆಡಿದ್ದು, ತಲಾ ಒಂದು ಗೆಲುವು ಮತ್ತು ಸೋಲು ಎದುರಾಗಿದೆ. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಮನೀಷ್‌ ಪಾಂಡೆ ಬಲ: ಗಾಯದಿಂದ ಚೇತರಿಸಿಕೊಳ್ಳದ ಕರುಣ್‌ ನಾಯರ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಯಂಕ್‌ ಅಗರವಾಲ್ ಅವರ ಸೇವೆಯೂ ತಂಡಕ್ಕೆ ಲಭ್ಯವಿಲ್ಲ. ಆದರೆ ಮನೀಷ್‌ ಪಾಂಡೆ ಈ ಪಂದ್ಯದಲ್ಲಿ ಆಡಲಿದ್ದಾರೆ.

ಪಾಂಡೆ ಅವರೊಂದಿಗೆ ಆರ್‌.ಸಮರ್ಥ್‌, ಡಿ.ನಿಶ್ಚಲ್, ಕೆ.ವಿ.ಸಿದ್ಧಾರ್ಥ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರು ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಅನುಭವಿ ಆಟಗಾರ ಪಾಂಡೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ ಎಂದು ವಿನಯ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ತಂಡದ ಯುವ ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಪ್ರದರ್ಶನ ನೀಡುತ್ತಿ ದ್ದಾರೆ. ಕಳೆದ ಪಂದ್ಯದಲ್ಲಿ ನಾವು ಗೆಲ್ಲ ಬೇಕಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಎದುರಾಳಿಗಳಿಗೆ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದರಿಂದ ಜಯದ ಅವಕಾಶ ಕಳೆದುಕೊಂಡೆವು. ಈ ಪಂದ್ಯಕ್ಕೆ ತಂಡ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಗೆಲುವಿನ ವಿಶ್ವಾಸವಿದೆ. ಎದುರಾಳಿಗಳನ್ನು ಲಘು ವಾಗಿ ಪರಿಗಣಿಸಿಲ್ಲ’ ಎಂದಿದ್ದಾರೆ.

ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್, ರೋನಿತ್‌ ಮೋರೆ, ಪ್ರಸಿದ್ಧ ಕೃಷ್ಣ, ಕೆ.ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಅವರು ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಪಿಚ್‌ನಲ್ಲಿ ಅಲ್ಪ ಹಸಿರು ಇದ್ದು, ವೇಗದ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆಯಿದೆ.

ಯುವ ಆಟಗಾರರ ಬಲ: ಯುವ ಆಟಗಾರರನ್ನು ಒಳಗೊಂಡ ರೈಲ್ವೇಸ್‌ ತಂಡದವರು ಕರ್ನಾಟಕಕ್ಕೆ ಎಷ್ಟುರಮಟ್ಟಿಗೆ ಪ್ರತಿರೋಧ ಒಡ್ಡುವರು ಎಂಬುದನ್ನು ನೋಡಬೇಕು. ರೈಲ್ವೇಸ್‌ ತಂಡ ಕಳೆದ ಪಂದ್ಯದಲ್ಲಿ ವಿದರ್ಭ ಎದುರು 118 ರನ್‌ಗಳಿಂದ ಸೋತಿತ್ತು. ಆ ಸೋಲಿನ ನಿರಾಸೆ ಮರೆತು ಸಂಘಟಿತ ಪ್ರದರ್ಶನ ನೀಡುವ ಸವಾಲು ಪ್ರವಾಸಿ ತಂಡದ ಮುಂದಿದೆ.

ಪಂದ್ಯದ ಆರಂಭ: ಬೆಳಿಗ್ಗೆ 9.30

**

ಎಂಟನೇ ಸ್ಥಾನದಲ್ಲಿ ಕರ್ನಾಟಕ ತಂಡ

ಈ ಬಾರಿಯ ರಣಜಿ ಟೂರ್ನಿಯಲ್ಲಿ ಎಲೀಟ್‌ ಗುಂಪಿನಿಂದ (‘ಎ’ ಮತ್ತು ’ಬಿ’ ಗುಂಪು) ಒಟ್ಟು ಐದು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ‘ಎ’ ಗುಂಪಿನಲ್ಲಿರುವ ಕರ್ನಾಟಕ ಐದು ಪಂದ್ಯಗಳಿಂದ 15 ಪಾಯಿಂಟ್‌ ಕಲೆಹಾಕಿದ್ದು, ಒಟ್ಟಾರೆಯಾಗಿ ಎಂಟನೇ ಸ್ಥಾನದಲ್ಲಿದೆ.

‘ಎ’ ಗುಂಪಿನಲ್ಲಿರುವ ಸೌರಾಷ್ಟ್ರ (25 ಪಾಯಿಂಟ್‌), ಗುಜರಾತ್‌, ವಿದರ್ಭ (ತಲಾ 18 ಪಾಯಿಂಟ್‌) ಮತ್ತು ‘ಬಿ’ ಗುಂಪಿನಲ್ಲಿರುವ ಕೇರಳ (20), ಮಧ್ಯಪ್ರದೇಶ (18), ಹಿಮಾಚಲ ಪ್ರದೇಶ (16) ಹಾಗೂ ಬಂಗಾಳ (15) ತಂಡಗಳು ಪಾಯಿಂಟ್‌ ಪಟ್ಟಿಯಲ್ಲಿ ಕರ್ನಾಟಕಕ್ಕಿಂತ ಮುಂದಿವೆ.

ಸೌರಾಷ್ಟ್ರ, ಗುಜರಾತ್‌ ಮತ್ತು ಕೇರಳ ತಂಡಗಳು ಆರು ಪಂದ್ಯಗಳನ್ನು ಆಡಿದ್ದು, ಇತರ ತಂಡಗಳು ಐದು ಪಂದ್ಯಗಳನ್ನಾಡಿವೆ.

**

ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಲು ಈ ಪಂದ್ಯದಲ್ಲಿ ಜಯ ಅನಿವಾರ್ಯ. ಗೆದ್ದರೆ ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರುವ ಅವಕಾಶವಿದೆ.

–ಆರ್‌.ವಿನಯ್‌ ಕುಮಾರ್‌, ಕರ್ನಾಟಕ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.