ADVERTISEMENT

ಕರ್ನಾಟಕ–ರಾಜಸ್ಥಾನ ಪಂದ್ಯ ಡ್ರಾ

ಕೂಚ್‌ ಬೆಹಾರ್‌ ಕ್ರಿಕೆಟ್‌: ಒತ್ತಡದಲ್ಲೂ ಸೊಗಸಾಗಿ ಆಡಿದ ಸ್ಮರಣ್‌–ಕೃತಿಕ್‌ ಕೃಷ್ಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 11:29 IST
Last Updated 6 ಡಿಸೆಂಬರ್ 2018, 11:29 IST
ಆರ್‌. ಸ್ಮರಣ್‌
ಆರ್‌. ಸ್ಮರಣ್‌   

ಹುಬ್ಬಳ್ಳಿ: ಪಂದ್ಯದ ಕೊನೆಯ ದಿನ ಆಲೌಟ್‌ ಆಗದಂತೆ ಎಚ್ಚರಿಕೆ ವಹಿಸಿದ ಕರ್ನಾಟಕ ತಂಡ 19 ವರ್ಷದ ಒಳಗಿನವರ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ರಾಜಸ್ಥಾನ ಎದುರಿನ ಪಂದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಸಫಲವಾಯಿತು.

ಇಲ್ಲಿನ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡು ಫಾಲೊ ಆನ್‌ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಆದ್ದರಿಂದ ಪಂದ್ಯದ ಕೊನೆಯ ದಿನವಾದ ಗುರುವಾರ ರಕ್ಷಣಾತ್ಮಕವಾಗಿ ಆಡಬೇಕಿತ್ತು. ಆರ್‌. ಸ್ಮರಣ್‌ ಮತ್ತು ಕೃತಿಕ್‌ ಕೃಷ್ಣ ತಾಳ್ಮೆಯಿಂದ ರಾಜಸ್ಥಾನ ಬೌಲರ್‌ಗಳ ಸವಾಲು ಎದುರಿಸಿದರು. ಈ ಜೋಡಿ ಆರನೇ ವಿಕೆಟ್‌ ಜೊತೆಯಾಟದಲ್ಲಿ 155 ರನ್‌ ಕಲೆಹಾಕಿತು. ಇನಿಂಗ್ಸ್‌ ಮುನ್ನಡೆ ಪಡೆದ ರಾಜಸ್ಥಾನ ತಂಡಕ್ಕೆ ಮೂರು, ಕರ್ನಾಟಕ ತಂಡಕ್ಕೆ ಒಂದು ಅಂಕ ಲಭಿಸಿದವು.

ADVERTISEMENT

ಜೊತೆಯಾಟದ ಬಲ: ಬುಧವಾರದ ಅಂತ್ಯಕ್ಕೆ 27 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡ ರಾಜಸ್ಥಾನದ ಮೊದಲ ಇನಿಂಗ್ಸ್‌ನ ರನ್‌ ಚುಕ್ತಾ ಮಾಡಲು ಗುರುವಾರ 131 ರನ್‌ ಕಲೆ ಹಾಕಬೇಕಿತ್ತು.

ಕ್ರೀಸ್ ಕಾಯ್ದುಕೊಂಡಿದ್ದ ಸ್ಮರಣ್‌ ಮತ್ತು ನಾಯಕ ಶುಭಾಂಗ್‌ ಹೆಗ್ಡೆ ಮೊದಲ ಓವರ್‌ನಿಂದಲೇ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಶುಭಾಂಗ್‌ ಆರು ರನ್‌ ಗಳಿಸಿದ್ದಾಗ ಅಜಯ್‌ ಸಿಂಗ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಕರ್ನಾಟಕ ತಂಡದ ಮೊತ್ತ 106 ಆಗಿತ್ತು. ಈ ವೇಳೆ ರಾಜಸ್ಥಾನ ಪಾಳೆಯದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಇದಕ್ಕೆ ಸ್ಮರಣ್‌ ಮತ್ತು ಕೃತಿಕ್‌ ಅವಕಾಶ ಕೊಡಲಿಲ್ಲ.

ಈ ಜೋಡಿಯನ್ನು ಅಲುಗಿಸಲು ರಾಜಸ್ಥಾನ ಬೌಲಿಂಗ್‌ನಲ್ಲಿ ಪದೇ ಪದೇ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿತು. ವಿಕೆಟ್‌ ಕೀಪರ್‌ ಸೂರಜ್‌ ಅಹುಜಾ ಅವರನ್ನು ಹೊರತುಪಡಿಸಿ ಉಳಿದ ಹತ್ತೂ ಆಟಗಾರರು ಬೌಲಿಂಗ್ ಮಾಡಿದರೂ ರಾಜ್ಯ ತಂಡದ ಬ್ಯಾಟ್ಸ್‌ಮನ್‌ಗಳು ಜಗ್ಗಲಿಲ್ಲ.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ಮೊದಲ ಇನಿಂಗ್ಸ್‌ 438. ಕರ್ನಾಟಕ ಪ್ರಥಮ ಇನಿಂಗ್ಸ್‌ 212 ಮತ್ತು ದ್ವಿತೀಯ ಇನಿಂಗ್ಸ್‌ 103 ಓವರ್‌ಗಳಲ್ಲಿ 5 ವಿಕೆಟ್‌ಗೆ 261 (ಆರ್‌. ಸ್ಮರಣ್‌ ಔಟಾಗದೆ 131, ಕೃತಿಕ್‌ ಕೃಷ್ಣ ಔಟಾಗದೆ 63; ಆಕಾಶ ಸಿಂಗ್‌ 38ಕ್ಕೆ3). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.