ADVERTISEMENT

ರಣಜಿ ಕ್ರಿಕೆಟ್ | ಬರೋಡಾ ಎದುರು ಸುಲಭ ಜಯ: ಕ್ವಾರ್ಟರ್‌ಫೈನಲ್ ತಲುಪಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 18:19 IST
Last Updated 14 ಫೆಬ್ರುವರಿ 2020, 18:19 IST
ಕರುಣ್‌ ನಾಯರ್‌ ಬ್ಯಾಟಿಂಗ್ ವೈಖರಿ
ಕರುಣ್‌ ನಾಯರ್‌ ಬ್ಯಾಟಿಂಗ್ ವೈಖರಿ   
""

ಬೆಂಗಳೂರು:ನಿರೀಕ್ಷಿತವೇ ಆಗಿದ್ದ ಗೆಲುವನ್ನು ಕರ್ನಾಟಕ ತಂಡದವರು ಮೂರನೇ ದಿನವೇ ಪೂರೈಸಿ ಸಂಭ್ರಮಿಸಿದರು. ಬರೋಡಾ ತಂಡವನ್ನು ಶುಕ್ರವಾರ ಎಂಟು ವಿಕೆಟ್‌ಗಳಿಂದ ಸೋಲಿಸಿ ಎಲೈಟ್‌ ಗುಂಪಿ ನಿಂದ ರಣಜಿ ಟ್ರೋಫಿ ನಾಕೌಟ್‌ಗೂ ಅರ್ಹತೆ ಪಡೆದರು. ನಾಯಕ ಕರುಣ್‌ ನಾಯರ್‌ ಅಗತ್ಯವಾಗಿದ್ದ ಇನಿಂಗ್ಸ್‌ ಆಡಿ ಗೆಲುವಿನಲ್ಲಿ ಮಿಂಚಿದ್ದು ವಿಶೇಷ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಹ ವಿರಾಮದ ನಂತರ ಹತ್ತನೇ ಓವರ್‌ನಲ್ಲಿ ಕೆ.ವಿ.ಸಿದ್ಧಾರ್ಥ್‌, ಆನ್‌ಡ್ರೈವ್‌ ಬೌಂಡರಿಯೊಡನೆ ಗೆಲುವಿನ ರನ್‌ ಗಳಿಸಿದರು. ಕರ್ನಾಟಕ ನಾಯಕನಿಗೆ ಇದು ಈ ಋತುವಿನ ಮೂರನೇ ಅರ್ಧ ಶತಕ.ಮೈಸೂರಿನಲ್ಲಿ ಹಿಮಾಚಲಪ್ರದೇಶ ವಿರುದ್ಧ ಪಂದ್ಯದಲ್ಲಿ ಎರಡು ಅರ್ಧ ಶತಕ ಬಾರಿಸಿದ್ದ ಅವರು,ನಾಲ್ಕು ಪಂದ್ಯಗಳ ಬಳಿಕ ಕಳಂಕರಹಿತ ಚೊಕ್ಕ ಆಟವಾಡಿ ಅಜೇಯ 71 ರನ್‌ (161 ನಿಮಿಷ, 7 ಬೌಂಡರಿ) ಗಳಿಸಿದರು.

ಗೆಲುವಿಗೆ 149 ರನ್‌ಗಳ ಗುರಿ ಎದುರಾಗಿತ್ತು. ಕರ್ನಾಟಕ 44.4 ಓವರುಗಳಲ್ಲಿ 2 ವಿಕೆಟ್‌ಗೆ 150 ರನ್‌ ಹೊಡೆಯಿತು. ನಾಯರ್‌ ಮತ್ತು ಸಿದ್ಧಾರ್ಥ್‌ (ಔಟಾಗದೇ 28, 61 ಎ) ಮುರಿಯದ ಮೂರನೇ ವಿಕೆಟ್‌ಗೆ 92 ರನ್‌ ಸೇರಿಸಿದರು. ಬೆಳಿಗ್ಗೆ ಸ್ಲಿಪ್‌ನಲ್ಲಿ ಫೀಲ್ಡಿಂಗ್‌ ವೇಳೆ ಬೆರಳಿಗೆ ಚೆಂಡುಬಡಿದ ಕಾರಣ ಸಿದ್ಧಾರ್ಥ್‌ ಬದಲು ನಾಯರ್‌ ಮೂರನೇ ಕ್ರಮಾಂಕದಲ್ಲಿ ಆಡಿದರು. ಸಿದ್ಧಾರ್ಥ್‌ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದರು.

ADVERTISEMENT

ನಾಲ್ಕೈದು ಇನಿಂಗ್ಸ್‌ಗಳಿಂದ ರನ್‌ ಬರ ಎದುರಿಸುತ್ತಿರುವ ದೇವದತ್ತ ಪಡಿಕ್ಕಲ್‌ (6) ಲಂಚ್‌ಗೆ ಕೊನೆಯ ಓವರ್‌ನಲ್ಲಿ ಅನಗತ್ಯ ಹೊಡೆಕಕ್ಕೆ ಹೋಗಿ ವಿಕೆಟ್‌ ಕೊಟ್ಟರು.

ಎಡಗೈ ಸ್ಪಿನ್ನರ್‌ ಭಾರ್ಗವ್‌ ಭಟ್‌ ಬೌಲಿಂಗ್‌ನಲ್ಲಿ ಮೊದಲು ಡೀಪ್‌ ಸ್ವೇರ್‌ಲೆಗ್‌ಗೆ ಸಿಕ್ಸರ್‌ ಎತ್ತಿದ್ದ ಪಡಿಕ್ಕಲ್‌, ಅವಸರಿಸಿ ಮತ್ತೆ ಅಂಥದ್ದೇ ಹೊಡೆತಕ್ಕೆ ಹೋಗಿ ಡೀಪ್‌ ಮಿಡ್‌ವಿಕೆಟ್‌ನಲ್ಲಿ ಕ್ಯಾಚಿತ್ತರು.

ಲಂಚ್‌ ನಂತರ ಭಾರ್ಗವ್‌ ಭಟ್‌, ಆರಂಭ ಆಟಗಾರ ಸಮರ್ಥ್‌ (25) ಅವರನ್ನು ಗಲಿಬಿಲಿಗೊಳಿಸಿ ಬೌಲ್ಡ್‌ ಮಾಡಿದರು. ಆದರೆ ಕರ್ನಾಟಕ ನಂತರ ಎಚ್ಚರಿಕೆಯಿಂದ ಗುರಿಯತ್ತ ಸಾಗಿತು. ಸ್ನಾಯುರಜ್ಜು ನೋವಿನಿಂದ ಬಾಬಾಸಫಿ ಖಾನ್‌ ಪಠಾಣ್‌ ಎರಡನೇ ಇನಿಂಗ್ಸ್‌ನಲ್ಲೂ ಬೌಲಿಂಗ್‌ ಮಾಡಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 3.5 ಓವರ್‌ ಮಾಡಿದ್ದರು.

ಅಲ್ಪ ಪ್ರತಿರೋಧ:ಇದಕ್ಕೆ ಮೊದಲು, ಬರೋಡಾ ಎರಡನೇ ಇನಿಂಗ್ಸ್‌ (ಗುರುವಾರ: 5 ವಿಕೆಟ್‌ಗೆ 208) ದಿನದ 23ನೇ ಓವರ್‌ನಲ್ಲಿ ಅಂತ್ಯಗೊಂಡಿತು. ಅಭಿಮನ್ಯು ರಜಪೂತ್‌ (52) ಮತ್ತು ಪಾರ್ಥ್‌ ಕೊಹ್ಲಿ (42) ಅವರು ಆರನೇ ವಿಕೆಟ್‌ಗೆ 52 ರನ್‌ ಸೇರಿಸಿದ್ದರಿಂದ ಗುರಿ ನೂರರ ಗಡಿ ದಾಟಿತು. ಪಾರ್ಥ್‌ ದಿನದ ಮೂರನೇ ಓವರ್‌ನಲ್ಲಿ (ರೋನಿತ್‌ ಮೋರೆ), ಕೀಪರ್‌ಗೆ ಕ್ಯಾಚ್‌ ನೀಡಿದರೂ ಅದು ನೋಬಾಲ್‌ ಆಗಿತ್ತು.

ದಿನದ ಏಳನೇ ಓವರ್‌ನಲ್ಲಿ ರೋನಿತ್‌ ಕೊನೆಗೂ ಯಶಸ್ಸು ಪಡೆದರು. ಒಳಕ್ಕೆ ಹೊರಳಿದ ಚೆಂಡು ರಜಪೂತ್‌ ಅವರ ಬ್ಯಾಟ್‌ ಸವರಿ ಸ್ಟಂಪ್‌ಗೆ ಬಡಿಯಿತು. ಶ್ರೇಯಸ್‌ ಗೋಪಾಲ್‌ ಬದಲು ದಾಳಿಗಿಳಿದ ಗೌತಮ್ ಮೊದಲ ಓವರ್‌ನಲ್ಲೇ ಭಾರ್ಗವ್‌ ಭಟ್‌ ವಿಕೆಟ್‌ ಪಡೆದರು. ‘ಸ್ವೀಪ್‌’ಗೆ ಹೋಗಿ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಪಾರ್ಥ್‌ ಕೊಹ್ಲಿ, ಅಭಿಮನ್ಯು ಮಿಥುನ್‌ ಎಸೆತಕ್ಕೆ ಬಲಿಯಾದರೆ, ಪ್ರಸಿದ್ಧ ಕೃಷ್ಣ (45ಕ್ಕೆ4) ಕೊನೆಯ ಎರಡು ವಿಕೆಟ್‌ ಉರುಳಿಸಿದರು.

ರನ್‌ ಗಳಿಸಲು ಪರದಾಡುತ್ತಿರುವ ಆರಂಭಿಕ ಜೋಡಿ ಲಯಕ್ಕೆ ಮರಳಿದರೆ ಮುಂದಿನ ಪಂದ್ಯಗಳಲ್ಲೂ ಸುಲಭ ಜಯ ನಿರೀಕ್ಷಿಸಬಹುದಾಗಿದೆ. ಕ್ವಾರ್ಟರ್‌ಫೈನಲ್‌ ಪಂದ್ಯಗಳು ಇದೇ 20ರಿಂದ ಆರಂಭವಾಗಲಿವೆ.

ತವರಿನಲ್ಲಿ ಮೊದಲ ಗೆಲುವು

ಕರ್ನಾಟಕ ತಂಡಕ್ಕೆ ಈ ಬಾರಿ ತವರಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇದು ಮೊದಲ ಗೆಲುವು. ಮೂರು ಪಂದ್ಯಗಳು ಡ್ರಾ ಆಗಿದ್ದವು. ಹಿಮಾಚಲ ಪ್ರದೇಶ (ಮೈಸೂರು), ಮಧ್ಯಪ್ರದೇಶ (ಶಿವಮೊಗ್ಗದಲ್ಲಿ) ತಂಡಗಳಿಗೆ ಮುನ್ನಡೆ ಬಿಟ್ಟುಕೊಟ್ಟರೆ, ಉತ್ತರ ಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು.

***

ಕೊನೆಯವರೆಗೆ ಆಡಬೇಕೆಂಬ ಯೋಜನೆ ಹಾಕಿಕೊಂಡಿದ್ದೆ. ಸಮಯ, ಓವರ್‌ಗಳ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ

-ಕರುಣ್‌ ನಾಯರ್‌, ಕರ್ನಾಟಕ ತಂಡದ ನಾಯಕ

ಮೊದಲ ಇನಿಂಗ್ಸ್‌
ಬರೋಡಾ:85ಕ್ಕೆ ಆಲೌಟ್‌
ಕರ್ನಾಟಕ: 233ಕ್ಕೆ ಆಲೌಟ್‌

ಎರಡನೇ ಇನಿಂಗ್ಸ್‌
ಬರೋಡಾ: 296 ಕ್ಕೆ ಆಲೌಟ್‌
ಕರ್ನಾಟಕ:150/2 (44.4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.