ADVERTISEMENT

ಆಡಿದ್ದು 20 ಓವರ್‌: ಗಳಿಸಿದ್ದು 25ರನ್‌!

ಕರ್ನಾಟಕ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಮೇಘಾಲಯ ತಂಡದ ವೈಫಲ್ಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 19:46 IST
Last Updated 12 ನವೆಂಬರ್ 2019, 19:46 IST
   

ಬೆಂಗಳೂರು: ಮಹಿಳಾ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ಮೇಘಾಲಯ ತಂಡ ಬಿಸಿಸಿಐ 23 ವರ್ಷದೊಳಗಿನವರ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಎದುರಿನ ಪಂದ್ಯದಲ್ಲಿ ಮಂಗಳವಾರ 20 ಓವರ್‌ಗಳನ್ನು ಆಡಿತು. ಆದರೆ ಗಳಿಸಿದ್ದು ಕೇವಲ 25 ರನ್‌!

ಈ ಪೈಕಿ ಕರ್ನಾಟಕ ತಂಡ ನೀಡಿದ ಇತರೆ ರನ್‌ಗಳೇ ಒಂಬತ್ತು.

ಆರ್‌ಎಸ್‌ಐ ಮೈದಾನದಲ್ಲಿ ನಡೆದ ಈ ಹಣಾಹಣಿಯಲ್ಲಿ ಸಿ.ಪ್ರತ್ಯೂಷಾ ಸಾರಥ್ಯದ ಆತಿಥೇಯ ತಂಡ 10 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತು.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಮೇಘಾಲಯ ತಂಡ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಕಳೆದುಕೊಂಡಿತು. ಮೋನಿಕಾ ಸಿ.ಪಟೇಲ್‌ ಹಾಕಿದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಲೂಯಿಜಾ ಜೇಮ್ಸ್‌ ತಮಂಗ್‌ ಬೌಲ್ಡ್‌ ಆದರು.

ನಂತರ ರಜಿಯಾ ಫರಿದಾ ಅಹಮದ್‌ (3; 42ಎ) ಮತ್ತು ನೇಹಾ ಹರಿಪಾದ ಹಾಜೊಂಗ್‌ (6; 18ಎ) ತಾಳ್ಮೆಯ ಆಟ ಆಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 10ರನ್‌ ಕಲೆಹಾಕಿತು. 7ನೇ ಓವರ್‌ನಲ್ಲಿ ನೇಹಾ, ಸಹನಾ ಪವಾರ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಪ್ರವಾಸಿ ಪಡೆ ಕುಸಿತದ ಹಾದಿ ಹಿಡಿಯಿತು.

ಮೇಘಾಲಯ ತಂಡದ ಇನಿಂಗ್ಸ್‌ನಲ್ಲಿ ಮೂಡಿಬಂದಿದ್ದು ಕೇವಲ ಒಂದು ಬೌಂಡರಿ. ಅದನ್ನು ಗಳಿಸಿದ್ದು ವಿಕೆಟ್‌ ಕೀಪರ್‌ ಬನರಿಷಾ ವಹಲಾಂಗ್‌ (5; 18ಎ).

14.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 20ರನ್‌ ಗಳಿಸಿದ್ದ ಈ ತಂಡ ಬೇಗನೆ ಆಲೌಟ್ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸುರಿತಿ ಕುಮಾರಿ ರೇ ಇದಕ್ಕೆ ಅವಕಾಶ ನೀಡಲಿಲ್ಲ. 20 ಎಸೆತಗಳನ್ನು ಆಡಿದ ಅವರು ಒಂದು ರನ್‌ ಗಳಿಸಿ ಅಜೇಯವಾಗುಳಿದರು.

ಕರ್ನಾಟಕ ಪರ ಶ್ರೇಯಾಂಕ ಪಾಟೀಲ, ಯಶಸ್ವಿ ಬೌಲರ್‌ ಎನಿಸಿದರು. ನಾಲ್ಕು ಓವರ್‌ ಬೌಲ್‌ ಮಾಡಿದ ಅವರು ಕೇವಲ ಎರಡು ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ ಉರುಳಿಸಿದರು.

ಸುಲಭ ಗುರಿಯನ್ನು ಕರ್ನಾಟಕ ತಂಡ 3.4 ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಳ್ಳದೆ ಮುಟ್ಟಿತು. ಶುಭಾ ಸತೀಶ್‌ (23; 19ಎ, 3ಬೌಂ) ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಮೇಘಾಲಯ; 20 ಓವರ್‌ಗಳಲ್ಲಿ 6 ವಿಕೆಟ್‌ಗೆ 25 (ರಜಿಯಾ ಫರೀದಾ ಅಹಮದ್‌ 3, ನೇಹಾ ಹಾಜೊಂಗ್‌ 6, ಬನರಿಷಾ ವಹಲಾಂಗ್‌ 5; ಮೋನಿಕಾ ಸಿ.ಪಟೇಲ್‌ 5ಕ್ಕೆ1, ಸಹನಾ ಪವಾರ್‌ 0ಕ್ಕೆ1, ಸಿ.ಪ್ರತ್ಯೂಷಾ 9ಕ್ಕೆ1, ಶ್ರೇಯಾಂಕ ಪಾಟೀಲ 2ಕ್ಕೆ3).

ಕರ್ನಾಟಕ: 3.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 29 (ಶುಭಾ ಸತೀಶ್‌ ಔಟಾಗದೆ 23, ಕೆ.ಪ್ರತ್ಯೂಷಾ ಔಟಾಗದೆ 2).

ಫಲಿತಾಂಶ: ಕರ್ನಾಟಕ ತಂಡಕ್ಕೆ 10 ವಿಕೆಟ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.