ಲಂಡನ್: ‘ನಿಮ್ಮ ಕೊನೆಯ ಬ್ಯಾಟರ್ ಮೊಹಮ್ಮದ್ ಸಿರಾಜ್ ಅವರು ಔಟಾಗಿದ್ದು ದುರದೃಷ್ಟಕರ. ಆದರೆ ಆ ಸಂದರ್ಭದಲ್ಲಿ ನಿಮಗೆ ಹೇಗನಿಸಿತು?’–
ಇಂಗ್ಲೆಂಡ್‌ನ ಮೂರನೇ ಕಿಂಗ್ ಚಾರ್ಲ್ಸ್ ಅವರು ಮಂಗಳವಾರ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಕೇಳಿದ ಪ್ರಶ್ನೆ ಇದು.
ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಕಿಂಗ್ ಚಾರ್ಲ್ಸ್ ಅವರ ಆಹ್ವಾನದ ಮೇರೆಗೆ ‘ಗಾರ್ಡನ್ಸ್ ಆಫ್ ಕ್ಲಾರೆನ್ಸ್ ಹೌಸ್’ಗೆ ಭೇಟಿ ನೀಡಿದ್ದವು. ಈ ಸಂದರ್ಭದಲ್ಲಿ 76 ವರ್ಷದ ಚಾರ್ಲ್ಸ್ ಅವರು ಆಟಗಾರರೊಂದಿಗೆ ಹೆಚ್ಚು ಹೊತ್ತು ಸಂವಾದ ನಡೆಸಿದರು.
ಗಿಲ್ ಅವರು ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
‘ಚಾರ್ಲ್ಸ್ ಅವರು ತುಂಬಾ ಅದ್ಭುತವಾದ ವ್ಯಕ್ತಿ. ಹೃದಯ ವೈಶಾಲ್ಯವಿರುವವರು. ಅವರೊಂದಿಗೆ ಉತ್ತಮ ಸಂವಾದ ನಡೆಸಿದ್ದು ಸಂತಸವಾಗಿದೆ. ರೋಚಕ ಟೆಸ್ಟ್‌ನಲ್ಲಿ ನಮ್ಮ ಕೊನೆಯ ಬ್ಯಾಟರ್ ಸಿರಾಜ್ ಅವರು ಔಟಾದಾಗ ನಮಗೆಲ್ಲ ಹೇಗನಿಸಿತು ಎಂದು ಚಾರ್ಲ್ಸ್ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಾವು, ಅದೊಂದು ದುರದೃಷ್ಟಕರ ಪಂದ್ಯ. ಸರಣಿಯ ಮುಂದಿನ ಎರಡೂ ಪಂದ್ಯಗಳಲ್ಲಿ ಅದೃಷ್ಟ ನಮ್ಮ ಪರವಾಗಿರುವ ನಿರೀಕ್ಷೆ ಇದೆ ಎಂದೆವು. ಅವರೊಂದಿಗೆ ಇನ್ನೂ ಬಹಳಷ್ಟು ಅರ್ಥಪೂರ್ಣ ಮಾತುಕತೆಗಳನ್ನು ಮಾಡಿದೆವು’ ಎಂದರು.
ಸೋಮವಾರ ಲಾರ್ಡ್ಸ್‌ನಲ್ಲಿ ಭಾರತ ತಂಡವು 22 ರನ್‌ಗಳಿಂದ ಸೋತಿತು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ರವೀಂದ್ರ ಜಡೇಜ ಮತ್ತು ಮೊಹಮ್ಮದ್ ಸಿರಾಜ್ ಅವರ ವಿರೋಚಿತ ಹೋರಾಟದಿಂದಾಗಿ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿತ್ತು. ಆದರೆ, ಇಂಗ್ಲೆಂಡ್ ಆಫ್‌ಸ್ಪಿನ್ನರ್ ಶೋಯಬ್ ಬಶೀರ್ ಅವರ ಎಸೆತವನ್ನು ಸಿರಾಜ್ ರಕ್ಷಣಾತ್ಮಕವಾಗಿ ಆಡಿದರು. ಚೆಂಡು ನೆಲದ ಮೇಲೆ ನಿಧಾನವಾಗಿ ಉರುಳುತ್ತಾ ಹೋಗಿ ಸ್ಟಂಪ್‌ಗೆ ಬಡಿದು ಬೇಲ್ಸ್ ಉರುಳಿದವು. ಅದರೊಂದಿಗೆ ಭಾರತಕ್ಕೆ ಸೋಲಿನ ನಿರಾಸೆ ಕಾಡಿತು.
‘ಸರಣಿಯ ಕಳೆದ ಮೂರು ಪಂದ್ಯಗಳೂ ಅದ್ಭುತವಾಗಿದ್ದವು. ಉನ್ನತ ದರ್ಜೆಯ ಈ ಪಂದ್ಯಗಳಿಂದಾಗಿ ಜನರಲ್ಲಿ ಟೆಸ್ಟ್ ಕ್ರಿಕೆಟ್ ಕುರಿತ ಆಸಕ್ತಿ ಹೆಚ್ಚಿದೆ. ನಮ್ಮ ತಂಡಕ್ಕೂ ಇಲ್ಲಿಯ ಸ್ಥಳೀಯರು ಬೆಂಬಲ ನೀಡುತ್ತಿದ್ದಾರೆ. ಎಲ್ಲಿ ಹೋದರು ಉತ್ತಮ ಬೆಂಬಲ ಸಿಗುತ್ತಿರುವುದು ನಮ್ಮ ಅದೃಷ್ಟ. ಸರಣಿಯ ಆರಂಭದ ಕೆಲವು ದಿನಗಳಲ್ಲಿ ಇಂಗ್ಲೆಂಡ್ ಅಭಿಮಾನಿಗಳು ಹೆಚ್ಚಿದ್ದರು. ಆದರೆ ಲಾರ್ಡ್ಸ್ ಪಂದ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ನಮಗೆ ಅಪಾರ ಬೆಂಬಲ ದೊರೆಯಿತು’ ಎಂದರು.
ಜಯದ ಅವಕಾಶ ಇತ್ತು: ಗಂಗೂಲಿ ಬೇಸರ
ಮುಂಬೈ: ಭಾರತ ತಂಡದಲ್ಲಿರುವ ಬ್ಯಾಟರ್‌ಗಳ ಸಾಮರ್ಥ್ಯವನ್ನು ನೋಡಿದರೆ ಲಾರ್ಡ್ಸ್ ಟೆಸ್ಟ್ ಗೆಲ್ಲುವುದು ಕಷ್ಟವೇನಾಗಿರಲಿಲ್ಲ. ಈ ಸೋಲಿನಿಂದ ಬೇಸರವಾಗಿದೆ ಎಂದು ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದಾರೆ. ‘ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ. ಒಂದಿಷ್ಟು ತಾಳ್ಮೆಯಿಂದ ಆಡಬೇಕಿತ್ತು. 190 ರನ್ ಗುರಿಯನ್ನು ಸಾಧಿಸುವುದು ಕಷ್ಟವೇನಾಗಿರಲಿಲ್ಲ. ರವೀಂದ್ರ ಜಡೇಜ ಹೋರಾಟ ಮತ್ತು ಅವರು ರನ್ ಗಳಿಸಿದ್ದನ್ನು ನಾವು ನೋಡಿದೆವು. ಮೇಲಿನ ಕ್ರಮಾಂಕದ ಬ್ಯಾಟರ್‌ಗಳೂ ಅಂತಹ ಆಟ ಆಡಬಹುದಿತ್ತು.
ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸುವ ಅವಕಾಶ ಕೈತಪ್ಪಿತು’ ಎಂದು ವಿಷಾದಿಸಿದರು. ‘ಅಗ್ರಸ್ಥಾನದಲ್ಲಿರುವ ಬ್ಯಾಟರ್‌ಗಳು ಒಂದಿಷ್ಟು ಹೋರಾಟ ತೋರಿದ್ದರೆ ಮತ್ತು ರನ್‌ಗಳನ್ನು ಪೇರಿಸಿದ್ದರೆ ಗೆಲುವಿನ ಹಾದಿ ಸುಲಭವಾಗುತ್ತಿತ್ತು’ ಎಂದರು. ಅವರು ಇಂಡಿಯನ್ ರೇಸಿಂಗ್ ಲೀಗ್ ಮತ್ತು ಎಫ್4 ಇಂಡಿಯಾ ಚಾಂಪಿಯನ್‌ಷಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಟೆಸ್ಟ್ ಪಂದ್ಯ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಖಾತೆ ತೆರೆಯಲಿಲ್ಲ. ಶುಭಮನ್ ಗಿಲ್ (6 ರನ್) ಮತ್ತು ರಿಷಭ್ ಪಂತ್ (9 ರನ್) ಅವರು ಬೇಗನೆ ಔಟಾದರು. ಕೆ.ಎಲ್. ರಾಹುಲ್ (39) ಮತ್ತು ಜಡೇಜ (ಅಜೇಯ 61) ಉತ್ತಮವಾಗಿ ಆಡಿದ್ದುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.