ADVERTISEMENT

IND vs NZ | ಮಿಚೆಲ್ ಅಬ್ಬರದ ಮುಂದೆ ಮಂಕಾದ ರಾಹುಲ್ ಶತಕ: ಭಾರತಕ್ಕೆ ಸೋಲು

ಪಿಟಿಐ
Published 14 ಜನವರಿ 2026, 18:15 IST
Last Updated 14 ಜನವರಿ 2026, 18:15 IST
<div class="paragraphs"><p>ಡೆರಿಲ್ ಮಿಚೆಲ್</p></div>

ಡೆರಿಲ್ ಮಿಚೆಲ್

   

(ಚಿತ್ರ ಕೃಪೆ: X/@BLACKCAPS)

ರಾಜ್‌ಕೋಟ್: ಬುಧವಾರ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕಿವೀಸ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರಿಬ್ಬರೂ ಸೊಗಸಾದ ಶತಕಗಳನ್ನು ಗಳಿಸಿದರು. ಇಬ್ಬರೂ ತಮ್ಮ ತಂಡಗಳು ಕುಸಿಯುವ ಆತಂಕ

ADVERTISEMENT

ದಲ್ಲಿದ್ದಾಗ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಆದರೆ ಜಯ ಮಿಚೆಲ್ ಅವರ ಶತಕಕ್ಕೆ ಒಲಿಯಿತು.

ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭಾರತದ ಎದುರು 7 ವಿಕೆಟ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ (24; 38ಎ, 4X4) ಮತ್ತು ನಾಯಕ ಶುಭಮನ್ ಗಿಲ್ (56; 53ಎ, 4X9, 6X1) ಅವರು ಮೊದಲ ವಿಕೆಟ್‌ಗೆ 70 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, 13ನೇ ಓವರ್‌ನಲ್ಲಿ ಕ್ರಿಸ್ಟನ್ ಕ್ಲಾರ್ಕ್ (56ಕ್ಕೆ3) ಅವರು ರೋಹಿತ್ ಶರ್ಮಾ ಅವರ ವಿಕೆಟ್ ಗಳಿಸಿದರು. ನಂತರದ 48 ರನ್‌ಗಳು ಸೇರುವಷ್ಟರಲ್ಲಿ ಗಿಲ್, ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಅವರು ಔಟಾದರು. ಇದರಲ್ಲಿ ಗಿಲ್ ವಿಕೆಟ್ ಕೈಲ್ ಜೆಮಿಸನ್ ಪಾಲಾಯಿತು. ವಿರಾಟ್ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಕ್ಲಾರ್ಕ್, ಅಯ್ಯರ್ ವಿಕೆಟ್ ಕೂಡ ಕಬಳಿಸಿದರು. ಈ ಹೊತ್ತಿನಲ್ಲಿ ಕ್ರೀಸ್‌ಗೆ ಬಂದ ರಾಹುಲ್ (ಅಜೇಯ 112; 92ಎ, 4X11, 6X1) ಹಾಗೂ ರವೀಂದ್ರ ಜಡೇಜ (27; 44ಎ) ಜೊತೆಗೂಡಿ ವಿಕೆಟ್ ಪತನ ತಡೆದರು. ಜಡೇಜ ನಂತರ ನಿತೀಶ್ ಕುಮಾರ್ ರೆಡ್ಡಿ (20; 21ಎ) ಅವರು ಒಂದಿಷ್ಟು ಹೊತ್ತು ಕ್ರೀಸ್‌ನಲ್ಲಿದ್ದರು.

ಆದರೆ ಏಕಾಂಗಿ ಹೋರಾಟ ನಡೆಸಿದ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಏಳನೇ ಶತಕ ದಾಖಲಿಸಿದರು. ಐದನೇ ಕ್ರಮಾಂಕದಲ್ಲಿ ಆಡಿದ ಅವರ ಆಟವು ತಾಳ್ಮೆ ಹಾಗೂ ಸೊಗಸಾದ ಹೊಡೆತಗಳಿಂದ ಕೂಡಿತ್ತು. ಅವರು ಶತಕದ ಗಡಿ ದಾಟಲು ಸಿಕ್ಸರ್‌ ಎತ್ತಿದರು. ಒಂದು ಕೈಯಲ್ಲಿ ಬ್ಯಾಟ್ ಮೇಲೆ ಎತ್ತಿ ತಿರುಗಿಸಿದ ಅವರು, ಇನ್ನೊಂದು ಬೆರಳುಗಳನ್ನು ಬಾಯಲ್ಲಿಟ್ಟು ಕೊಂಡು ವಿಶಿಷ್ಟ ರೀತಿಯ ಸಂಭ್ರಮ ಆಚರಿಸಿದರು. ಅವರ ಆಟದ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 284 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಮಿಚೆಲ್ ಮಿಂಚು: ಕಿವೀಸ್ ಬಳಗಕ್ಕೆ ಭಾರತದ ವೇಗಿ ಪ್ರಸಿದ್ಧಕೃಷ್ಣ ಮತ್ತು ಹರ್ಷಿತ್ ರಾಣಾ ಅವರು ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಡವೊನ್ ಕಾನ್ವೆ ಮತ್ತು ಹೆನ್ರಿ ನಿಕೊಲ್ಸ್ ಬೇಗನೆ ಔಟಾದಾಗ ತಂಡವು ಕೇವಲ 24 ರನ್‌ ಗಳಿಸಿತ್ತು. ಈ ಸಂದರ್ಭದಲ್ಲಿ ಜೊತೆಯಾದ ವಿಲ್ ಯಂಗ್ (87; 98ಎ, 4X7) ಮತ್ತು ಡ್ಯಾರಿಲ್ ಮಿಚೆಲ್ (ಔಟಾಗದೇ 131; 117ಎ, 3X11, 6X2) ಕಿವೀಸ್ ಆತಂಕವನ್ನು ದೂರ ಮಾಡಿದರು. ಅವರ ಆಟದ ನೆರವಿನಿಂದ ತಂಡವು 47.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 286 ರನ್ ಗಳಿಸಿತು.

ಮಿಚೆಲ್ ಅವರು ಟಿ20 ಪಂದ್ಯಗಳ ಮಾದರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಭಾರತ ಬೌಲರ್‌ಗಳು ಇವರಿಬ್ಬರ ಮುಂದೆ ನಿರುತ್ತರರಾದರು. ಯಂಗ್ ವಿಕೆಟ್ ಗಳಿಸುವಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಯಶಸ್ವಿಯಾದರು. ಆದರೆ ಕ್ರೀಸ್‌ಗೆ ಬಂದ ಗ್ಲೆನ್ ಫಿಲಿಪ್ಸ್( ಅಜೆಯ 32; 25ಎ) ಕೂಡ ಬೌಲರ್‌ಗಳನ್ನು ದಂಡಿಸಿದರು.

ಸಂಕ್ಷಿಪ್ತ ಸ್ಕೋರು:

ಭಾರತ: 50 ಓವರ್‌ಗಳಲ್ಲಿ 7ಕ್ಕೆ284 (ರೋಹಿತ್ ಶರ್ಮಾ 24, ಶುಭಮನ್ ಗಿಲ್ 56, ವಿರಾಟ್ ಕೊಹ್ಲಿ 23, ಕೆ.ಎಲ್. ರಾಹುಲ್ ಔಟಾಗದೇ 112, ರವೀಂದ್ರ ಜಡೇಜ 27, ನಿತೀಶ್ ಕುಮಾರ್ ರೆಡ್ಡಿ 20, ಕ್ರಿಷ್ಟನ್ ಕ್ಲಾರ್ಕ್ 56ಕ್ಕೆ3, ಕೈಲ್ ಜೆಮಿಸನ್ 70ಕ್ಕೆ1, ಜೈಡನ್ ಲೆನಾಕ್ಸ್ 42ಕ್ಕೆ1)

ನ್ಯೂಜಿಲೆಂಡ್: 47.3 ಓವರ್‌ಗಳಲ್ಲಿ 3ಕ್ಕೆ286 (ವಿಲ್ ಯಂಗ್ 87, ಡ್ಯಾರಿಲ್ ಮಿಚೆಲ್ ಔಟಾಗದೇ 131, ಗ್ಲೆನ್ ಫಿಲಿಪ್ಸ್ ಔಟಾಗದೇ 32, ಹರ್ಷಿತ್ ರಾಣಾ 52ಕ್ಕೆ1, ಪ್ರಸಿದ್ಧಕೃಷ್ಣ 49ಕ್ಕೆ1, ಕುಲದೀಪ್ ಯಾದವ್ 82ಕ್ಕೆ1)

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಡ್ಯಾರಿಲ್‌ ಮಿಚೆಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.