ADVERTISEMENT

ದೆಹಲಿ ತಂಡದ ನಾಯಕತ್ವ ಬೇಡವೆಂದ ವಿರಾಟ್ ಕೊಹ್ಲಿ

12 ವರ್ಷಗಳ ನಂತರ ರಣಜಿ ನೆಟ್ಸ್‌ನಲ್ಲಿ ಕೊಹ್ಲಿ

ಪಿಟಿಐ
Published 28 ಜನವರಿ 2025, 16:13 IST
Last Updated 28 ಜನವರಿ 2025, 16:13 IST
ನವದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ಅಭ್ಯಾಸ ನಡೆಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಹಳೆಯ ಮಿತ್ರ, ಕ್ರಿಕೆಟಿಗ ಶಾವೇಜ್ ಅವರನ್ನು ಭೇಟಿಯಾದ ಕ್ಷಣ –ಪಿಟಿಐ ಚಿತ್ರ
ನವದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ಅಭ್ಯಾಸ ನಡೆಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಹಳೆಯ ಮಿತ್ರ, ಕ್ರಿಕೆಟಿಗ ಶಾವೇಜ್ ಅವರನ್ನು ಭೇಟಿಯಾದ ಕ್ಷಣ –ಪಿಟಿಐ ಚಿತ್ರ   

ನವದೆಹಲಿ: ರೇಲ್ವೆಸ್ ತಂಡದ ಎದುರು ಇದೇ 30ರಿಂದ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೊಹ್ಲಿ ಸಮ್ಮತಿಸಲಿಲ್ಲ. ಸದ್ಯ ತಂಡವನ್ನು ಮುನ್ನಡೆಸುತ್ತಿರುವ ಆಯುಷ್ ಬಡೋನಿ ಅವರೇ ನಾಯಕರಾಗಿ ಮುಂದುವರಿಯಲಿ ಎಂದು ಹೇಳಿದ್ದಾರೆ. 

12 ವರ್ಷಗಳ ನಂತರ ಅವರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. ಅದಕ್ಕಾಗಿ ಮಂಗಳವಾರ ಅಭ್ಯಾಸ ಆರಂಭಿಸಿದರು. ತಮ್ಮ ತವರು ದೆಹಲಿ ತಂಡದ ಆಟಗಾರರೊಂಂದಿಗೆ ತಾಲೀಮು ನಡೆಸಿದರು. 

‘ತಂಡದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ವಿರಾಟ್ ಅವರನ್ನು ಕೇಳಿದೆವು. ಆದರೆ ಅವರು ಆಯುಷ್ ಅವರೇ ಮುಂದುವರಿಯಬೇಕು ಎಂದಷ್ಟೇ ತಿಳಿಸಿದರು’ ಎಂದು ಡಿಡಿಸಿಎ ಮೂಲಗಳು ತಿಳಿಸಿವೆ. 

ADVERTISEMENT

ಕೊಹ್ಲಿ ಅವರು ಆಡುತ್ತಿರುವುದರಿಂದ ಈ ಪಂದ್ಯದ ನೇರಪ್ರಸಾರವನ್ನು ಜಿಯೊ ಸಿನಿಮಾ ಆ್ಯಪ್ ನೀಡಲಿದೆ. 

ಬಿಸಿಸಿಐ ನಿಯಮದ ಪ್ರಕಾರ ರಣಜಿ ಟೂರ್ನಿ ಸುತ್ತಿನಲ್ಲಿರುವ ಮಹತ್ವದ ಪಂದ್ಯವನ್ನು ಟಿ.ವಿ ಮತ್ತು ಆ್ಯಪ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಈ ಸುತ್ತಿನಲ್ಲಿ ಕರ್ನಾಟಕ ಮತ್ತು ಹರಿಯಾಣ ಪಂದ್ಯವನ್ನು ನೇರಪ್ರಸಾರ ಮತ್ತು ಲೈವ್‌ ಸ್ಟ್ರೀಮ್ ಮಾಡಲು ನಿಗಿದಿಯಾಗಿದೆ. 

ಪಂಜಾಬ್ –ಬಂಗಾಲ ಮತ್ತು ಬರೋಡಾ–ಜಮ್ಮುಕಾಶ್ಮೀರ ತಂಡಗಳ ನಡುವಣ ಪಂದ್ಯಗಳನ್ನು ಆ್ಯಪ್ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಈ ವೇಳಾಪಟ್ಟಿಯು ಪೂರ್ವನಿಗದಿಯಾಗಿರುತ್ತದೆ. ಒಂದೊಮ್ಮೆ ಕೊಹ್ಲಿ ಆಡದೇ ಹೋಗಿದ್ದರೆ ಈ ಪಂದ್ಯವು ನೇರಪ್ರಸಾರಗೊಳ್ಳುವ ಸಾಧ್ಯತೆಗಳು ಇರಲಿಲ್ಲ.  ಆದರೆ ಕೊಹ್ಲಿ ಆಕರ್ಷಣೆಯಿಂದಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.

‘ಜಿಯೊ ಸಿನಿಮಾ ಆ್ಯಪ್ ಈ ಪಂದ್ಯವನ್ನು ನೇರಪ್ರಸಾರ ಮಾಡಲಿದೆ. ದೆಹಲಿಯಿಂದ ಹೊರಗಿರುವ ಕೊಹ್ಲಿ ಅಭಿಮಾನಿಗಳೂ ತಮ್ಮ ನೆಚ್ಚಿನ ತಾರೆಯ ಆಟವನ್ನು ಕಣ್ತುಂಬಿಕೊಳ್ಳಬಹುದು. ಅಭಿಮಾನಿಗಳು ಹೆಚ್ಚು ಚಿಂತಿಸಬೇಕಾಗಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಹ್ಲಿ ಅವರು 2012ರ ರಣಜಿ ಟೂರ್ನಿಯಲ್ಲಿ ಉತ್ತರಪ್ರದೇಶದ (ಗಾಜಿಯಾಬಾದಿನಲ್ಲಿ) ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಅದರ ನಂತರ ಅವರು ಈಗಲೇ ದೇಶಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. 

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಅವರು ದೆಹಲಿ ತಂಡದ ಸಹ ಆಟಗಾರರೊಂದಿಗೆ ಬೆರೆತು ಅಭ್ಯಾಸ ಮಾಡಿದರು. 15 ನಿಮಿಷ ಫುಟ್‌ಬಾಲ್ ಆಡಿ, ವಾರ್ಮ್‌ ಅಪ್ ವ್ಯಾಯಾಮಗಳನ್ನು ಮಾಡಿದರು. ಎಲ್ಲರೊಂದಿಗೆ ಸ್ಥಳೀಯ ಖಾದ್ಯ ಚಾವಲ್ ಖಡಿ (ಅನ್ನ ಸಾರು) ಊಟ ಮಾಡಿದರು.

ಕಳೆದ ಸುತ್ತಿನಲ್ಲಿ ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಅವರು ತಮ್ಮ ತವರಿನ ತಂಡಗಳಲ್ಲಿ ಆಡಿದ್ದರು. ಅವರು ಫೆಬ್ರುವರಿ 6ರಂದು  ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ಆಡುವುದರಿಂದ ಮುಂಬರುವ ರಣಜಿ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.