ಅಭ್ಯಾಸ ನಿರತ ಭಾರತ ಕ್ರಿಕೆಟ್ ತಂಡದ ಆಟಗಾರರು
ಲಂಡನ್: ಲಾರ್ಡ್ಸ್‌ನಲ್ಲಿ ಗುರುವಾರ ಆರಂಭವಾಗುವ ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ಸವಾಲಿನ ಪಿಚ್ ಸಿದ್ಧಪಡಿಸಬಹುದೆಂಬ ನಿರೀಕ್ಷೆಯಿದೆ. ಆದರೆ ಲಯದಲ್ಲಿರುವ ಬ್ಯಾಟರ್‌ಗಳಿಂದ ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಬಹುದೆಂಬ ವಿಶ್ವಾಸವನ್ನು ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಮಂಗಳವಾರ ವ್ಯಕ್ತಪಡಿಸಿದ್ದಾರೆ.
ಪಿಚ್ ಸಾಕಷ್ಟು ಹಸಿರಿನಿಂದ ಕೂಡಿದೆ. ಆದರ ಮೂರನೇ ಟೆಸ್ಟ್‌ನ ಆರಂಭಕ್ಕೆ ಇನ್ನೂ ಎರಡು ದಿನಗಳು ಉಳಿದಿದ್ದು, ಹುಲ್ಲನ್ನು ಸವರಲು ಅವಕಾಶವಿದೆ. ಇಲ್ಲೂ ಸಪಾಟು ವಿಕೆಟ್‌ಗೆ ಇಂಗ್ಲೆಂಡ್ ಆಸಕ್ತಿ ತೋರಬಹುದೇ ಎಂಬ ಕುತೂಹಲ ಉಳಿದಿದೆ.
ಎಜ್‌ಬಾಸ್ಟನ್‌ನಲ್ಲಿ ಭಾರತ ಇನಿಂಗ್ಸ್ ಮತ್ತು 336 ರನ್‌ಗಳಿಂದ ಜಯಗಳಿಸಿದ್ದು, ಐದು ಟೆಸ್ಟ್‌ಗಳ ಸರಣಿಯನ್ನು 1–1 ಸಮಬಲ ಮಾಡಿಕೊಂಡಿತ್ತು.
ದಣಿದಿರುವ ಬೌಲಿಂಗ್ ಪಡೆಯಲ್ಲಿ ಬದಲಾವಣೆ ಮಾಡಲು ಇಂಗ್ಲೆಂಡ್ ಯೋಚಿಸುತ್ತಿದೆ. ಹೀಗಾಗಿ ಅನುಭವಿ ವೇಗದ ಬೌಲರ್ ಜೋಫ್ರಾ ಆರ್ಚರ್ ನಾಲ್ಕು ವರ್ಷಗಳ ನಂತರ ಇಲ್ಲಿ ಮೊದಲ ಬಾರಿ ಟೆಸ್ಟ್ ಆಡಬಹುದು. ‘ಜೋಫ್ರಾ ಆಡಿದರೆ ಪಂದ್ಯ ಸವಾಲಿನಿಂದ ಕೂಡಲಿದೆ’ ಎಂದು ಕೊಟಕ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಪಿಚ್‌ನಲ್ಲಿ ಹುಲ್ಲು ಸಾಕಷ್ಟು ಇರುವ ಕಾರಣ, ಲೀಡ್ಸ್ ಮತ್ತು ಬರ್ಮಿಂಗಮ್‌ನ ಪಿಚ್‌ಗಳಿಗೆ ಹೋಲಿಸಿದರೆ, ಲಾರ್ಡ್ಸ್‌ನ ಪಿಚ್ ಸವಾಲಿನಿಂದ ಕೂಡಲಿದೆ ಎಂಬುದು ಕೊಟಕ್ ನಿರೀಕ್ಷೆ.
‘ಸಾಮಾನ್ಯವಾಗಿ ಲಾರ್ಡ್ಸ್‌ನಲ್ಲಿ ಮೊದಲ ಮತ್ತು ಎರಡನೇ ಇನಿಂಗ್ಸ್ ಸ್ಕೋರು ಅಲ್ಪಮೊತ್ತದಿಂದ ಕೂಡಿರುತ್ತದೆ. ಹೀಗಾಗಿ ಬೌಲರ್‌ಗಳು ಇಲ್ಲಿ ಹೆಚ್ಚು ನೆರವು ನಿರೀಕ್ಷಿಸಬಹುದು’ ಎಂದು ಅವರು ಹೇಳಿದರು.
ಲಾರ್ಡ್ಸ್‌ನಲ್ಲಿ ನಡೆದ ಕೊನೆಯ ಪಂದ್ಯ– ಅಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್. ಅಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಮೊದಲ ಎರಡು ದಿನ ತಲಾ 14 ವಿಕೆಟ್‌ಗಳು ಉರುಳಿದ್ದವು. ಅಂತಿಮವಾಗಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು 282 ರನ್‌ಗಳ ಗುರಿ ತಲುಪಿದ್ದರು.
ಕ್ಯುರೇಟರ್‌ಗಳು ಹಸಿರು ಉಳಿಸಿದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳಿಗೆ ಸವಾಲು ಎದುರಾಗಲಿದೆ.
‘ಬ್ಯಾಟರ್‌ಗಳು ಇಲ್ಲಿ ಕುದುರಿಕೊಳ್ಳಬೇಕಾದರೆ, ಸಾಕಷ್ಟು ಹೊತ್ತು ಪಿಚ್‌ನಲ್ಲಿ ಕಳೆಯಬೇಕಾಗುತ್ತದೆ’ ಎಂದು ಕೊಟಕ್ ಹೇಳಿದ್ದಾರೆ.
ಆದರೆ ಭಾರತ ತಂಡದ ಬ್ಯಾಟರ್‌ಗಳು ಯಶಸ್ಸು ಕಾಣುತ್ತಿದ್ದಾರೆ. ನಾಯಕ ಗಿಲ್ ಅತ್ಯುತ್ತಮ ಲಯದಲ್ಲಿದ್ದಾರೆ. ನಾಲ್ಕು ಇನಿಂಗ್ಸ್‌ಗಳಿಂದ 585 ರನ್ ಕಲೆಹಾಕಿದ್ದಾರೆ. ನಾಯಕನಾಗಿ ತಮ್ಮ ಮೊದಲ ಪ್ರವಾಸದಲ್ಲೇ ಸೈ ಎನಿಸಿದ್ದಾರೆ. ರಿಷಭ್ ಪಂತ್, ಕೆ.ಎಲ್.ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಸಹ ಶತಕಗಳನ್ನು ಬಾರಿಸಿದ್ದರಿಂದ ತಂಡ ಆತ್ಮವಿಶ್ವಾಸದಲ್ಲಿದೆ.
ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಮೂರನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಉಜ್ವಲವಾಗಿದೆ. ಮಂಗಳವಾರ ಭಾರತ ತಂಡದ ನೆಟ್ ಪ್ರಾಕ್ಟೀಸ್ ವೇಳೆ ಅವರು ಸುಮಾರು 45 ನಿಮಿಷಗಳ ಕಾಲ ಬೌಲಿಂಗ್ ಮಾಡಿದ್ದು ಇದಕ್ಕೆ ಪುಷ್ಟಿ ನೀಡಿತು.
ಎಜ್‌ಬಾಸ್ಟನ್‌ನಲ್ಲಿ ಎರಡನೇ ಟೆಸ್ಟ್ ಆರಂಭಕ್ಕೆ ಮೊದಲು ತಂಡದ ನಾಯಕ ಶುಭಮನ್ ಗಿಲ್ ಅವರು ‘ಬೂಮ್ರಾ ಅವರು ಕಾರ್ಯದೊತ್ತಡ ಭಾಗವಾಗಿ ಎರಡನೇ ಟೆಸ್ಟ್‌ಗೆ ಅಲಭ್ಯರಾಗಿದ್ದು ಮೂರನೇ ಟೆಸ್ಟ್‌ಗೆ ಮರಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದರು. ಬೂಮ್ರಾ ಲವಲವಿಕೆಯಿಂದಿರುವಂತೆ ಕಂಡರು. ಸಹ ಆಟಗಾರರೊಡನೆ ಸಂಭಾಷಣೆ ನಡೆಸುತ್ತಿದ್ದುದು ಕಂಡುಬಂತು.
ಪ್ರಸಿದ್ಧಕೃಷ್ಣ ಅವರ ಬದಲು ಬೂಮ್ರಾ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಒಂದು ಗಂಟೆಗೂ ಹೆಚ್ಚು ಕಾಲ ಬೌಲಿಂಗ್‌ನಲ್ಲಿ ತೊಡಗಿದ್ದು ಗಮನಸೆಳೆಯಿತು.
ಶುಭಮನ್ ಗಿಲ್ ಕೆ.ಎಲ್.ರಾಹುಲ್ ಯಶಸ್ವಿ ಜೈಸ್ವಾಲ್ ರಿಷಭ್ ಪಂತ್ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ನೆಟ್ಸ್‌ನಲ್ಲಿ ತೊಡಗಲಿಲ್ಲ. ಎರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿರುವ ಕರುಣ್ ನಾಯರ್ ಜೊತೆಗೆ ಮತ್ತು ಒಂದು ಪಂದ್ಯ ಆಡಿರುವ ಸಾಯಿ ಸುದರ್ಶನ್ ಅವರು ಹೆಚ್ಚು ಹೊತ್ತು ಬ್ಯಾಟಿಂಗ್‌ನಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.