ADVERTISEMENT

9 ಪಂದ್ಯಗಳಲ್ಲಿ 7 ಜಯ ಬೇಕಿದೆ; ಬೌಲಿಂಗ್ ಸುಧಾರಿಸಿಕೊಳ್ಳುವುದೇ ಸವಾಲು: ಮನ್‌ದೀಪ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 13:02 IST
Last Updated 5 ಅಕ್ಟೋಬರ್ 2020, 13:02 IST
ಅಭ್ಯಾಸ ನಿರತ ಕಿಂಗ್ಸ್ ಆಟಗಾರರು
ಅಭ್ಯಾಸ ನಿರತ ಕಿಂಗ್ಸ್ ಆಟಗಾರರು   

ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿರುವ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕಿಂಗ್ಸ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಮನ್‌ದೀಪ್‌ ಸಿಂಗ್‌, ಉಳಿದಿರುವ 9 ಪಂದ್ಯಗಳಲ್ಲಿ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಬೇಕಿದೆಎಂದು ಹೇಳಿದ್ದಾರೆ.

‘ಇಲ್ಲಿಂದ ಮುಂದೆ ಸಾಗುವುದು ಖಂಡಿತಾ ಕಠಿಣವಾಗಿದೆ. ಉಳಿದಿರುವ 9 ಪಂದ್ಯಗಳಲ್ಲಿ ನಾವು ಕನಿಷ್ಠ 7 ಗೆಲುವು ಸಾಧಿಸಬೇಕಿದೆ. ಇದು ಸವಾಲಿನ ಸಂಗತಿ. ಆದರೆ, ನಮ್ಮ ಪ್ರಮುಖ ಸಮಸ್ಯೆ ಬೌಲಿಂಗ್‌. ಬೌಲಿಂಗ್‌ನಲ್ಲಿ ಸುಧಾರಣೆ ಕಾಣಲು ಕಷ್ಟಪಡುತ್ತಿದ್ದೇವೆ. ಖಂಡಿತ ನಾವು ಚೇತರಿಕೆ ಕಾಣಲಿದ್ದು, ಉತ್ತಮ ಪ್ರದರ್ಶನ ನೀಡಲಿದ್ದೇವೆ’ ಎಂದಿದ್ದಾರೆ.

ಮಾಧ್ಯಮದವರೆದುರು ಮಾತನಾಡಿರುವ ಅವರು,‘ನಾವು ಹೋರಾಟದ ಮನಸ್ಥಿತಿಯನ್ನು ಕಾಪಾಡಿಕೊಂಡು ಮುನ್ನಡೆಯಬೇಕಿದೆ. ಈ ಸಮಯದಲ್ಲಿ ನಮಗೆ ಒಂದು ಗೆಲುವು ಅಗತ್ಯವಾಗಿದೆ ಎಂದು ನನಗನಿಸುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಪಂಜಾಬ್‌ 10 ವಿಕೆಟ್‌ ಅಂತರದ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್‌ 178 ರನ್‌ ಗಳಿಸಿತ್ತು. ಈ ಗುರಿಯನ್ನು ಚೆನ್ನೈ ತಂಡ ಒಂದೂ ವಿಕೆಟ್‌ ಕಳೆದುಕೊಳ್ಳದೆ ದಾಟಿತ್ತು. ಹಿಂದಿನ ಪಂದ್ಯಗಳಲ್ಲಿ ವಿಫಲವಾಗಿದ್ದ ಕರುಣ್‌ ನಾಯರ್ ಬದಲು ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಮನ್‌ದೀಪ್‌,ಕೇವಲ 16 ಎಸೆತಗಳಲ್ಲಿ 2 ಸಿಕ್ಸರ್‌ ಸಹಿತ 27 ರನ್‌ ಗಳಿಸಿ ಭರವಸೆ ಮೂಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೂಪರ್ ಓವರ್‌ನಲ್ಲಿ ಸೋಲು ಕಂಡಿದ್ದ ಪಂಜಾಬ್‌, ಎರಡನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 97 ರನ್‌ ಅಂತರದ ಗೆಲುವು ಕಂಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ಮತ್ತೆ ವಿಫಲವಾಗಿದ್ದ ಈ ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ 4 ವಿಕೆಟ್‌ ಗಳಿಂದ ಹಾಗೂ ನಾಲ್ಕನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 48 ರನ್‌ ಅಂತರದಿಂದ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.