ADVERTISEMENT

ಮಹಿಳಾ ರೆಫರಿ: ಲಕ್ಷ್ಮಿ ವಿನೂತನ ದಾಖಲೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:00 IST
Last Updated 14 ಮೇ 2019, 20:00 IST
ಜಿ.ಎಸ್‌.ಲಕ್ಷ್ಮಿ
ಜಿ.ಎಸ್‌.ಲಕ್ಷ್ಮಿ   

ನವದೆಹಲಿ (ಪಿಟಿಐ): ಭಾರತದ ಜಿ.ಎಸ್‌.ಲಕ್ಷ್ಮಿ ಅವರು ಮಂಗಳವಾರ ಹೊಸ ದಾಖಲೆ ಬರೆದಿದ್ದಾರೆ.

51 ವರ್ಷದ ಲಕ್ಷ್ಮಿ, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಮೊದಲ ಮಹಿಳಾ ರೆಫರಿಯಾಗಿ ನೇಮಕಗೊಂಡಿದ್ದಾರೆ.

ಐಸಿಸಿಯು ಮಂಗಳವಾರ ಲಕ್ಷ್ಮಿ ಅವರ ಹೆಸರನ್ನು ಎಲೀಟ್‌ ರೆಫರಿಗಳ ಪಟ್ಟಿಯಲ್ಲಿ ಸೇರಿಸಿದೆ.

ADVERTISEMENT

ಲಕ್ಷ್ಮಿ ಅವರು 2008–09ರಲ್ಲಿ ನಡೆದಿದ್ದ ಮಹಿಳಾ ದೇಶಿ ಕ್ರಿಕೆಟ್‌ ಪಂದ್ಯದ ವೇಳೆ ಮೊದಲ ಸಲ ರೆಫರಿಯಾಗಿ ಕೆಲಸ ಮಾಡಿದ್ದರು. ನಂತರ ಅವರು ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 (ಮಹಿಳೆಯರು) ಪಂದ್ಯಗಳಿಗೆ ರೆಫರಿಯಾಗಿದ್ದರು.

‘ಐಸಿಸಿ ರೆಫರಿಯಾಗಿ ನೇಮಕಗೊಂಡಿದ್ದು ಹೆಮ್ಮೆಯ ವಿಷಯ. ಹಿಂದೆ ಹಲವು ದೇಶಿ ಪಂದ್ಯಗಳಲ್ಲಿ ಆಡಿದ್ದೇನೆ. ರೆಫರಿಯಾಗಿ ಕೆಲಸ ಮಾಡಿದ ಅನುಭವವೂ ಇದೆ. ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವೂ ಇದೆ’ ಎಂದು ಲಕ್ಷ್ಮಿ ಹೇಳಿದ್ದಾರೆ.

‘ಐಸಿಸಿ, ಬಿಸಿಸಿಐ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಆಭಾರಿಯಾಗಿದ್ದೇನೆ. ಪ್ರತಿ ಹಂತದಲ್ಲೂ ಪ್ರೋತ್ಸಾಹ ನೀಡುತ್ತಾ ಬೆಂಬಲವಾಗಿ ನಿಂತ ಕುಟುಂಬದವರು ಮತ್ತು ಸ್ನೇಹಿತರಿಗೂ ಕೃತಜ್ಞಳಾಗಿದ್ದೇನೆ’ ಎಂದಿದ್ದಾರೆ.

ಆಸ್ಟ್ರೇಲಿಯಾದ ಎಲೋಯಿಸ್‌ ಶೆರಿಡಾನ್‌ ಅವರನ್ನು ಐಸಿಸಿ ಅಂಪೈರ್‌ಗಳ ಅಭಿವೃದ್ಧಿ ಸಮಿತಿಗೆ ಸೇರಿಸಲಾಗಿದೆ. ಕ್ಲೈರ್‌ ಪೊಲೊಸಕ್‌, ಲಾರೆನ್‌ ಅಜೆನ್‌ಬಗ್‌, ಕಿಮ್‌ ಕಾಟನ್‌, ಶಿವಾನಿ ಮಿಶ್ರಾ, ಸುಯಿ ರೆಡ್‌ಫರ್ನ್‌, ಮೇರಿ ವಾಲ್‌ಡ್ರೊನ್‌ ಮತ್ತು ಜಾಕ್ವೆಲಿನ್‌ ವಿಲಿಯಮ್ಸ್‌ ಅವರೂ ಈ ಸಮಿತಿಯಲ್ಲಿ ಇದ್ದಾರೆ.

‘ಮಹಿಳೆಯರಿಗೂ ಪುರುಷರಷ್ಟೇ ಪ್ರಾಧಾನ್ಯತೆ ನೀಡುವುದು ನಮ್ಮ ಉದ್ದೇಶ. ಹೀಗಾಗಿ ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ವನಿತೆಯರಿಗೂ ಹೊಸ ಜವಾಬ್ದಾರಿಗಳನ್ನು ನೀಡುತ್ತಿದ್ದೇವೆ’ ಎಂದು ಐಸಿಸಿಯ ಹಿರಿಯ ವ್ಯವಸ್ಥಾಪಕ ( ಅಂಪೈರ್‌ ಮತ್ತು ರೆಫರಿ) ಆಡ್ರಿಯನ್‌ ಗ್ರಿಫಿತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.