ಲಲಿತ್ ಮೋದಿ
–ಇನ್‌ಸ್ಟಾಗ್ರಾಮ್ ಚಿತ್ರ
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ-2000 (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಇ.ಡಿ) ವಿಧಿಸಿರುವ ₹10.65 ಕೋಟಿ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶನ ನೀಡುವಂತೆ ಕೋರಿ ಇಂಡಿಯನ್ ಪ್ರೀಮಿಯರ್ ಲೀಗ್ ಸಂಸ್ಥಾಪಕ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಆದಾಗ್ಯೂ, ಕಾನೂನಿನ ಪ್ರಕಾರ ಲಭ್ಯವಿರುವ ನಾಗರಿಕ ಪರಿಹಾರಗಳನ್ನು ಪಡೆಯಲು ಲಲಿತ್ ಮೋದಿ ಅರ್ಹರು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.
2024ರ ಡಿಸೆಂಬರ್ 19ರಂದು ಇಡಿ ವಿಧಿಸಿರುವ ₹10.65 ಕೋಟಿ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶನ ನೀಡುವಂತೆ ಕೋರಿ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು. ಜತೆಗೆ, ₹1 ಲಕ್ಷ ದಂಡ ವಿಧಿಸಿತ್ತು.
ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶಗಳ ಹೊರತಾಗಿಯೂ ಲಲಿತ್ ಮೋದಿ ಅವರು ಕ್ಷುಲ್ಲಕ ಮತ್ತು ಸಂಪೂರ್ಣವಾಗಿ ತಪ್ಪು ಕಲ್ಪನೆಯಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್ ಹೇಳಿತ್ತು. ಬಳಿಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಲಲಿತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಐಪಿಎಲ್ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಆರೋಪವನ್ನು ಎದುರಿಸುತ್ತಿರುವ ಲಲಿತ್ ಮೋದಿ, ಸದ್ಯ ಲಂಡನ್‌ನಲ್ಲಿ ನೆಲಸಿದ್ದಾರೆ ಎಂದು ತಿಳಿದುಬಂದಿದೆ. ಅವರು, 2010ರಲ್ಲಿ ಭಾರತವನ್ನು ತೊರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.