ADVERTISEMENT

ಉಮೇಶ್‌ಗೆ ಮೂವತ್ತೆರಡು; ಅವರಾಟಕ್ಕೆ ಆಗೀಗ ಕೋಡು

ವಿಶಾಖ ಎನ್.
Published 25 ಅಕ್ಟೋಬರ್ 2019, 10:02 IST
Last Updated 25 ಅಕ್ಟೋಬರ್ 2019, 10:02 IST
ಉಮೇಶ್ ಯಾದವ್‌
ಉಮೇಶ್ ಯಾದವ್‌   

ಇದೋ ಅಕ್ಟೋಬರ್ 25. ಉಮೇಶ್ ಯಾದವ್‌ಗೆ 32 ತುಂಬಿತು. ಈಗಲೂ ಪ್ರತಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಈ ಕ್ರಿಕೆಟರ್ ಮೊದಲಿನಿಂದಲೂ ನಾನ್–ಗ್ಲ್ಯಾಮರ್. ಮೊನ್ನೆ ಮೊನ್ನೆ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಕೊನೆಯ ಕ್ರಿಕೆಟ್ ಟೆಸ್ಟ್‌ನಲ್ಲಿ ಪುಡಿಗಟ್ಟಿ ಹತ್ತೇ ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸಿ ಮಗುವಿನಂತೆ ನಕ್ಕಿದ್ದ ಉತ್ತರ ಪ್ರದೇಶದ ಹುಡುಗನ ಬದುಕಿನಲ್ಲಿ ಹೋರಾಟದ ಕಥನಗಳಿವೆ.

ಇದೇ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಉಮೇಶ್ ಪ್ರತಿನಿಧಿಸಿದ್ದರು. ಕಳೆದ ವರ್ಷ ಈ ತಂಡದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ವಿಶೇಷಣ ಬೆನ್ನಿಗಿತ್ತು. ಆದರೆ, ಈ ಸಲ ಅವರು ಸರಿಯಾದ ಜಾಗಕ್ಕೆ ಚೆಂಡನ್ನು ಹಾಕುತ್ತಿರಲಿಲ್ಲ. ಆಗ ಅವರು ಪದೇ ಪದೇ ಮುಖದಲ್ಲಿ ಬೇಸರದ ಸಿಕ್ಕುಗಳನ್ನು ಮೂಡಿಸಿಕೊಳ್ಳುತ್ತಿದ್ದರು.

‘ಆರು ತಿಂಗಳಿಂದ ನಾನು ತಡಕಾಡುತ್ತಿರುವೆ. ಅದ್ಯಾಕೋ ವೇಗದ ಬೌಲರ್‌ಗಳಿಗೆಲ್ಲ ಇದು ಶಾಪ ಎನಿಸುತ್ತದೆ. ಕಾಲ ನಮ್ಮ ಪರವಾಗಿ ಇಲ್ಲದಿದ್ದರೆ ಹೀಗೆ ಆಗುವುದೇನೋ. ನಾನು ಶ್ರಮ ಹಾಕುತ್ತಿಲ್ಲ ಎಂದೇನೂ ಅಲ್ಲ. ಆದರೆ, ಅಂದುಕೊಂಡಂತೆ ಫಲಿತಾಂಶ ಗಿಟ್ಟುವುದಿಲ್ಲ. ಹೀಗೆ ಆದಾಗ ಮನಸ್ಸಿನ ತುಂಬ ಬೇಸರ ಮಡುಗಟ್ಟುವುದು ಸಹಜವೇ’ ಎಂದು ಆಗ ಮುಕ್ತವಾಗಿ ಹೇಳಿಕೊಂಡಿದ್ದರು.

ADVERTISEMENT

ಉಮೇಶ್ ಕ್ರಿಕೆಟಿಗನಾಗಬೇಕು ಎಂದು ಗಂಭೀರವಾಗಿ ನಿರ್ಧರಿಸಿದ್ದು 19ನೇ ವಯಸ್ಸಿನಲ್ಲಿ. ಸಾಮಾನ್ಯವಾಗಿ ಅಷ್ಟು ಹೊತ್ತಿಗೆ ಎಷ್ಟೋ ಪ್ರತಿಭಾವಂತರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶದ ಕದ ತಟ್ಟುತ್ತಿರುತ್ತಾರೆ.

ಕಾಲೇಜು ಕ್ರಿಕೆಟ್‌ನಲ್ಲಿ ತಂಡ ಸೇರಿಕೊಳ್ಳಲೆಂದು ಹೋದಾಗ, ‘ನೀನು ಮೊದಲು ಲೆದರ್ ಬಾಲ್ ಕ್ರಿಕೆಟ್‌ ಆಡಿಕೊಂಡು ಬಾ. ಬರೀ ಟೆನಿಸ್ ಬಾಲ್‌ನಲ್ಲಿ ಆಡಿದ್ದರೆ ಇಲ್ಲಿ ಅವಕಾಶ ಸಿಗಲಾದರು’ ಎಂಬ ಪ್ರತಿಕ್ರಿಯೆ ಸಿಕ್ಕಿತು. ತಕ್ಷಣ ಅವರು ವಿದರ್ಭ ಜಿಮ್ಖಾನಾ ಕ್ರಿಕೆಟ್‌ ಕ್ಲಬ್‌ ಸೇರಿಕೊಂಡರು.

1980ರ ದಶಕದ ಕೊನೆಯ ಭಾಗದಲ್ಲಿ ವಿದರ್ಭ ರಣಜಿ ಕ್ರಿಕೆಟ್ ತಂಡದ ನಾಯಕರಾಗಿದ್ದ ಪ್ರೀತಂ ಗಾಂಧೆ ಅಲ್ಲಿ ತರಬೇತಿ ನೀಡುತ್ತಿದ್ದರು. ಅವರ ಕಣ್ಣು ಉಮೇಶ್ ಮೇಲೆ ಬಿತ್ತು. ಕಚ್ಚಾ ವೇಗ. ಆಗೀಗ ಹಾಕುತ್ತಿದ್ದ ಪರಿಣಾಮಕಾರಿ ಬೌನ್ಸರ್‌ಗಳನ್ನು ಗಮನಿಸಿದರು. ಓವರ್‌ಗೆ ಮೂರು ಎಸೆತಗಳನ್ನು ಈ ಹುಡುಗ ಸರಿಯಾದ ಜಾಗದಲ್ಲಿ ಹಾಕಿದರೂ ಬ್ಯಾಟ್ಸ್‌ಮನ್‌ ಕಂಗಾಲಾಗುವುದು ಗ್ಯಾರಂಟಿ ಎನಿಸಿತು. ಅವರು ಸಾಣೆಗೆ ಒಡ್ಡಿದರು.

ಉಮೇಶ್ 2008ರಲ್ಲೇ ರಣಜಿ ತಂಡವನ್ನು ಪ್ರತಿನಿಧಿಸಲು ಸಾಧ್ಯವಾದದ್ದು ಇದೇ ಕಾರಣಕ್ಕೆ. ಮೂರೇ ವರ್ಷಗಳಲ್ಲಿ ಅಂತರರಾಷ್ಟ್ರೀಯ ಟೆಸ್ಟ್‌ ಆಟಗಾರನಾಗಿ ಆಯ್ಕೆಯಾದದ್ದು ಬೋನಸ್ಸು. ವಿದರ್ಭ ತಂಡದಿಂದ ಅದುವರೆಗೆ ಯಾರೊಬ್ಬರೂ ಅಂತರರಾಷ್ಟ್ರೀಯ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ವೆಸ್ಟ್‌ಇಂಡೀಸ್‌ ವಿರುದ್ಧ 2011ರಲ್ಲಿ ನಡೆದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳು ಅವರ ಖಾತೆಗೆ ಜಮೆಯಾದವು.

ಉಮೇಶ್‌ ಅಂತರರಾಷ್ಟ್ರೀಯ ಕ್ರಿಕೆಟ್‌ ತಂಡದಿಂದ ಪದೇ ಪದೇ ಹೊರಗೆ ಕೂರುವುದು ನಡೆದೇ ಇದೆ. ಅಲ್ಲಿರುವ ಸ್ಪರ್ಧೆಯೇ ಇದಕ್ಕೆ ಕಾರಣ. 2015ರ ವಿಶ್ವಕಪ್‌ನಲ್ಲಿ ಭಾರತದ ಅತಿ ಹೆಚ್ಚು ವಿಕೆಟ್ ಪಡೆದಿದ್ದ (18) ಅವರಿಗೆ ಈ ಸಲದ ವಿಶ್ವಕಪ್ ತಂಡದಲ್ಲಿ ಸ್ಥಾನವೇ ಸಿಗಲಿಲ್ಲ.

ಸೇನೆಗೆ ಸೇರುವ, ಪೊಲೀಸ್ ಆಗುವ ಕನಸು ಕಾಣುತ್ತಿದ್ದ, ಕಲ್ಲಿದ್ದಲು ಗಣಿ ಕಾರ್ಮಿಕನ ಮಗನೊಬ್ಬ 43 ಟೆಸ್ಟ್‌ಗಳಲ್ಲಿ 130, 75 ಏಕದಿನದ ಪಂದ್ಯಗಳಲ್ಲಿ 106 ವಿಕೆಟ್‌ಗಳನ್ನು ಕಿತ್ತಿರುವುದು ಸಣ್ಣ ಸಾಧನೆಯೇನೂ ಅಲ್ಲ. ದಕ್ಷಿಣ ಆಫ್ರಿಕಾ ಎದುರು ಅವರು ಆಡಿದ ರೀತಿ ಅವರೊಳಗಿನ ಛಲಗಾರನ ಎದೆಬಡಿತ ಜೋರಾಗಿರುವುದಕ್ಕೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.