ADVERTISEMENT

U19 World Cup: ಅಪ್ಪನ ಕನಸಿನ ಹಾದಿಯಲ್ಲಿ ಸಚಿನ್

19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ ಬೀಡ್ ಪ್ರತಿಭೆ

ಪಿಟಿಐ
Published 8 ಫೆಬ್ರುವರಿ 2024, 0:30 IST
Last Updated 8 ಫೆಬ್ರುವರಿ 2024, 0:30 IST
ಸಚಿನ್ ದಾಸ್
ಸಚಿನ್ ದಾಸ್    

ನವದೆಹಲಿ: ಯುವಪ್ರತಿಭೆ ಸಚಿನ್ ದಾಸ್  ಕ್ರಿಕೆಟಿಗನಾಗಿ ಬೆಳೆಯುವುದು ಅವರ ತಾಯಿಗೆ ಇಷ್ಟವಿರಲಿಲ್ಲ. ಪೊಲೀಸ್ ಅಧಿಕಾರಿಯಾಗಿರುವ ತಾಯಿಗೆ ತಮ್ಮ ಮಗ ಓದಿನಲ್ಲಿ ಮುಂದುವರಿಯಬೇಕೆಂಬ ಆಸೆ ಇತ್ತು. ಆದರೆ ಅಪ್ಪನಿಗೆ ತಮ್ಮ ಮಗ ಕ್ರಿಕೆಟಿಗನಾಗಲಿ ಎಂಬ ಹೆಬ್ಬಯಕೆ ಇತ್ತು.

ಇದೀಗ ಸಚಿನ್ ಧಾಸ್ ತಮ್ಮ ತಂದೆಯ ಕನಸನ್ನು ನನಸು ಮಾಡುವತ್ತ ದಾಪುಗಾಲಿಟ್ಟಿದ್ದಾರೆ.  ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌  ಪಂದ್ಯದಲ್ಲಿ ಭರ್ಜರಿ 96 ರನ್‌ ಗಳಿಸಿದ ಸಚಿನ್ ತಮ್ಮ ನಾಯಕ ಉದಯ್ ಸಹಾರನ್ (81 ರನ್) ಅವರೊಂದಿಗಿನ ಜೊತೆಯಾಟದಲ್ಲಿ ತಂಡವನ್ನು ಗೆಲ್ಲಿಸಿದರು. ಭಾರತ ತಂಡವು ಫೈನಲ್ ತಲುಪಿದೆ.

‘ಫಿನಿಷರ್‘ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಅವರು 100ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 294 ರನ್‌ ಗಳಿಸಿದ್ದಾರೆ.

ADVERTISEMENT

‘2005ರಲ್ಲಿ ನನ್ನ ಮಗ ಜನಿಸಿದ. ನಾನು ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ. ಅದಕ್ಕಾಗಿ ಮಗನಿಗೆ ಸಚಿನ್ ಎಂದು ಹೆಸರಿಟ್ಟೆ. ನನಗೆ ವಿರಾಟ್ ಕೊಹ್ಲಿಯ ಆಟವೂ ಇಷ್ಟ’ ಎಂದು ಸಂಜಯ್ ದಾಸ್ ಹೇಳುತ್ತಾರೆ. ಸಚಿನ್ ಅವರು ವಿರಾಟ್ ಅಭಿಮಾನಿಯಂತೆ.

ಮಹಾರಾಷ್ಟ್ರದ ಬೀಡ್ ಗ್ರಾಮದ ಸಚಿನ್ ಬಾಲ್ಯದಿಂದಲೂ ಕ್ರಿಕೆಟ್ ಅಭ್ಯಾಸ ಮಾಡಿದ್ದು 11 ಯಾರ್ಡ್ಸ್‌ (ಅರ್ಧ ಪಿಚ್) ಅಂಕಣಗಳಲ್ಲಿ. ಆದರೆ ಈಗ 19 ವರ್ಷದ ಸಚಿನ್ 22 ಯಾರ್ಡ್ಸ್‌ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

‘ಇಲ್ಲಿ (ಬೀಡ್) ನಿಮಗೆ ಎಲ್ಲಿ ಹೋದರೂ ಅರ್ಧ ಪಿಚ್‌ ಮಾತ್ರ ಲಭ್ಯವಿದೆ. ಸಚಿನ್ ನಾಲ್ಕೂವರೆ ವರ್ಷದ ಬಾಲಕನಾಗಿದ್ದಾಗ ತಂದೆಯೊಂದಿಗೆ ಇಲ್ಲಿ ಬಂದಿದ್ದ. ಇಲ್ಲಿಯೇ ತರಬೇತಿ ಪಡೆದು ಬೆಳೆದ ಹುಡುಗ. ಇತ್ತೀಚೆಗೆ ದಕ್ಷಿಣ ಆಫ್ರಿಕಾಗೆ ಹೋಗುವ ಮುನ್ನವೂ ಸಚಿನ್ ಇಲ್ಲಿಯೇ ಬಂದು ಅರ್ಧ ಪಿಚ್‌ನಲ್ಲಿ ಬಹಳಷ್ಟು ಅಭ್ಯಾಸ ಮಾಡಿದ್ದರು‘ ಎಂದು ಸಚಿನ್ ಬಾಲ್ಯದ ಕೋಚ್ ಶೇಖ್ ಅಜರ್ ಹೇಳಿದ್ದಾರೆ.

‘ಪೊಲೀಸ್ ಅಧಿಕಾರಿಯಾಗಿರುವ ತಾಯಿಯು ಶಿಸ್ತುಬದ್ಧ ಜೀವನ ಕಲಿಸಿದ್ದಾರೆ. ಅದ್ದರಿಂದ ಸಚಿನ್ ಕೂಡ ಶಿಸ್ತಿನಿಂದ ಬೆಳೆದಿರುವುದರಿಂದ ಕ್ರಿಕೆಟ್ ಕಲಿಕೆಯು ಸುಲಭವಾಯಿತು’ ಎಂದೂ ಅವರು ಹೇಳುತ್ತಾರೆ.

ಸಚಿನ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಕೊನೆಯ ಹಂತದ ಓವರ್‌ಗಳಲ್ಲಿ ಅವರು ಉತ್ತಮವಾಗಿ ಬ್ಯಾಟ್ ಬೀಸುತ್ತಾರೆ. ವೇಗವಾಗಿ ರನ್‌ ಗಳಿಸುತ್ತಾರೆ. ಸೆಮಿಫೈನಲ್ ಪಂದ್ಯದಲ್ಲಿ ಅವರು ಕ್ರೀಸ್‌ಗೆ ಬಂದಾಗ ಭಾರತ ಂಡವು 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಡಿತ್ತು. ನಂತರ ಸಚಿನ್ ಮತ್ತು ಉದಯ್ ಅವರಿಂದಾಗಿ ಪಂದ್ಯದ ಚಿತ್ರಣವೇ ಬದಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.