ಲಖನೌ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಿಷಭ್ ಪಂತ್ ಸಾರಥ್ಯದ ಲಖನೌ ಸೂಪರ್ ಜೈಂಟ್ಸ್ ತಂಡವು ಮಂಗಳವಾರ ತವರಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಮತ್ತು ಎರಡನೇ ಅತ್ಯಂತ ದುಬಾರಿ ಆಟಗಾರರ ನಡುವಿನ ಹಣಾಹಣಿಗೆ ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ. ದಾಖಲೆಯ ₹27 ಕೋಟಿ ಪಡೆದ ಪಂತ್ ಲಖನೌ ತಂಡವನ್ನು, ₹26.75 ಕೋಟಿ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ.
ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ವಿಕೆಟ್‌ನಿಂದ ಸೋಲು ಅನುಭವಿಸಿದ ಲಖನೌ ತಂಡ, ಎರಡನೇ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ತಂಡವನ್ನು ಅವರ ತವರಿನಲ್ಲೇ ಐದು ವಿಕೆಟ್‌ಗಳಿಂದ ಮಣಿಸಿತ್ತು. ನಿಕೋಲಸ್ ಪೂರನ್ 70 ರನ್ (23 ಎಸೆತ) ಮತ್ತು ಮಿಚೆಲ್ ಮಾರ್ಚ್ 52 ರನ್ (31 ಎಸೆತ) ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಶಾರ್ದೂಲ್ ಠಾಕೂರ್ ನಾಲ್ಕು ವಿಕೆಟ್ ಪಡೆದು ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 0 ಮತ್ತು 15 ರನ್ ಗಳಿಸಿದ್ದ ಪಂತ್ ಟೀಕಾಕಾರರಿಗೆ ಆಹಾರವಾಗಿದ್ದರು. 27 ವರ್ಷ ವಯಸ್ಸಿನ ವಿಕೆಟ್‌ಕೀಪರ್–ಬ್ಯಾಟರ್ ಪಂತ್ ಅವರು ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ಒತ್ತಡದಲ್ಲಿದ್ದಾರೆ. ಅಲ್ಲದೇ, ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಕೋಚ್ ರಿಕಿ ಪಾಂಟಿಂಗ್ ಅವರನ್ನು ಎದುರಿಸಲಿದ್ದಾರೆ. ಈ ಋತುವಿನಲ್ಲಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪಂತ್ ಈ ಹಿಂದೆ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.
ಗುಜರಾತ್ ಟೈಟನ್ಸ್ ವಿರುದ್ಧ 11 ರನ್‌ಗಳ ಜಯಸಾಧಿಸಿ ಪಂಜಾಬ್ ತಂಡವು ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಶ್ರೇಯಸ್ 42 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಮೊದಲ ಪಂದ್ಯದಲ್ಲೇ ಸಾಬೀತುಪಡಿಸಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅದೇ ಕ್ರಮಾಂಕವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್
ಬಲಾಬಲ
ಒಟ್ಟು ಪಂದ್ಯ 4
ಲಖನೌ ಗೆಲುವು 3
ಪಂಜಾಬ್ ಗೆಲುವು 1
ಲಖನೌ
ಗರಿಷ್ಠ ರನ್ 257
ಕನಿಷ್ಠ ರನ್ 159
ಪಂಜಾಬ್
ಗರಿಷ್ಠ ರನ್ 201
ಕನಿಷ್ಠ ರನ್ 133
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.