ಲಖನೌ: ಬೌಲಿಂಗ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರು ಬ್ಯಾಟಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲುವಿನ ದಡ ಸೇರಿಸುವ ಅವಕಾಶ ಹೊಂದಿದ್ದರು. ಆದರೆ, ಕೊನೆಯಲ್ಲಿ ಒತ್ತಡವನ್ನು ಮೆಟ್ಟಿನಿಂತ ಲಖನೌ ಸೂಪರ್ ಜೈಂಟ್ಸ್ ಬೌಲರ್‌ಗಳು ಶುಕ್ರವಾರ ಐಪಿಎಲ್‌ನ ರೋಚಕ ಪಂದ್ಯದಲ್ಲಿ ತಮ್ಮ ತಂಡಕ್ಕೆ 12 ರನ್‌ಗಳ ಜಯ ತಂದುಕೊಟ್ಟರು.
ಕೊನೆಯ ಓವರ್‌ನ ಮೊದಲ ಎಸೆತವನ್ನು ಪಾಂಡ್ಯ ಸಿಕ್ಸರ್‌ಗೆ ಎತ್ತಿದಾಗ ಮುಂಬೈ ತಂಡದ ಗೆಲುವಿಗೆ 15 ರನ್ ಬೇಕಿತ್ತು. ಆವೇಶ್ ಖಾನ್ ಬಿಗಿಯಾಗಿ ಬೌಲಿಂಗ್ ಮಾಡಿ ನಂತರದ ಐದು ಎಸೆತಗಳಲ್ಲಿ ಮೂರು ರನ್ ಮಾತ್ರ ನೀಡಿದರು. 19ನೇ ಓವರ್‌ನಲ್ಲಿ ಅನುಭವಿ ಬೌಲರ್ ಶಾರ್ದೂಲ್ ಠಾಕೂರ್ ಕೇವಲ 7 ರನ್ ನೀಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದ್ದರು.
ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಎದುರಾಳಿ ತಂಡವನ್ನು ಆಡಲಿಳಿಸಿದರು. ಮಿಚೆಲ್ ಮಾರ್ಷ್ (60; 31ಎ, 4x9; 6x2) ಮತ್ತು ಏಡನ್ ಮರ್ಕರಂ(53:38 ಎ, 4x2, 6x4) ಅವರ ಅರ್ಧಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್‌ಗೆ 203 ರನ್‌ಗಳ ಉತ್ತಮ ಮೊತ್ತ ಗಳಿಸಿತು.
ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್ ಗಳಿಸಿತು. 17 ರನ್‌ಗೆ ಆರಂಭಿಕ ಬ್ಯಾಟರ್‌ಗಳಾದ ವಿಲ್ ಜಾಕ್ಸ್ (5) ಮತ್ತು ರೆಯಾನ್ ರಿಕಲ್ಟನ್ (10) ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಮನ್ ಧೀರ್ (46;24ಎ) ಮತ್ತು ಸೂರ್ಯಕುಮಾರ್ ಯಾದವ್ (67;43ಎ, 4x9, 6x1) ಅವರು ಆಸೆರೆಯಾದರು. ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 69 (35ಎ) ರನ್ ಸೇರಿಸಿದರು.
ನಮನ್ ಔಟಾದ ಬಳಿಕ ಸೂರ್ಯ ಅವರನ್ನು ಸೇರಿಕೊಂಡ ತಿಲಕ್ ವರ್ಮಾ (25;23ಎ) ನಾಲ್ಕನೇ ವಿಕೆಟ್‌ಗೆ 66 (48ಎ) ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದರು. ಈ ಮಧ್ಯೆ ಸೂರ್ಯಕುಮಾರ್ ಔಟಾಗುತ್ತಿದ್ದಂತೆ ಪಂದ್ಯವು ತಿರುವು ಪಡೆಯಿತು. ವೇಗವಾಗಿ ರನ್ ಗಳಿಸಲು ಪರದಡಿದ ತಿಲಕ್ 19ನೇ ಓವರ್‌ನಲ್ಲಿ (ರಿಟೈರ್ಡ್ ಔಟ್) ಆದರು,ಪಾಂಡ್ಯ (28;16ಎ) ಹೋರಾಟ ತೋರಿದರೂ ವೇಗವಾಗಿ ರನ್ ಗಲಿಸಲು ವಿಫಲರಾದರು. ಇದಕ್ಕೂ ಮೊದಲು ಲಖನೌ ತಂಡಕ್ಕೆ ಮಾರ್ಷ್ ಮತ್ತು ಮರ್ಕರಂ ಬಿರುಸಿನ ಆರಂಭ ಒದಗಿಸಿ 6.5 ಓವರುಗಳಲ್ಲಿ 76 ರನ್ ಸೇರಿಸಿದ್ದರು. ಚಾಹರ್ ಅವರ ಎರಡನೇ ಓವರಿನಲ್ಲಿ ಮಾರ್ಷ್ 15 ರನ್ ಬಾಚಿದರು. ಸ್ಫೂರ್ತಿಯುತ ಬೌಲಿಂಗ್ ಪ್ರದರ್ಶನ ನೀಡಿದ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿ ಐದು ವಿಕೆಟ್ ಪಡೆದರು. ಮೊದಲ ಸ್ಪೆಲ್‌ನಲ್ಲಿ ಅವರು ಲಯದಲ್ಲಿರುವ ಲಖನೌದ ಪ್ರಮುಖ ಆಟಗಾರ ನಿಕೋಲಸ್ ಪೂರನ್ (12) ಮತ್ತು ನಾಯಕ ರಿಷಭ್ ಪಂತ್ (2) ಅವರ ವಿಕೆಟ್‌ಗಳನ್ನು ಪಡೆದರು.
ಬಿರುಸಿನ ಆಟವಾಡುತ್ತಿದ್ದ ಆರಂಭ ಆಟಗಾರ ಮರ್ಕರಂ (53, 38 ಎಸೆತ), ಅಪಾಯಕಾರಿ ಬ್ಯಾಟರ್ ಡೇವಿಡ್ ಮಿಲ್ಲರ್ (27) ಮತ್ತು ಆಕಾಶ್ ದೀಪ್ ಅವರನ್ನು ಎರಡನೇ ಸ್ಪೆಲ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು.
ನಾಲ್ಕು ಪಂದ್ಯಗಳಲ್ಲಿ ಮೂರನೇ ಅರ್ಧ ಶತಕ ಬಾರಿಸಿದ ಮಾರ್ಷ್ ಅವರ ವಿಕೆಟ್ ಅನ್ನು ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರು ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆಯುವ ಮೂಲಕ ಗಳಿಸಿದರು. ಪಂತ್ ಅವರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು.
ಸ್ಕೋರುಗಳು
ಲಖನೌ ಸೂಪರ್ ಜೈಂಟ್ಸ್: 20 ಓವರುಗಳಲ್ಲಿ 8ಕ್ಕೆ203 (ಮಿಚೆಲ್ ಮಾರ್ಷ್ 60, ಏಡನ್ ಮರ್ಕರಂ 53, ಆಯುಷ್ ಬಡೋನಿ 30, ಡೇವಿಡ್ ಮಿಲ್ಲರ್ 27; ಟ್ರೆಂಟ್ ಬೌಲ್ಟ್ 28ಕ್ಕೆ1, ಅಶ್ವಿನಿ ಕುಮಾರ್ 39ಕ್ಕೆ1, ವಿಘ್ನೇಶ್ ಪುತ್ತೂರು 31ಕ್ಕೆ1, ಹಾರ್ದಿಕ್ ಪಾಂಡ್ಯ 36ಕ್ಕೆ5).
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5ಕ್ಕೆ 191 (ನಮನ್ ಧೀರ್ 46, ಸೂರ್ಯಕುಮಾರ್ ಯಾದವ್ 67, ತಿಲಕ್ ವರ್ಮಾ 25, ಹಾರ್ದಿಕ್ ಪಾಂಡ್ಯ 28; ದಿಗ್ವೇಶ್ ರಾಠಿ 21ಕ್ಕೆ 1, ಶಾರ್ದೂಲ್ ಠಾಕೂರ್ 41ಕ್ಕೆ 1, ಆವೇಶ್ ಖಾನ್ 40ಕ್ಕೆ 1, ರವಿ ಬಿಷ್ಣೋಯಿ 40ಕ್ಕೆ 1). ಫಲಿತಾಂಶ: ಲಖನೌ ಜೈಂಟ್ಸ್‌ಗೆ 12 ರನ್ ಜಯ
ಲಖನೌ: ಅನುಭವಿ ಆಟಗಾರ ರೋಹಿತ್ ಶರ್ಮಾ ಅವರು ಶುಕ್ರವಾರ ನೆಟ್ ಪ್ರಾಕ್ಟೀಸ್ ಸಮಯದಲ್ಲಿ ಮೊಣಕಾಲಿಗೆ ಚೆಂಡುಬಡಿದು ಗಾಯಾಳಾದ ಕಾರಣ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಆಡಲು ಇಳಿಯಲಿಲ್ಲ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ರೋಹಿತ್ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದು, 0, 8 ಮತ್ತು 13 ರನ್ ಗಳಿಸಿದ್ದರು.
ಟಾಸ್ ಸಮಯದಲ್ಲಿ ಮಾತನಾಡಿದ ಹಾರ್ದಿಕ್, ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯಾವಾಗ ಹಿಂತಿರುಗಲಿದ್ದಾರೆ ಎಂದು ಕೇಳಿದಾಗ ‘ಅವರು ಶೀಘ್ರದಲ್ಲೇ ಮರಳಿದ್ದಾರೆ’ ಎಂದಷ್ಟೇ ಉತ್ತರಿಸಿದರು.
ಮುಂಬೈ ಇಂಡಿಯನ್ಸ್ ಪರ ನೂರನೇ ಪಂದ್ಯ ಆಡಿದ ಭಾರತ ಟಿ20 ತಂಡದ ಕಪ್ತಾನ ಸೂರ್ಯಕುಮಾರ್ ಯಾದವ್ ಅವರಿಗೆ ವಿಶೇಷ ಜರ್ಸಿ (ಪೋಷಾಕು) ನೀಡಲಾಯಿತು. ಅವರು ಮುಂಬೈ ಪರ ಈ ಮೈಲಿಗಲ್ಲು ತಲುಪಿದ ಎಂಟನೇ ಆಟಗಾರ.ರೋಹಿತ್, ಹಾರ್ದಿಕ್, ಕೀರನ್ ಪೊಲ್ಲಾರ್ಡ್, ಹರಭಜನ್ ಸಿಂಗ್, ಲಸಿತ್ ಮಾಲಿಂಗ, ಬೂಮ್ರಾ ಮತ್ತು ಅಂಬಟಿ ರಾಯುಡು ಅವರು ಈ ತಂಡದ ಪರ ನೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.