ADVERTISEMENT

ಇಂದೋರ್ ಟೆಸ್ಟ್‌ನಲ್ಲಿ ಆಸೀಸ್‌ಗೆ 9 ವಿಕೆಟ್ ಗೆಲುವು, ಭಾರತಕ್ಕೆ ಮುಖಭಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2023, 5:29 IST
Last Updated 3 ಮಾರ್ಚ್ 2023, 5:29 IST
   

ಇಂದೋರ್: ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ತಿರುಗೇಟು ನೀಡಿರುವ ಆಸ್ಟ್ರೇಲಿಯಾ, ಅಂತರವನ್ನು 2-1ಕ್ಕೆ ತಗ್ಗಿಸಿದೆ.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲಿಗೆ ಗುರಿಯಾಗಿತ್ತು. ಅಲ್ಲದೆ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ನಾಯಕ ಸ್ಥಾನ ವಹಿಸಿರುವ ಸ್ಟೀವ್ ಸ್ಮಿತ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

ADVERTISEMENT

ಮತ್ತೊಂದೆಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದತ್ತ ಕಣ್ಣಾಯಿಸಿರುವ ಟೀಮ್ ಇಂಡಿಯಾಗೆ ಹಿನ್ನಡೆಯಾಗಿದೆ.

ಕಾಂಗರೂ ಪಡೆ ಗೆಲುವಿನ ಸಂಭ್ರಮ...
ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಇತ್ತಂಡಗಳ ಬ್ಯಾಟರ್‌ಗಳು ಪರದಾಡಿದರು. ಆದರೆ ಆಸೀಸ್ ಆಟಗಾರರು ಪಂದ್ಯದ ಎಲ್ಲ ಹಂತದಲ್ಲೂ ಮೇಲುಗೈ ಸಾಧಿಸಿದರು.

ಮೂರನೇ ದಿನದಲ್ಲಿ ಗೆಲುವಿಗಾಗಿ 76 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ದಿನದ ಆರಂಭದಲ್ಲೇ ಉಸ್ಮಾನ್ ಖ್ವಾಜಾ (0) ವಿಕೆಟ್ ಅನ್ನು ಆರ್. ಅಶ್ವಿನ್ ಉರುಳಿಸಿದರು. ಆದರೆ ದ್ವಿತೀಯ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದ ಟ್ರಾವಿಸ್ ಹೆಡ್ (49*) ಹಾಗೂ ಮಾರ್ನಸ್ ಲಾಬುಷೇನ್ (28*) ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

ಮ್ಯಾಥ್ಯೂ ಕುನೇಮನ್ ದಾಳಿಗೆ ಸಿಲುಕಿದ್ದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 109 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ 197 ರನ್ ಪೇರಿಸಿದ್ದ ಆಸ್ಟ್ರೇಲಿಯಾ 88 ರನ್‌ಗಳ ಮುನ್ನಡೆ ಗಳಿಸಿತ್ತು.

ದ್ವಿತೀಯ ಇನಿಂಗ್ಸ್‌ನಲ್ಲಿ ನೇಥನ್ ಲಯನ್ ದಾಳಿಗೆ ತತ್ತರಿಸಿದ ಭಾರತ 163 ರನ್‌ಗಳಿಗೆ ಆಲೌಟ್ ಆಗಿತ್ತು. ಲಯನ್ ಎಂಟು ವಿಕೆಟ್ ಕಿತ್ತು ಮಿಂಚಿದರು.

ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 9ರಿಂದ 13ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.