ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್: ಕೃಷ್ಣನ್ ಶ್ರೀಜಿತ್ ಅಬ್ಬರದ ಶತಕ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 23:30 IST
Last Updated 29 ಆಗಸ್ಟ್ 2024, 23:30 IST
ಕೆ.ಎಲ್. ಶ್ರೀಜಿತ್
ಕೆ.ಎಲ್. ಶ್ರೀಜಿತ್   

ಬೆಂಗಳೂರು: ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಉತ್ತಮ ಆಟದ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡವು ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ  ಮಹಾರಾಜ ಟ್ರೋಫಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಹುಬ್ಬಳ್ಳಿ ತಂಡದ ಮೇಲೆ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿತು. ಶುಕ್ರವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಸೆಣಸಲಿದ್ದು, ಶನಿವಾರದ ಎರಡನೇ ಸೆಮಿಫೈನಲ್‌ನಲ್ಲಿ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡಗಳು ಸೆಣಸಲಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಲ್ಬರ್ಗ ತಂಡದ ಬೌಲರ್ ಮೋನಿಶ್ ರೆಡ್ಡಿ (32ಕ್ಕೆ4) ಅವರ ನಿಖರ ದಾಳಿಯಿಂದಾಗಿ ಹುಬ್ಬಳ್ಳಿಗೆ ಆರಂಭದಲ್ಲಿಯೇ ಪೆಟ್ಟು ಬಿದ್ದಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಶ್ರೀಜಿತ್ 51 ಎಸೆತಗಳಲ್ಲಿ 100 ರನ್‌ ಗಳಿಸಿದರು. 14 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಅವರು ಮೊಹಮ್ಮದ್ ತಹಾ ಅವರೊಂದಿಗೆ 32 ರನ್‌ ಸೇರಿಸಿದರು. ಐದನೇ ಓವರ್‌ನಲ್ಲಿ ತಹಾ ಔಟಾದ ನಂತರ ಶ್ರೀಜಿತ್ ಅವರದ್ದೇ ಆರ್ಭಟ. 

ADVERTISEMENT

ಎಲ್ಲ ಬೌಲರ್‌ಗಳಿಗೂ ಚುರುಕು ಮುಟ್ಟಿಸಿದ ಅವರ ಬ್ಯಾಟಿಂಗ್ ಅಮೋಘವಾಗಿತ್ತು. ಆದರೆ ಅನೀಶ್ವರ್ ಗೌತಮ (9), ಕೆಪಿ. ಕಾರ್ತಿಕೇಯ (6), ಮನೀಷ್ ಪಾಂಡೆ (9), ಮನ್ವಂತ್ ಕುಮಾರ್ (11) ಮತ್ತು ರಿಶಿ ಬೋಪಣ್ಣ ಅವರು ದೊಡ್ಡ ಇನಿಂಗ್ಸ್ ಆಡಲಿಲ್ಲ. 196.08ರ ಸ್ಟ್ರೈಕ್‌ರೇಟ್‌ನಲ್ಲಿ ಶ್ರೀಜಿತ್ ರನ್‌ಗಳನ್ನು ಸೂರೆ ಮಾಡಿದರು. ಶ್ರೀಜಿತ್ ಅವರ ಬ್ಯಾಟಿಂಗ್ ಬಲದಿಂದ ‘ಹಾಲಿ ಚಾಂಪಿಯನ್’ ಹುಬ್ಬಳ್ಳಿ ಟೈಗರ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 179  ರನ್ ಗಳಿಸಿತು. 

ಗೆಲುವಿನ ಗುರಿ ಬೆನ್ನತ್ತಿದ ಗುಲ್ಬರ್ಗ ತಂಡದ ಬ್ಯಾಟರ್‌ಗಳಾದ ಲವನಿತ್‌ ಸಿಸೋಡಿಯಾ (10), ಅನೀಶ್‌ ಕೆ.ವಿ (0), ಶರತ್‌ ಬಿ.ಆರ್‌ (13) ಅವರು ಬಹು ಬೇಗನೆ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ವಿಜಯಕುಮಾರ್‌ ವೈಶಾಖ್‌ ಅವರು ಎಳು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ ಆಕರ್ಷಕ ಅರ್ಧ ಶತಕ (51) ಗಳಿಸಿದರು. ಇದು ತಂಡಕ್ಕೆ ಚೈತನ್ಯ ನೀಡಿತು.

ನಂತರ ಕ್ರೀಸ್‌ ಬಂದ ರಿತೇಶ್‌ ಭಟ್ಕಳ್‌ (35) ಪ್ರವೀಣ್‌ ದುಬೆ (34) ತಂಡವನ್ನು ಜಯದ ದಡ ತಲುಪಿಸಿದರು.

ಪಂದ್ಯ ರದ್ದು: ರಭಸದ ಮಳೆ ಸುರಿದ ಕಾರಣ ಮಧ್ಯಾಹ್ನ ನಡೆಬೇಕಿದ್ದ ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಮಂಗಳೂರು ಡ್ರ್ಯಾಗನ್ಸ್ ನಡುವಣ ಪಂದ್ಯವು ರದ್ದಾಯಿತು. 

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 7ಕ್ಕೆ 179 (ಕೃಷ್ಣನ್ ಶ್ರೀಜಿತ್  ಔಟಾಗದೆ 100, ಮೊಹಮ್ಮದ್ ತಹಾ 35,ಮೋನಿಶ್ ರೆಡ್ಡಿ 32ಕ್ಕೆ4) ಗುಲ್ಬರ್ಗ ಮಿಸ್ಟಿಕ್ಸ್: 19.1 ಓವರ್‌ಗಳಲ್ಲಿ 6ಕ್ಕೆ 183 ( ವಿಜಯಕುಮಾರ್‌ ವೈಶಾಖ್‌ 51, ರಿತೇಶ್‌ ಭಟ್ಕಳ್‌ ಔಟಾಗದೆ 35, ಪ್ರವೀಣ್‌ ದುಬೆ ಔಟಾಗದೆ 34, ಕೆ.ಸಿ.ಕಾರಿಯಪ್ಪ 19ಕ್ಕೆ 2) ಪಂದ್ಯದ ಆಟಗಾರ: ವೈಶಾಖ್‌ ವಿ. ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್‌ ತಂಡಕ್ಕೆ ನಾಲ್ಕು ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.