ಬೆಂಗಳೂರು ಬ್ಲಾಸ್ಟರ್ಸ್ ಎದುರು ಕಡೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಗೆಲುವಿಗೆ ಕಾರಣರಾದ ಹುಬ್ಬಳ್ಳಿ ಟೈಗರ್ಸ್ ಆಟಗಾರ ಎಸ್. ರಕ್ಷಿತ್‌ರನ್ನು ಸಹ ಆಟಗಾರರು ಅಭಿನಂದಿಸಿದರು
– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರು: ಕಡೆಯ ಎಸೆತದವರೆಗೂ ತೂಗುಯ್ಯಾಲೆಯಾಗಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 2 ವಿಕೆಟ್ ಅಂತರದಿಂದ ರೋಚಕ ಗೆಲುವು ದಾಖಲಿಸಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದಿರುವ ‘ಶ್ರೀರಾಮ್ ಗ್ರೂಪ್ ಮಹಾರಾಜ ಟ್ರೋಫಿ’ ಟ್ವೆಂಟಿ20 ಟೂರ್ನಿಯ ಬುಧವಾರದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 226 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಹುಬ್ಬಳ್ಳಿಯ ಎಸ್. ರಕ್ಷಿತ್ ಕಡೆಯ 3 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 16 ರನ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು. ಮೈದಾನಕ್ಕೆ ನುಗ್ಗಿದ ಹುಬ್ಬಳ್ಳಿ ಆಟಗಾರರು ಸಂಭ್ರಮಾಚರಣೆ ನಡೆಸಿದರು.
ಪ್ರತೀಕ್ ಜೈನ್ ಎಸೆದ ಕಡೆಯ ಓವರ್‌ನಲ್ಲಿ ಹುಬ್ಬಳ್ಳಿ ಗೆಲುವಿಗೆ 17 ರನ್ ಬೇಕಿದ್ದು, ಮೊದಲ ಎಸೆತದಲ್ಲೇ ಸಮರ್ಥ್ ನಾಗರಾಜ್ ಗಾಯಗೊಂಡು ನಿವೃತ್ತರಾದರು. ಮೂರನೇ ಎಸೆತದಲ್ಲಿ ರಿತೇಶ್ ಭಟ್ಕಳ್ ರನೌಟ್ ಆದರು. ಕಡೆಗೆ ರಕ್ಷಿತ್ ಪಂದ್ಯದ ಗತಿ ಬದಲಿಸಿದರು.
ತಾಹಾ ಮತ್ತೊಂದು ಶತಕ:
ಮಂಗಳವಾರವಷ್ಟೇ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಮೊಹಮ್ಮದ್ ತಾಹಾ ಬುಧವಾರ ಮತ್ತೊಂದು ಶತಕದ (101) ಮೂಲಕ ಹುಬ್ಬಳ್ಳಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 53 ಎಸೆತದಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಶತಕ ಬಾರಿಸಿದ ಅವರು, 17ನೇ ಓವರ್‌ನಲ್ಲಿ ಪ್ರತೀಕ್ ಎಸೆತದಲ್ಲಿ ಡೀಪ್ ಪಾಯಿಂಟ್‌ನಲ್ಲಿ ವಿದ್ಯಾಧರ ಪಾಟೀಲಗೆ ಕ್ಯಾಚಿತ್ತರು. ಅಭಿನವ್ ಮನೋಹರ್ (33) ಹಾಗೂ ಮನ್ವಂತ್ ಕುಮಾರ್ (18) ಉಪಯುಕ್ತ ಕಾಣಿಕೆ ನೀಡಿದರು.
ರೋಹನ್ ಅರ್ಧಶತಕ:
ಟಾಸ್ ಸೋತು ಬ್ಯಾಟ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಆರಂಭಿಕ ರೋಹನ್ ಪಾಟೀಲ (80) ಉಪಯುಕ್ತ ಕಾಣಿಕೆ ನೀಡಿದರು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅವರು ಕೇವಲ 43 ಎಸೆತದಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಹೊಡೆದರು. ಮಯಾಂಕ್ ಅಗರವಾಲ್ (9) ಹಾಗೂ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶುಭಾಂಗ್ ಹೆಗ್ಡೆ (9) ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದರು. 7ನೇ ವಿಕೆಟ್‌ಗೆ ರೋಹನ್ ನವೀನ್ ಹಾಗೂ ಎಂ.ಜಿ. ನವೀನ್ ನಡುವೆ ಕೇವಲ 17 ಎಸೆತಗಳಲ್ಲಿ 54 ರನ್ ಜೊತೆಯಾಟವು ತಂಡದ ಸ್ಕೋರ್ ಹೆಚ್ಚಿಸಿತು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 225 ( ರೋಹನ್ ಪಾಟೀಲ 80, ಸೂರಜ್ ಅಹುಜಾ 27, ಎಂ.ಜಿ. ನವೀನ್ 27. ಯಶ್‌ರಾಜ್ ಪೂಂಜ 43ಕ್ಕೆ 3, ಕೆ.ಸಿ. ಕಾರ್ಯಪ್ಪ 25ಕ್ಕೆ 2)
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 228 ( ಮೊಹಮ್ಮದ್ ತಾಹಾ 101, ಅಭಿನವ್ ಮನೋಹರ್ 33, ಎಸ್. ರಕ್ಷಿತ್ ಔಟಾಗದೆ 18. ಮೊಹಸೀನ್ ಖಾನ್ 24ಕ್ಕೆ 2, ಎಂ.ಜಿ. ನವೀನ್ 40ಕ್ಕೆ 1)
ಪಂದ್ಯದ ಆಟಗಾರ: ಮೊಹಮ್ಮದ್ ತಾಹಾ
ಇಂದಿನ ಪಂದ್ಯ
*ಮೈಸೂರು ವಾರಿಯರ್ಸ್ v/s ಮಂಗಳೂರು ಡ್ರ್ಯಾಗನ್ಸ್– ಮಧ್ಯಾಹ್ನ 3.15
*ಗುಲ್ಬರ್ಗ ಮಿಸ್ಟಿಕ್ಸ್ v/s ಬೆಂಗಳೂರು ಬ್ಲಾಸ್ಟರ್ಸ್ – ಸಂಜೆ 7.15
ಬೆಂಗಳೂರು ಬ್ಲಾಸ್ಟರ್ಸ್ ಪರ 80 ರನ್ ಗಳಿಸಿದ ರೋಹನ್ ಪಾಟೀಲ ಬ್ಯಾಟಿಂಗ್ ವೈಖರಿ
ಮಹಾರಾಜ ಟ್ರೋಫಿ;ಅಂಕ ಪಟ್ಟಿ (ತಂಡ;ಪಂದ್ಯ;ಗೆಲುವು;ಸೋಲು;ಅಂಕ;ರನ್‌ರೇಟ್)
ಹುಬ್ಬಳ್ಳಿ ಟೈಗರ್ಸ್;2;2;0;4;+0.800
ಮಂಗಳೂರು ಡ್ರ್ಯಾಗನ್ಸ್;1;1;0;2;+1.650
ಮೈಸೂರು ವಾರಿಯರ್ಸ್;2;1;1;2;+0.468
ಗುಲ್ಬರ್ಗ ಮಿಸ್ಟಿಕ್ಸ್;2;1;1;2;-0.311
ಶಿವಮೊಗ್ಗ ಲಯನ್ಸ್;1;0;1;0;-1.450
ಬೆಂಗಳೂರು ಬ್ಲಾಸ್ಟರ್ಸ್;2;0;2;0;-1.050
(ಬುಧವಾರದ ಮೊದಲ ಪಂದ್ಯದ ಅಂತ್ಯಕ್ಕೆ)
ಮೈಸೂರು: ಕ್ರಾಂತಿಕುಮಾರ್ ಅಮೋಘ ಬೌಲಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡವು ಬುಧವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಅನ್ನು 29 ರನ್ ಅಂತರದಿಂದ ಮಣಿಸಿತು.
ಮಂಗಳೂರು ನೀಡಿದ 180 ರನ್‌ಗಳ ಗುರಿ ಬೆನ್ನತ್ತಿದ್ದ ಶಿವಮೊಗ್ಗ ಪರ ಕೆ. ರೋಹಿತ್ (62) ಏಕಾಂಗಿ ಹೋರಾಟ ನಡೆಸಿದರು. ಕ್ರಾಂತಿಕುಮಾರ್ 36 ರನ್‌ಗೆ 5 ವಿಕೆಟ್ ಉರುಳಿಸಿ ಗಮನ ಸೆಳೆದರು.
ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಪರ ವಿಕೆಟ್ ಕೀಪರ್ ಬಿ.ಆರ್. ಶರತ್ 31 ಎಸೆತದಲ್ಲಿ 70 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಶಿವಮೊಗ್ಗ ಪರ ವೇಗಿ ವಿ. ಕೌಶಿಕ್ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 179 (ಬಿ.ಆರ್. ಶರತ್ 70, ಕೆ.ವಿ. ಅನೀಶ್, ವಿ. ಕೌಶಿಕ್ 23ಕ್ಕೆ 3, ಹಾರ್ದಿಕ್ ರಾಜ್ 28ಕ್ಕೆ 2)ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 150 (ಕೆ. ರೋಹಿತ್ 62, ಕ್ರಾಂತಿಕುಮಾರ್ 36ಕ್ಕೆ 5, ಸಂತೋಷ್ ಸಿಂಗ್ 35ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.