ಮೈಸೂರು: ಮಂಗಳೂರು ಡ್ರ್ಯಾಗನ್ಸ್ ನಾಯಕ ಶ್ರೇಯಸ್ ಗೋಪಾಲ್ (29 ರನ್ ಮತ್ತು 36ಕ್ಕೆ 3) ಅವರ ಆಲ್‌ರೌಂಡ್ ಆಟ ಮತ್ತು ಕ್ರಾಂತಿಕುಮಾರ್ (30ಕ್ಕೆ 4) ಬಿರುಗಾಳಿ ಬೌಲಿಂಗ್ ದಾಳಿಗೆ ಆತಿಥೇಯ ಮೈಸೂರು ವಾರಿಯರ್ಸ್ ಧೂಳೀಪಟವಾಯಿತು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಮೈಸೂರು ವಿರುದ್ಧ ಮಂಗಳೂರು 52 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಗೆದ್ದ ಮೈಸೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮಂಗಳೂರು ತಂಡದ ಲೋಚನ್ ಗೌಡ (34; 31 ಎಸೆತ, 4x4, 6x1) ಹಾಗೂ ಬಿ.ಆರ್.ಶರತ್ (25) ಮೊದಲ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಶರತ್ ಅವರನ್ನು ಕುಶಾಲ್ ವಾಧ್ವಾನಿ (37ಕ್ಕೆ 2) ಔಟ್ ಮಾಡಿದರೆ, ಲೋಚನ್ ಅವರಿಗೆ ಯಶೋವರ್ಧನ್ ಪರಂತಾಪ್ (25ಕ್ಕೆ 3) ಪೆವಿಲಿಯನ್ ದಾರಿ ತೋರಿದರು. 20 ರನ್ ಸೇರಿಸುವಷ್ಟರಲ್ಲಿ 4 ವಿಕೆಟ್ ಉದುರಿದ್ದವು. ಸಂಕಷ್ಟದಲ್ಲಿದ್ದ ತಂಡಕ್ಕೆ ಶ್ರೇಯಸ್ ಗೋಪಾಲ್ ಮತ್ತು ಮೆಕ್ನೀಲ್ ನರೋನಾ (31; 17 ಎಸೆತ, 6x4) ಆಸರೆಯಾದರು. 5ನೇ ವಿಕೆಟ್‌ಗಳಿಗೆ 41ರನ್ ಸೇರಿಸಿದರು.
ಇಂಗ್ಲೆಂಡ್ ಟೆಸ್ಟ್ ಸರಣಿ ನಂತರ ಮೈಸೂರು ತಂಡಕ್ಕೆ ಮರಳಿದ ಪ್ರಸಿದ್ಧಕೃಷ್ಣ (25ಕ್ಕೆ 2) ಕರಾರುವಾಕ್ ಬೌಲಿಂಗ್ ಮಾಡಿ, ತಿಪ್ಪಾರೆಡ್ಡಿ (5) ಹಾಗೂ ಶ್ರೇಯಸ್ ವಿಕೆಟ್ ಪಡೆದರು. ಕಡೆ ಎರಡು ಓವರ್‌ಗಳಲ್ಲಿ ಬೀಸಾಟವಾಡಿದ ಎಸ್.ಶಿವರಾಜ್ (27; 14 ಎಸೆತ, 4x2, 6x2) ತಂಡದ ಮೊತ್ತ 7ಕ್ಕೆ 173ರನ್ ಗಳಿಸಲು ಕಾರಣರಾದರು.
ಮಿಂಚಿದ ಕ್ರಾಂತಿ: ಸವಾಲಿನ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್‌ಗೆ ಶ್ರೇಯಸ್ ಆಘಾತ ನೀಡಿದರು. ಎಸ್.ಯು.ಕಾರ್ತಿಕ್ (8), ನಾಯಕ ಮನೀಷ್ ಪಾಂಡೆ (8) ಹಾಗೂ ಕೆ.ಎಸ್.ಲಂಕೇಶ್ (11) ವಿಕೆಟ್ ಪಡೆದ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನುಮೂಳೆ ಮುರಿದರು.
ಉತ್ತಮವಾಗಿ ಆಡುತ್ತಿದ್ದ ಆರಂಭಿಕ ಬ್ಯಾಟರ್ ಸಿ.ಎ.ಕಾರ್ತಿಕ್ (34, 21 ಎಸೆತ, 4x2, 6x3) ಅವರನ್ನು ಸಚಿನ್ ಶಿಂಧೆ ಔಟ್ ಮಾಡಿದರೆ, ಪ್ರತಿರೋಧ ತೋರಿದ್ದ ಯಶೋವರ್ಧನ್ ಪರಂತಾಪ್ (28; 20 ಎಸೆತ, 6x2) ಮತ್ತು ಎಸ್.ಶ್ರೀನಿವಾಸ್ (14) ಅವರ ವಿಕೆಟ್ ಅನ್ನು ಕ್ರಾಂತಿಕುಮಾರ್ ಪಡೆದು ಮಿಂಚಿದರು. ಕೆ.ಗೌತಮ್ ಅವರಿಗೆ ಖಾತೆ ತೆರೆಯಲೂ ಬಿಡಲಿಲ್ಲ. ಆ ವೇಳೆಗೆ ಪಂದ್ಯವು ಡ್ರ್ಯಾಗನ್ಸ್ ವಶವಾಗಿತ್ತು.
ಸಂಕ್ಷಿಪ್ತ ಸ್ಕೋರ್: ಮಂಗಳೂರು ಡ್ರ್ಯಾಗನ್ಸ್ 20 ಓವರ್‌ಗಳಲ್ಲಿ 7ಕ್ಕೆ 173 (ಲೋಚನ್ ಗೌಡ 34, ಶ್ರೇಯಸ್ ಗೋಪಾಲ್ 29, ಎಸ್.ಶಿವರಾಜ್ 27. ಯಶೋವರ್ಧನ್ ಪರಂತಾಪ್ 25ಕ್ಕೆ 3, ಪ್ರಸಿದ್ಧ ಕೃಷ್ಣ 25ಕ್ಕೆ 2) ಮೈಸೂರು ವಾರಿಯರ್ಸ್ 17.1 ಓವರ್‌ಗಳಲ್ಲಿ 121 (ಸಿ.ಎ.ಕಾರ್ತಿಕ್ 34, ಯಶೋವರ್ಧನ್ ಪರಂತಾಪ್ 28. ಕ್ರಾಂತಿಕುಮಾರ್ 30ಕ್ಕೆ 4, ಶ್ರೇಯಸ್ ಗೋಪಾಲ್ 36ಕ್ಕೆ 3) ಪಂದ್ಯದ ಆಟಗಾರ: ಶ್ರೇಯಸ್ ಗೋಪಾಲ್
ಇಂದಿನ ಪಂದ್ಯಗಳು: ಹುಬ್ಬಳ್ಳಿ ಟೈಗರ್ಸ್– ಗುಲ್ಬರ್ಗ ಮಿಸ್ಟಿಕ್ಸ್. ಮಧ್ಯಾಹ್ನ 3.15
ಶಿವಮೊಗ್ಗ ಲಯನ್ಸ್– ಮಂಗಳೂರು ಡ್ರ್ಯಾಗನ್ಸ್. ಸಂಜೆ 7.15
ಪ್ಲೇ ಆಫ್ ರೇಸ್‌ನಿಂದ ಲಯನ್ಸ್ ಹೊರಕ್ಕೆ
ಮೈಸೂರು: ರೋಹನ್ ಪಾಟೀಲ್ (74; 45 ಎಸೆತ, 4x7, 6x3) ಅರ್ಧಶತಕದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್ 7 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ಸತತ 6 ಸೋಲು ಕಂಡ ಲಯನ್ಸ್ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ನಾಯಕ ಶುಭಾಂಗ್ ಹೆಗ್ದೆ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಧ್ರುವ್ ಪ್ರಭಾಕರ್ ಅವರನ್ನು ಔಟ್ ಮಾಡಿ ಶಿವಮೊಗ್ಗ ತಂಡಕ್ಕೆ ಆಘಾತ ನೀಡಿದರು. ಮಾಧವ್ ಪಿ.ಬಜಾಜ್ (12ಕ್ಕೆ 4), ಎಂ.ಜಿ.ನವೀನ್ (30ಕ್ಕೆ 3) ಅವರ ಬಿಗಿ ಬೌಲಿಂಗ್‌ಗೆ ರನ್ ಗಳಿಸಲು ಶಿವಮೊಗ್ಗ ತಂಡದವರು ತಿಣುಕಾಡಿದರು. ಅನೀಶ್ವರ್ ಗೌತಮ್ (23) ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ತಂಡ 9ವಿಕೆಟ್‌ಗೆ 111 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಬೆಂಗಳೂರು ಆರಂಭಿಕ ಕುಸಿತ ಕಂಡರೂ ರೋಹನ್ ಅವರು ಭುವನ್ ರಾಜು (14) ಹಾಗೂ ಸೂರಜ್ ಅಹುಜಾ (ಔಟಾಗದೇ 20) ಅವರೊಂದಿಗೆ ಕ್ರಮವಾಗಿ 49 ಮತ್ತು 54 ರನ್ ಜೊತೆಯಾಟದಲ್ಲಿ ಪಾಲ್ಗೊಂಡು, ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 9ಕ್ಕೆ 111 (ಅನೀಶ್ವರ್ ಗೌತಮ್ 23. ಮಾಧವ್ ಪಿ.ಬಜಾಜ್ 12ಕ್ಕೆ 4, ಎಂ.ಜಿ.ನವೀನ್ 30ಕ್ಕೆ 3) ಬೆಂಗಳೂರು ಬ್ಲಾಸ್ಟರ್ಸ್ 14.4 ಓವರ್‌ಗಳಲ್ಲಿ 3ಕ್ಕೆ 117 (ರೋಹನ್ ಪಾಟೀಲ್ 74. ವಿ.ಕೌಶಿಕ್ 9ಕ್ಕೆ 1) ಪಂದ್ಯದ ಆಟಗಾರ: ರೋಹನ್ ಪಾಟೀಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.