ADVERTISEMENT

ಧೋನಿ ಎಲ್ಲವನ್ನೂ ಸಾಧಿಸಿದ್ದಾರೆ: ವಿಶ್ವನಾಥನ್ ಆನಂದ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 14:10 IST
Last Updated 12 ಸೆಪ್ಟೆಂಬರ್ 2019, 14:10 IST
ವಿಶ್ವನಾಥನ್ ಆನಂದ್
ವಿಶ್ವನಾಥನ್ ಆನಂದ್   

ಕೋಲ್ಕತ್ತ: ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅವರು ಕ್ರಿಕೆಟ್‌ನಲ್ಲಿ ಎಲ್ಲ ಸಾಧನೆಗಳನ್ನೂ ಮಾಡಿದ್ದಾರೆ ಎಂದು ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಶ್ಲಾಘಿಸಿದ್ದಾರೆ.

ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ತಂಡವು ಸೋತ ನಂತರ ಧೋನಿ ನಿವೃತ್ತರಾಗುವ ಕುರಿತ ಚರ್ಚೆಗಳು ನಡೆಯುತ್ತಿವೆ. ಅವರು ಹೋದ ತಿಂಗಳು ವೆಸ್ಟ್ ಇಂಡೀಸ್ ಸರಣಿಗೂ ಆಯ್ಕೆಯಾಗಿರಲಿಲ್ಲ. ಇದೇ 15ರಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಆರಂಭವಾಗಲಿರುವ ಕ್ರಿಕೆಟ್ ಸರಣಿಯಲ್ಲಿ ಆಡುವ ತಂಡಕ್ಕೂ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆದ್ದರಿಂದ ಅವರು ಬಹುತೇಕ ನಿವೃತ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸುದ್ದಿಸಂಸ್ಥೆಯು ಪ್ರಶ್ನೆಯೊಂದಕ್ಕೆ ಆನಂದ್ ಪ್ರತಿಕ್ರಿಯಿಸಿದ್ದಾರೆ.

‘ಧೋನಿ ಅವರಿಗೆ ಅಪಾರವಾದ ಅಭಿಮಾನಿ ಬಳಗವಿದೆ. ಯುವ ಸಾಧಕರಿಗೆ ಅವರು ಮೈಲುಗಲ್ಲಾಗಿದ್ದಾರೆ. 2007ರಲ್ಲಿ ವಿಶ್ವ ಟ್ವೆಂಟಿ–20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ. ಭಾರತ ಕ್ರಿಕೆಟ್ ಕಂಡ ಅದ್ವಿತೀಯ ನಾಯಕರಾಗಿದ್ದಾರೆ. ಯಾವಾಗ ನಿವೃತ್ತಿ ಹೇಳಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸರಿಯಾದ ಸಮಯಕ್ಕೆ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಆನಂದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.