ಎಂಐ ನ್ಯೂಯಾರ್ಕ್ ನಾಯಕ ನಿಕೋಲಸ್ ಪೂರನ್ ಹಾಗೂ ವಾಷಿಂಗ್ಟನ್ ಫ್ರೀಡಮ್ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್
ಕೃಪೆ: X / @MINYCricket, @WSHFreedom
ಡಲ್ಲಾಸ್: ಅಮೆರಿಕದ 'ಮೇಜರ್ ಲೀಗ್ ಕ್ರಿಕೆಟ್–2025'ಟಿ20 ಟೂರ್ನಿಯ 3ನೇ ಆವೃತ್ತಿಯ ಫೈನಲ್‌ನಲ್ಲಿ ವಾಷಿಂಗ್ಟನ್ ಫ್ರೀಡಮ್ ಹಾಗೂ ಎಂಐ ನ್ಯೂಯಾರ್ಕ್ ತಂಡಗಳು ಸೆಣಸಾಟ ನಡೆಸಲಿವೆ.
ಡಲ್ಲಾಸ್‌ನಲ್ಲಿ ಜುಲೈ 14ರಂದು ಅಂತಿಮ ಹಣಾಹಣಿ ನಡೆಯಲಿದೆ.
ವಾಷಿಂಗ್ಟನ್ ಪಡೆ ಗುಂಪು ಹಂತದಲ್ಲಿ ಆಡಿದ ಹತ್ತರಲ್ಲಿ ಎಂಟು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಕ್ವಾಲಿಫೈಯರ್–1 ಪಂದ್ಯ ಮಳೆಯಿಂದ ರದ್ದಾದ ಕಾರಣ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇತ್ತ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಎಂಐ ಬಳಗ, ಗುಂಪು ಹಂತದಲ್ಲಿ ಕೇವಲ ಮೂರರಲ್ಲಿ ಗೆದ್ದು 4ನೇ ಸ್ಥಾನದಲ್ಲಿ ಉಳಿದರೂ, ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್–2 ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಅಂತಿಮ ಹಂತಕ್ಕೆ ಟಿಕೆಟ್ ಗಿಟ್ಟಿಸಿಕೊಂಡಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಯೂನಿಕಾರ್ನ್ಸ್ ಪಡೆಯನ್ನು 2 ವಿಕೆಟ್‌ಗಳಿಂದ ಹಾಗೂ ಕ್ವಾಲಿಫೈಯರ್–2ರಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಅನ್ನು 7 ವಿಕೆಟ್ ಅಂತರದಿಂದ ಸೋಲಿಸಿರುವ ಎಂಐ, ಗುಂಪು ಹಂತದಲ್ಲಿ ಈ ತಂಡಗಳ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿತ್ತು. ವಿಶೇಷವೆಂದರೆ, ಫೈನಲ್ ಹಣಾಹಣಿಗೆ ಸಜ್ಜಾಗಿರುವ ವಾಷಿಂಗ್ಟನ್ ವಿರುದ್ಧವೂ ಇದೇ ದಾಖಲೆಯನ್ನು ಹೊಂದಿದೆ.
ವಾಷಿಂಗ್ಟನ್ ಬಳಗವನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮುನ್ನಡೆಸುತ್ತಿದ್ದಾರೆ. ಎಂಐಗೆ ವೆಸ್ಟ್‌ಇಂಡೀಸ್ ವಿಕೆಟ್‌ಕೀಪರ್–ಬ್ಯಾಟರ್ ನಿಕೋಲಸ್ ಪೂರನ್ ನಾಯಕತ್ವದ ಬಲವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.