ರಾವಲ್ಪಿಂಡಿ: ಆರಂಭಿಕ ಬ್ಯಾಟ್ಸ್‌ಮನ್ ಏಡನ್ ಮರ್ಕರಂ ಮತ್ತು ಮೂರನೇ ಕ್ರಮಾಂಕದ ರಸೀ ವ್ಯಾನ್ ಡೆರ್ ಡುಸೆನ್ ಅವರ ಅಮೋಘ ಜೊತೆಯಾಟವು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಗೆಲುವಿನ ಆಸೆ ಚಿಗುರುವಂತೆ ಮಾಡಿತು. ಪಾಕಿಸ್ತಾನ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 370 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾನಾಲ್ಕನೇ ದಿನವಾದ ಭಾನುವಾರದ ಅಂತ್ಯಕ್ಕೆ ಒಂದು ವಿಕೆಟ್‌ಗೆ 127 ರನ್ ಗಳಿಸಿದೆ. ಕೊನೆಯ ದಿನ 243 ರನ್ ಗಳಿಸಬೇಕಾಗಿದೆ.
ಶನಿವಾರ ಆರು ವಿಕೆಟ್‌ಗಳಿಗೆ 129 ರನ್ ಗಳಿಸಿದ್ದ ಪಾಕಿಸ್ತಾನ ಭಾನುವಾರ 298 ರನ್ ಗಳಿಸಿ ಆಲೌಟಾಯಿತು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ (ಔಟಾಗದೆ 115; 204 ಎಸೆತ, 15 ಬೌಂಡರಿ) ಗಳಿಸಿದ ಅಮೋಘ ಶತಕದಿಂದ ಪಾಕಿಸ್ತಾನ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗರ್ 17 ರನ್ ಗಳಿಸಿದ್ದಾಗ ವೇಗಿ ಶನೀನ್ ಶಾ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಆಗ ತಂಡದ ಮೊತ್ತ 33 ರನ್ ಆಗಿತ್ತು. ನಂತರ ಮರ್ಕರಂ (59; 131 ಎ, 9 ಬೌಂ, 2 ಸಿ) ಮತ್ತು ಡುಸೆನ್ (48; 94 ಎ, 8 ಬೌಂ) ಮುರಿಯದ ಎರಡನೇ ವಿಕೆಟ್‌ಗೆ 94 ರನ್ ಜೊತೆಯಾಟ ಆಡಿದರು. ಮೊದಲ ರನ್ ಗಳಿಸಲು 23 ಎಸೆತಗಳನ್ನು ತೆಗೆದುಕೊಂಡ ಮರ್ಕರಂ ನಂತರ ಆಟಕ್ಕೆ ಕುದುರಿಕೊಂಡರು. 71 ಎಸೆತಗಳಲ್ಲಿ ಐದನೇ ಅರ್ಧಶತಕ ಪೂರೈಸಿದ ಅವರಿಗೆ ಡುಸೆನ್ ಉತ್ತಮ ಸಹಕಾರ ನೀಡಿದರು.
ಬೆಳಿಗ್ಗೆ ಮೊಹಮ್ಮದ್ ರಿಜ್ವಾನ್ ಅವರು ಪಾಕಿಸ್ತಾನ ತಂಡದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದರು. ಒಂಬತ್ತನೇ ವಿಕೆಟ್‌ಗೆ ರಿಜ್ವಾನ್ ಮತ್ತು ನೌಮನ್ ಅಲಿ (45; 78ಎ, 6 ಬೌಂ, 2 ಸಿ) ನಡುವಿನ 97 ರನ್‌ಗಳ ಜೊತೆಯಾಟ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ನಾಲ್ಕು ರನ್ ಗಳಿಸಿದ್ದಾಗ ಕೇಶವ್ ಮಹಾರಾಜ್ ಎಸೆತದಲ್ಲಿ ಡುಸೆನ್ ಕೈಚೆಲ್ಲಿದ ಕ್ಯಾಚ್‌ನಿಂದ ಜೀವದಾನ ಪಡೆದ ರಿಜ್ವಾನ್ ಮೊದಲ ಶತಕದ ಸಂಭ್ರಮ ಅನುಭವಿಸಿದರು. 2019ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದ 95 ರನ್ ಅವರ ಈ ವರೆಗಿನ ಗರಿಷ್ಠ ರನ್ ಆಗಿತ್ತು.
ಒಂಬತ್ತನೇ ವಿಕೆಟ್‌ಗೆ ಗಳಿಸಿದ 97 ರನ್ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ದಾಖಲೆ ಮೊತ್ತವಾಗಿದೆ. 1998ರಲ್ಲಿ ಡರ್ಬನ್‌ನಲ್ಲಿ ಅಜರ್ ಮಹಮೂದ್ ಮತ್ತು ಶೋಯೆಬ್ ಅಕ್ತರ್ 80 ರನ್ ಸೇರಿಸಿದ್ದರು. ರಿಜ್ವಾನ್, ಯಾಸಿರ್ ಶಾ ಮತ್ತು ನೌಮಾನ್ ಹೊರತುಪಡಿಸಿದರೆ ಪಾಕಿಸ್ತಾನದ ಇತರ ಯಾರಿಗೂ ಹೆಚ್ಚು ರನ್ ಗಳಿಸಲು ಆಗಲಿಲ್ಲ. ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಮೊದಲ ಐದು ವಿಕೆಟ್ ಗೊಂಚಲು ಗಳಿಸಿ ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.