ADVERTISEMENT

ಬೆಂಗಳೂರಿಗೆ ಮರಳಿದ ಮಯಂಕ್: ವಿಮಾನದಲ್ಲಿ ನೀರೆಂದು ಭಾವಿಸಿ ಸೇವಿಸಿದ್ದು ಬ್ಲೀಚ್?

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
<div class="paragraphs"><p>ಬುಧವಾರ ಅಗರ್ತಲಾದ ಆಸ್ಪತ್ರೆಯಿಂದ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೊರಟ ಮಯಂಕ್ ಅಗರವಾಲ್&nbsp;</p></div>

ಬುಧವಾರ ಅಗರ್ತಲಾದ ಆಸ್ಪತ್ರೆಯಿಂದ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೊರಟ ಮಯಂಕ್ ಅಗರವಾಲ್ 

   

–ಪಿಟಿಐ ಚಿತ್ರ

ಬೆಂಗಳೂರು: ತ್ರಿಪುರಾದ ಅಗರ್ತಲಾದಲ್ಲಿ ಮಂಗಳವಾರ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ನೀರಿನಂತಿದ್ದ ದ್ರವವನ್ನು ಸೇವಿಸಿ ಅಸ್ವಸ್ಥರಾಗಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಂಕ್ ಅಗರವಾಲ್ ಬುಧವಾರ ಬೆಂಗಳೂರಿಗೆ ತಲುಪಿದರು.

ADVERTISEMENT

ಅವರು ವಿಮಾನದಲ್ಲಿ ಸ್ವಚ್ಛತೆಗಾಗಿ ಬಳಸುವ ‘ಬ್ಲೀಚ್‌ ದ್ರಾವಣ’ವನ್ನು ಮಯಂಕ್ ಸೇವಿಸಿರಬಹುದು ಎಂದು ಹೇಳಲಾಗುತ್ತಿದೆ. ವಿಮಾನದಲ್ಲಿ ಸ್ವಚ್ಛತೆಯ ನಂತರ ಈ ದ್ರಾವಣದ ಬಾಟಲಿಯನ್ನು  ಸಿಬ್ಬಂದಿಯು ಮರೆತು ಆಸನದ ಮುಂದಿದ್ದ ಪೌಚ್‌ನಲ್ಲಿ ಬಿಟ್ಟು ಹೋಗಿರಬಹುದು ಎಂದೂ ಮೂಲಗಳು ಹೇಳಿವೆ.

ಮಂಗಳವಾರ ದೆಹಲಿ ಮೂಲಕ ಸೂರತ್‌ಗೆ ತೆರಳಲು ಕರ್ನಾಟಕ ತಂಡದೊಂದಿಗೆ ಮಯಂಕ್ ಕೂಡ ವಿಮಾನವೇರಿದ್ದರು.  ಟೇಕಾಫ್‌ ಆಗುವ ಸ್ವಲ್ಪ ಹೊತ್ತಿನ ಮುಂಚೆ ನೀರೆಂದು ತಿಳಿದು ದ್ರವ ಸೇವಿಸಿದ ಮಯಂಕ್ ಬಾಯಿ ಮತ್ತು ಗಂಟಲು ಉರಿದಿದ್ದರಿಂದ ಕೂಡಲೇ ಉಗುಳಿದರು. ಸಹಾಯಕ್ಕಾಗಿ ಕೂಗಿದರು. ವಿಮಾನದ ಸಿಬ್ಬಂದಿಯು ಧಾವಿಸಿತು. ಸಹ ಆಟಗಾರರು, ತಂಡದ ನೆರವು ಸಿಬ್ಬಂದಿ ಕೂಡ ಮಯಂಕ್ ಬಳಿ ಹೋದರು. ಮಯಂಕ್ ಅವರ ಬಾಯಿಯಲ್ಲಿ ಬೊಬ್ಬೆಗಳೆದ್ದು ನೋವಿನಿಂದ ಒದ್ದಾಡಿದರು. ಕೂಡಲೇ ಅಂಬುಲೇನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಐಎಲ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಪ್ರಾಣಾಪಾಯವಿಲ್ಲ, ಚೇತರಿಸಿಕೊಳ್ಳಲು ಸಮಯ ಬೇಕಾಗಬಹುದು ಎಂದು ತಿಳಿಸಿದರು.

‘ವಿಮಾನ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸ್ಚಚ್ಛತಾ ರಾಸಾಯನಿಕ ಸಾಮಗ್ರಿಗಳನ್ನು ಖರೀದಿಸುತ್ತವೆ. ದೊಡ್ಡ ಕ್ಯಾನ್‌ಗಳಲ್ಲಿ ಬರುವ ದ್ರಾವಣವನ್ನು ಚಿಕ್ಕ ಬಾಟಲಿಗಳಲ್ಲಿ ತುಂಬಿಕೊಂಡು ಬಳಸುತ್ತಾರೆ. ಅವು ನೋಡಲು ನೀರಿನ ಬಾಟಲಿಗಳಂತೆಯೇ ಇರುತ್ತವೆ. ಬಹುಶಃ ಸಿಬ್ಬಂದಿಯು ಬಿಟ್ಟು ಹೋಗಿದ್ದು ಮಯಂಕ್ ಸೀಟ್‌ನಲ್ಲಿತ್ತು. ಅವರು ನೀರೆಂದು ಭಾವಿಸಿ ಕುಡಿದಿದ್ದಾರೆ’ ಎಂದು ಮಯಂಕ್ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಬಾಟಲಿ ಮತ್ತು ಅದರಲ್ಲಿದ್ದ ದ್ರಾವಣವನ್ನು ಪರೀಕ್ಷೆಗೆ ಕಳಿಸಲಾಗಿದೆ. ಪೊಲೀಸ್ ದೂರು ದಾಖಲಾಗಿದೆ. 

‘ಈಗ ನನಗೆ ಅರಾಮ ಎನಿಸುತ್ತಿದೆ. ಬೆಂಗಳೂರಿಗೆ ಮರಳಲು ಸಿದ್ಧವಾಗುತ್ತಿರುವೆ. ನನಗಾಗಿ ಪ್ರಾರ್ಥಿಸಿದ, ಪ್ರೀತಿಸಿದ ಮತ್ತು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು‘ ಎಂದು ಮಯಂಕ್ ‘ಎಕ್ಸ್‘ನಲ್ಲಿ ಸಂದೇಶ ಹಾಕಿದ್ದಾರೆ. ಅದರೊಂದಿಗೆ ಆಸ್ಪತ್ರೆ ಬೆಡ್‌ನಲ್ಲಿರುವ ತಮ್ಮ ಚಿತ್ರವನ್ನೂ ಲಗತ್ತಿಸಿದ್ದಾರೆ.

ಪ್ರಜಾವಾಣಿಯ ಸಹೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ಗೆ ವಾಟ್ಸ್‌ ಅಪ್ ಮೂಲಕ ಪ್ರತಿಕ್ರಿಯಿಸಿರುವ ಮಯಂಕ್, ‘ನೀರಿನಂತೆ ಕಂಡಿತು‘ ಎಂದಿದ್ದಾರೆ.

‘ಈ ಘಟನೆ ನಡೆದಾಗಿನಿಂದ ಮಯಂಕ್ ಅವರಿಗೆ ಏನೂ ಸೇವಿಸಲು ಆಗುತ್ತಿಲ್ಲ. ಸೇವನೆ ಮಾಡಿದ ರಾಸಾಯನಿಕ ದ್ರವದಿಂದಾಗಿ ಬಾಯಿಯಲ್ಲಿ ಬಹಳಷ್ಟು ಗಾಯವಾಗಿದೆ. ಅವರಿಗೆ  ಐ.ವಿ (ಅಭಿದಮನಿಯ ಪೈಪ್) ಹಾಕಲಾಗಿದೆ. ಅವರಿಗೆ ಬಹಳಷ್ಟು ಔಷಧಿಗಳನ್ನು ನೀಡಲಾಗಿದೆ. ಆರೋಗ್ಯ ಸ್ಥಿರವಾಗಿದೆ. ಬೆಂಗಳೂರಿಗೆ ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದು ಮನೆಗೆ ಮರಳುತ್ತಿದ್ದಾರೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸೂರತ್‌ಗೆ ತೆರಳಿದ ತಂಡ

ಕರ್ನಾಟಕ ತಂಡವು ಬುಧವಾರ ಮಧ್ಯಾಹ್ನ ದೆಹಲಿಯಿಂದ ಸೂರತ್‌ ತಲುಪಿತು. ಇದೇ ಶುಕ್ರವಾರ ಇಲ್ಲಿ ನಡೆಯುವ ರೈಲ್ವೆಸ್ ವಿರುದ್ಧದ ಪಂದ್ಯದಲ್ಲಿ ತಂಡವು ಆಡಲಿದೆ.

ಮಯಂಕ್ ಅಸ್ವಸ್ಥರಾಗಿದ್ದರಿಂದಾಗಿ ಅಗರ್ತಲಾದಿಂದ ದೆಹಲಿಗೆ ಹೋಗುವ ವಿಮಾನವು ಸುಮಾರು ನಾಲ್ಕು ತಾಸು ತಡವಾಯಿತು. ಅದರಿಂದಾಗಿ ದೆಹಲಿಯಿಂದ ಸೂರತ್‌ಗೆ ಹೋಗುವ ವಿಮಾನ ಆಟಗಾರರಿಗೆ ತಪ್ಪಿತು. ಆದ್ದರಿಂದ ತಂಡದ ಆಟಗಾರರು  ಮಂಗಳವಾರ ರಾತ್ರಿ ದೆಹಲಿಯಲ್ಲಿ ಉಳಿದುಕೊಂಡಿತು.  ತಂಡದ ತರಬೇತಿ ಮತ್ತು ನೆರವು ಸಿಬ್ಬಂದಿಯೂ ಸೂರತ್ ತಲುಪಿದ್ದಾರೆ.

ನಿಕಿನ್‌ ಜೋಸ್‌ ಹಂಗಾಮಿ ನಾಯಕ?

ಸೂರತ್ ಪಂದ್ಯದಲ್ಲಿ ಮಯಂಕ್ ಅನುಪಸ್ಥಿತಿಯಲ್ಲಿ  ನಿಕಿನ್ ಜೋಸ್ ಅವರು ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.   ಈ ಋತುವಿಗೆ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಮೈಸೂರು ಪಂದ್ಯದಲ್ಲಿ ಗಾಯಗೊಂಡಿದ್ದ  ಅನುಭವಿ ಆಟಗಾರ ಮನೀಷ್ ಪಾಂಡೆ ಚೇತರಿಸಿಕೊಂಡು ಸೂರತ್‌ಗೆ ಬಂದಿಳಿದಿದ್ದಾರೆ. ಬುಧವಾರ ತಂಡದೊಂದಿಗೆ ಸೇರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.