ADVERTISEMENT

ಮಗು ಜನಿಸಿದ ಸಂಭ್ರಮ: ವಿಶ್ಲೇಷಕಿ ಮಯಂತಿಗೆ ವಿಶ್ರಾಂತಿ

ವಿಕ್ರಂ ಕಾಂತಿಕೆರೆ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST
ಕಳೆದ ವರ್ಷ ವಿಶ್ವಕಪ್ ಪ್ರದರ್ಶನ ಅಭಿಯಾನದ ಸಂದರ್ಭದಲ್ಲಿ ಟ್ರೋಫಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಮಯಂತಿ ಲ್ಯಾಂಗರ್ –ಪ್ರಜಾವಾಣಿ ಚಿತ್ರ
ಕಳೆದ ವರ್ಷ ವಿಶ್ವಕಪ್ ಪ್ರದರ್ಶನ ಅಭಿಯಾನದ ಸಂದರ್ಭದಲ್ಲಿ ಟ್ರೋಫಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಮಯಂತಿ ಲ್ಯಾಂಗರ್ –ಪ್ರಜಾವಾಣಿ ಚಿತ್ರ   

ಸ್ಟಾರ್ ಸ್ಪೋರ್ಟ್‌ ಮತ್ತುಮಯಂತಿ ಲ್ಯಾಂಗರ್...

ಕ್ರಿಕೆಟ್ ಜಗತ್ತಿನಲ್ಲಿ ಕೆಲವು ವರ್ಷಗಳಿಂದ ಅವಿನಾಭಾವ ಸಂಬಂಧ ಈ ಎರಡು ಹೆಸರುಗಳಿಗೆ ಇತ್ತು. ಐಸಿಸಿ ಆಯೋಜಿಸುವ ಟೂರ್ನಿಗಳಿಂದ ಹಿಡಿದು ಇಂಡಿಯನ್ ಪ್ರೀಮಿಯರ್ ಲೀಗ್‌ನಂಥ (ಐಪಿಎಲ್) ಕ್ರಿಕೆಟ್ ಲೀಗ್‌ಗಳ ವರೆಗೆ ವಿಶ್ಲೇಷಕಿ ಮತ್ತು ನಿರೂಪಕಿ ಮಯಂತಿ ಲ್ಯಾಂಗರ್ ಅವರ ಸಾನ್ನಿಧ್ಯ ಇಲ್ಲದೆ ಸ್ಟಾರ್ ಸ್ಪೋರ್ಟ್ಸ್ ಚಾಲನಲ್‌ನ ನೇರ ಪ್ರಸಾರ ಅಥವಾ ವಿಶೇಷ ಕಾರ್ಯಕ್ರಮಗಳು ಇರಲಿಲ್ಲ.

ಆದರೆ ಈ ಬಾರಿ ಐಪಿಎಲ್‌ಗಾಗಿ ಸಜ್ಜಾದ ಈ ಚಾನಲ್‌ನ ತಂಡದಲ್ಲಿ ಮಯಂತಿ ಲ್ಯಾಂಗರ್ ಹೆಸರು ಕಾಣದೇ ಇದ್ದಾಗ ಅನೇಕರಲ್ಲಿ ಅಚ್ವರಿ ಉಂಟಾಗಿತ್ತು. ಕೆಲವರು ಕಥೆಗಳನ್ನೂ ಹೆಣೆದರು. ವೀಕ್ಷಕರ ಸಂದೇಹಗಳಿಗೆ ಈಗ ಮಯಂತಿ ಅವರೇ ಸ್ವಯಂ ಉತ್ತರ ನೀಡಿದ್ದಾರೆ. ತಾಯಿಯಾದ ಕಾರಣ ಈ ಬಾರಿ ಸ್ಟಾರ್ ಸ್ಪೋರ್ಟ್ಸ್‌ನ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಐಪಿಎಲ್ ಆರಂಭಕ್ಕೆ ಮೂರು ದಿನ ಇದ್ದಾಗ ಸ್ಟಾರ್ ಸ್ಪೋರ್ಟ್ಸ್ ಈ ಬಾರಿ ವೀಕ್ಷಕ ವಿವರಣೆ, ವಿಶ್ಲೇಷಣೆ ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವವರ ಪಟ್ಟಿ ಬಿಡುಗಡೆ ಮಾಡಿತ್ತು. ಸುರೇನ್ ಸುಂದರಂ, ಕಿರಾ ನಾರಾಯಣನ್‌, ಸುಹೇಲ್ ಚಾಂದೊಕ್, ನಶ್‌ಪ್ರೀತ್ ಕೌರ್‌, ಸಂಜನಾ ಗಣೇಶನ್‌, ಜತಿನ ಸಪ್ರು, ತಾನ್ಯಾ ಪುರೋಹಿತ್‌, ಅನಂತ್ ತ್ಯಾಗಿ, ಧೀರಜ್‌ ಜುನೇಜ ಮತ್ತು ನೆರೋಳಿ ಮೀಡೊ ಅವರು ಈ ಬಾರಿ ತಂಡದಲ್ಲಿ ಇರುತ್ತಾರೆ ಎಂದು ತಿಳಿಸಿತ್ತು.

ಇದರ ಬೆನ್ನಲ್ಲೇ ಮಯಂತಿ ಲ್ಯಾಂಗರ್ ಮತ್ತು ಸ್ಟಾರ್ ಟಿವಿ ಜೊತೆಗಿನ ಸಂಬಂಧ ಹದೆಗೆಟ್ಟಿದೆ ಎಂಬ ಅರ್ಥ ಸೂಸುವ ಹೇಳಿಕೆಗಳು ಹೊರಬಿದ್ದಿದ್ದವು. ಐಪಿಎಲ್ ಆರಂಭದ ಹಿಂದಿನ ದಿನ ಟ್ವೀಟ್ ಮಾಡಿರುವ ಮಯಂತಿ ಪತಿ, ಕ್ರಿಕೆಟ್ ಆಟಗಾರ ಸ್ಟುವರ್ಟ್ ಬಿನ್ನಿ ಮತ್ತು ಪುಟಾಣಿ ಮಗುವಿನ ಜೊತೆ ಇರುವ ಚಿತ್ರವನ್ನು ಅಪ್‌ಲೋಡ್ ಮಾಡಿ, ’ಆರು ವಾರಗಳ ಹಿಂದೆ ನಮಗೆ ಗಂಡು ಮಗು ಜನಿಸಿದ್ದು ಬದುಕು ಹೊಸ ಹಾದಿಯತ್ತ ಹೊರಳಿದೆ’ ಎಂದು ಹೇಳಿಕೊಂಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಆಡಳಿತ ಮತ್ತು ತಂಡಕ್ಕೆ ಕೃತಜ್ಞತೆಗಳನ್ನೂ ಅರ್ಪಿಸಿರುವ ಮಯಂತಿ ‘ನಾನು ಗರ್ಭಿಣಿ ಎಂದು ತಿಳಿದಾಗ ಅವರ ಕಾರ್ಯಕ್ರಮಕ್ಕೆ ಬದಲಿ ವ್ಯವಸ್ಥೆ ಮಾಡಿಕೊಂಡು ನನಗೆ ಬೆಂಬಲ ನೀಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮನೆಯಲ್ಲೇ ಕುಳಿತು ಸ್ಟಾರ್ ಸ್ಲೋರ್ಟ್ಸ್‌ ಚಾನಲ್‌ನಲ್ಲಿ ವೀಕ್ಷಿಸಿ ಖುಷಿಪಡಲಿದ್ದೇನೆ. ಚಾನಲ್‌ನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ತಂಡಕ್ಕೆ ಶುಭವಾಗಲಿ’ ಎಂದು ಹೇಳಿದ್ದಾರೆ.

’ಐಪಿಎಲ್‌ ನಿಗದಿಯಂತೆ ಈ ಹಿಂದೆಯೇ ನಡೆದಿದ್ದರೆ ಗರ್ಭಿಣಿಯಾಗಿದ್ದರೂ ನನಗೆ ಪಾಲ್ಗೊಳ್ಳಲು ಚಾನಲ್‌ನವರು ಅವಕಾಶ ನೀಡುತ್ತಿದ್ದರು. ಈಗ ಮಗು ಮತ್ತು ಪತಿಯೊಂದಿಗೆ ಮನೆಯಲ್ಲೇ ಇದ್ದೇನೆ. ಐದು ವರ್ಷಗಳಿಂದ ಸ್ಟಾರ್ ಸ್ಪೋರ್ಟ್ಸ್‌ನವರು ನನ್ನ ಬದುಕನ್ನೇ ಬದಲಾಯಿಸಿದ್ದಾರೆ. ಅನೇಕ ಅಪರೂಪದ ಅವಕಾಶಗಳನ್ನು ನೀಡಿದ್ದಾರೆ. ನನಗೆ ಅಗತ್ಯವಿದ್ದಾಗಲೆಲ್ಲ ಕಾರ್ಯಕ್ರಮಗಳಿಂದ ದೂರ ಉಳಿಯಲು ಅನುಮತಿ ನೀಡಿದ್ದಾರೆ.

ಇಲ್ಲಸಲ್ಲದ ಮಾತುಗಳನ್ನು ಆಡಿದವರನ್ನು ತರಾಟೆಗೆ ತೆಗೆದುಕೊಂಡಿರುವ ಮಯಂತಿ ‘ಕೆಲವರು ಊಹಾಪೋಹಗಳ ಆಧಾರದ ಮೇಲೆ ಏನೇನೋ ಹೇಳಿದರು. ಕೆಲವರು ವಾಸ್ತವ ತಿಳಿಯಲು ಪ್ರಯತ್ನಿಸಿದರು. ಯಾರು ಏನೇ ಹೇಳಲಿ,ಸ್ಟಾರ್‌ ಸ್ಪೋರ್ಟ್ಸ್ ಚಾನಲ್‌ ನನ್ನ ಕುಟುಂಬವಿದ್ದಂತೆ’ ಎಂದಿದ್ದಾರೆ.

ಐಪಿಎಲ್‌ ಟೂರ್ನಿಯನ್ನು ಮೊದಲು ಮಾರ್ಚ್ 29ರಿಂದ ಮೇ 24ರ ವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್–19ರಿಂದಾಗಿ ಮುಂದೂಡಲಾಯಿತು. ಕೊನೆಗೆ ಯುಎಇಯಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.